ಕಮಲಾಪುರ: ‘ಪಟ್ಟಣದ ಮಧ್ಯ ಭಾಗದಲ್ಲಿರುವ ಗುಡ್ಡ ತೆರವುಗೊಳಿಸಿದರೆ ಸುಮಾರು 10 ಎಕರೆ ಸರ್ಕಾರಿ ಜಮೀನು ದೊರೆಯಲಿದ್ದು ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ’ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸುಮಾರು 100 ಅಡಿ ಎತ್ತರವಿರುವ ಈ ಗುಡ್ಡ ಪಟ್ಟಣದ ಹೃದಯಭಾಗದಲ್ಲಿದೆ. ಸರ್ಕಾರಿ ಗಾಂವಠಾಣಾ ಆಗಿದ್ದು, ವೃತ್ತಾಕಾರದಲ್ಲಿದ್ದು, ಗುಡ್ಡದ ಮೇಲೆ ಒಂದು ಮಜಾರ ಹಾಗೂ ಬಸವಣ್ಣನ ಕಟ್ಟೆ ಇದೆ. ಗುಡ್ಡದ ಬದಿಯಲ್ಲಿ ಸುತ್ತಲೂ ಗಿಡಗಳು, ಜಾಲಿ ಕಂಟಿ ಬೆಳೆದಿದೆ. ಅಲ್ಲಲ್ಲಿ ಕಲ್ಲು ಬಂಡೆಗಳಿವೆ. ಗುಡ್ಡದ ತಳಭಾಗದ ಇಕ್ಕೆಲದಲ್ಲೆ ನೂರಾರು ಮನೆಗಳಿವೆ. ಸಾವಿರಾರು ಜನ ವಾಸವಾಗಿದ್ದಾರೆ. ಈ ಗುಡ್ಡ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. ಗುಡ್ಡ ಕುಸಿದರೆ ನೂರಾರು ಜನರ ಜೀವ ಹಾನಿಯಾಗುವ ಸಂಭವವಿದೆ. ಈಗಾಗಲೆ ಅಲ್ಲಲ್ಲಿ ಸ್ವಲ್ಪ ಭೂ ಕುಸಿತ ಕಂಡು ಬಂದಿದೆ. ‘ಮಳೆ ಹೆಚ್ಚಾದರೆ ಭೂ ಕುಸಿತ ಉಂಟಾಗಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅನಾಹುತಗಳಾಗುವ ಸಂಭವವಿದೆ’ ಎಂಬುದು ಇಲ್ಲಿಯ ನಿವಾಸಿಗಳ ಆತಂಕವಾಗಿದೆ. ಗುಡ್ಡದ ಬದಿಯಲ್ಲಿರುವ ಬಂಡೆಗಳು ಉರುಳುವ ಸಾಧ್ಯತೆ ಇದೆ. ಇದರಿಂದಲೂ ಅನಾಹುತ ಕಾದಿದೆ ಎನ್ನುತ್ತಾರೆ’ ಸಾರ್ವಜನಿಕರು.
ಕಮಲಾಪುರ ತಾಲ್ಲೂಕು ಕೇಂದ್ರವಾಗಿದೆ. ಮಿನಿ ವಿಧಾನಸೌಧ ಸೇರಿದಂತೆ ಇತರೆ ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಜಾಗದ ಕೊರತೆ ತೀವ್ರವಾಗಿ ಕಾಡುತ್ತಿದೆ. ಪಟ್ಟಣದಿಂದ ಎರಡ್ಮೂರು ಕಿ.ಮೀ ದೂರದಲ್ಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿದರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಪಟ್ಟಣದ ಮಧ್ಯಭಾಗದಲ್ಲಿರುವ ಈ ಗುಡ್ಡದ ಮಣ್ಣು ಬೆರೆಡೆ ಸ್ಥಳಾಂತರಿಸಬೇಕು. ಎರಡೂ ಬದಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಸುಮಾರು 10 ಎಕರೆ ಸರ್ಕಾರಿ ಜಮೀನು ದೊರೆಯಲಿದ್ದು ಕಚೇರಿ ಸ್ಥಾಪನೆಗೆ ಅನುಕೂಲವಾಗುತ್ತದೆ. ವಿವಿಧೆಡೆ ಬಡಾವಣೆಗಳು ಆಗಿರುವದರಿಂದ ಈಗಾಗಲೇ ಕಮಲಾಪುರ ಮೂಲ ಪಟ್ಟಣದಲ್ಲಿನ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದಾರೆ. ಗುಡ್ಡದ ಹಿಂಬದಿಯ ಪ್ರದೇಶದಲ್ಲಿ ಜನಸಂದಣಿ ಕಡಿಮೆಯಾಗಿದೆ. ಕೆಲವೇ ದಿನಗಳಲ್ಲಿ ಮುಖ್ಯ ಪಟ್ಟಣ ಹಾಳು ಹಂಪೆಯಂತಾಗುವ ಸಾಧ್ಯತೆ ಇದೆ. ಮೂಲ ಪಟ್ಟಣದ ಅಸ್ತಿತ್ವ ಉಳಿಸುವುದರ ಜೊತೆಗೆ ಲಭ್ಯ ಇರುವ ಸರ್ಕಾರಿ ಜಮೀನಿನ ಸದುಪಯೋಗಕ್ಕೆ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಗುಡ್ಡ ತೆರವುಗೊಳಿಸಲು ಸೂಕ್ತ ಯೋಜನೆ ಹಾಕಿಕೊಳ್ಳಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸೂಕ್ತ ಅನುದಾನ ಒದಗಿಸಲು ಮನವಿ ಸಲ್ಲಿಸಬೇಕು’ ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಗುಡ್ಡದ ಸುತ್ತಲೂ ಮನೆಗಳಿವೆ ಭೂ ಕುಸಿತದಿಂದ ಮನೆಗಳ ಮೇಲೆ ಗುಡ್ಡ ಕಡಿದು ಬೀಳುವ ಸಾಧ್ಯತೆ ಇದೆ. ಅನಾಹುತಗಳು ಘಟಿಸುವ ಮುನ್ನ ಎಚ್ಚರಗೊಳ್ಳವುದು ಉತ್ತಮಅಶೋಕ ಸುಗೂರ ವಿಕಾಸ ಅಕಾಡೆಮಿ ಅಧ್ಯಕ್ಷ
ಗುಡ್ಡ ತೆರೆವುಗೊಳಿಸಿದರೆ ತಾಲ್ಲೂಕು ಮಟ್ಟದ ಕಚೇರಿ ಸ್ಥಾಪನೆಗೆ ಜಾಗ ದೊರೆಯುತ್ತದೆ. ಜನ ಸಂದಣಿ ಹೆಚ್ಚಾಗಿ ಕಮಲಾಪುರ ಮೂಲ ಪಟ್ಟಣಕ್ಕೆ ಕಳೆ ಬರುತ್ತದೆಗುರುರಾಜ ಮಾಟೂರ ಕಾಂಗ್ರೆಸ್ ಮುಖಂಡ
- ಗುಡ್ಡ ತೆರವುಗೊಳಿಸಲು ತಜ್ಞರಿಂದ ತಾಂತ್ರಿಕ ಒಪ್ಪಿಗೆ ಪಡೆಯಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಸಾರ್ವಜನಿಕರೊಂದಿಗೆ ಚರ್ಚಿಸಲಾಗುವುದುಮೋಸಿನ್ ಅಹಮ್ಮದ ತಹಶೀಲ್ದಾರ್
ಗುಡ್ಡ ಗ್ರಾಮ ಠಾಣಾ ಆಗಿದ್ದು ಪಟ್ಟಣ ಪಂಚಾಯಿತಿಗೆ ಒದಗಿಸುವಂತೆ ತಹಶೀಲ್ದಾರ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣ ಪಂಚಾಯಿತಿ ಕಚೇರಿ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದುಶಾಂತಪ್ಪ ಹಾದಿಮನಿ ಪ.ಪಂ. ಮುಖ್ಯಾಧಿಕಾರಿ
ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಕ್ಕೆ ಗುಡ್ಡ ತೆರವುಗೊಳಿಸುವ ಪ್ರಸ್ತಾವನೆ ಸಲ್ಲಿಸುತ್ತೇನೆಬಸವರಾಜ ಮತ್ತಿಮಡು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.