ADVERTISEMENT

ಸಂಸದರ ಕಚೇರಿ ಎದುರು 14ರಿಂದ ಅಹೋರಾತ್ರಿ ಧರಣಿ: ಕೆ.ನೀಲಾ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 13:46 IST
Last Updated 9 ಮಾರ್ಚ್ 2024, 13:46 IST
ಕೆ.ನೀಲಾ
ಕೆ.ನೀಲಾ   

ಕಲಬುರಗಿ: ‘ಕೇಂದ್ರ ಸರ್ಕಾರವು ಬಾಕಿ ಉಳಿಸಿಕೊಂಡಿರುವ ನರೇಗಾ ಕೂಲಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ನರೇಗಾ ಸಂಬಂಧಿತ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 14 ಹಾಗೂ 15ರಂದು ನಗರದಲ್ಲಿರುವ ಸಂಸದರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಪ್ರಾಂತ ರೈತ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಈ ಹೋರಾಟ ನಡೆಯಲಿದೆ’ ಎಂದು ವಿವರಿಸಿದರು.

‘ಈಗ ಚುನಾವಣೆ ಬಂದಿದೆ ಎಂದು ರೈಲು ಓಡಿಸಿ, ಜನರ ಮನಸ್ಸಿನಲ್ಲಿ ಕೋಮು ಭಾವನೆ ಬಿತ್ತಿ ಮತ ಗಳಿಸುವ ಹುನ್ನಾರವನ್ನು ಬಿಡಬೇಕು. ನಿಮಗೆ ನಿಜವಾಗಿಯೂ ಜನರ ಕಾಳಜಿ ಇದ್ದರೆ, ದುಡಿದು ಕೂಲಿ ಹಣವಿಲ್ಲದೇ ಕುಳಿತಿರುವ ಕಾರ್ಮಿಕರ ನರೇಗಾ ಕೂಲಿ ಬಾಕಿಯನ್ನು ಕೊಡಿಸಬೇಕು. ಸಂಸದ ಉಮೇಶ ಜಾಧವ ಅವರು ಚುನಾವಣೆಗೂ ಮುನ್ನ ಬಾಕಿ ಬಿಡುಗಡೆಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈಗ ಓಡಿಸುತ್ತಿರುವ ವಿಶೇಷ ಹಾಗೂ ವಂದೇ ಭಾರತ್‌ ರೈಲು ಬಡವರಿಗಾಗಿ ಬಿಟ್ಟಿದ್ದಲ್ಲ. ಉಳ್ಳವರಿಗಾಗಿ ಓಡಿಸಲಾಗುತ್ತಿದೆ. ಇತರ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ, ಇವುಗಳ ಟಿಕೆಟ್‌ ದರ ಬಹಳ ಹೆಚ್ಚಿದೆ’ ಎಂದು ದೂರಿದರು.

ಕರ್ನಾಟಕ ಪ್ರಾಂತ ರೈತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಕಲಬುರಗಿ ಜಿಲ್ಲೆಯ 4 ಲಕ್ಷ ಜನರು ನರೇಗಾ ಉದ್ಯೋಗ ಚೀಟಿಗಳನ್ನು ಹೊಂದಿದ್ದರೂ, ಕೇವಲ 500ಕ್ಕೂ ಕಡಿಮೆ ಜನರಿಗೆ ಪೂರ್ಣ ಪ್ರಮಾಣದ ಮಾನವದಿನಗಳ ಉದ್ಯೋಗ ನೀಡಲಾಗಿದೆ. ಜಿಲ್ಲೆಯಲ್ಲಿ 2023ರ ಡಿ.1ರಿಂದ ಈ ತನಕ ನರೇಗಾ ಕೂಲಿ ಹಣ ಪಾವತಿಯಾಗಿಲ್ಲ. ಒಟ್ಟು ₹16.54 ಕೋಟಿ ಕೂಲಿ ಪಾವತಿ ಬಾಕಿಯಿದ್ದು, ಇದರ ಬಿಡುಗಡೆಗೆ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಜನವಾದಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪದ್ಮಿನಿ ಕಿರಣಗಿ, ಮೇಘರಾಜ ಕಠಾರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.