ಕಲಬುರಗಿ: ಪರಿಶಿಷ್ಟ ಜಾತಿ, ಪಂಗಡ ವಿದ್ಯಾ ಸಂಸ್ಥೆಗಳ ಕುಂದು ಕೊರತೆಗಳ ಕುರಿತು ಸೆ.17 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾ ಸಂಸ್ಥೆಗಳ ಹಕ್ಕು ರಕ್ಷಣೆ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಬಾಬುರಾವ ಮೂಡಬಿ, ‘ಎಸ್‌ಸಿ, ಎಸ್ಟಿ ವಿದ್ಯಾಸಂಸ್ಥೆಗಳ ಶಾಲಾ ಶಿಕ್ಷಕರ ವೇತನಗಳಿಗೆ ಆರ್ಥಿಕ ಮಿತ್ಯವ್ಯಯವನ್ನು ಸಡಿಲಿಸಬೇಕು. ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ತಕ್ಷಣ ತುಂಬಲು ಅವಕಾಶ ನೀಡಬೇಕು. ಆರ್ಥಿಕ ಮಿತಿಯನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
‘1987–88ರಿಂದ 1994–95ರ ಅವಧಿಗೆ ಸರ್ಕಾರ ಸಹಾಯಾನುದಾನ ಮಂಜೂರಾತಿ ಆದೇಶ ಹೊರಡಿಸಿದ್ದು, ಆ ಅವಧಿಯಲ್ಲಿ ಉಳಿದಿರುವಂತಹ ಕೆಲವು ಶಾಲಾ ಕಾಲೇಜುಗಳು ಸಹಾಯಾನುದಾನ ಮಂಜೂರಾತಿಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಹಡಪದ ಸಮಾಜ ಸಮಸ್ಯೆಗಳ ಚರ್ಚಿಸಿ’
ಕಲಬುರಗಿ: ನಗರದಲ್ಲಿ ಮಂಗಳವಾರ ನಡೆಯುವ ಸಂಪುಟ ಸಭೆಯಲ್ಲಿ ಜಿಲ್ಲಾ ಹಡಪದ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ₹50 ಲಕ್ಷ ಅನುದಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಸೇವಾ ಸಂಘ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ, ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿರುವ ಹಡಪದ ಅಪ್ಪಣ್ಣ ಪೀಠದ ಕಟ್ಟಡ ಸ್ಥಾಪಿಸಲು ₹1 ಕೋಟಿ ಅನುದಾನ ನೀಡಬೇಕು. ಹಡಪದ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.