ADVERTISEMENT

ಆಳಂದ: ಉರುಸ್‌ಗೆ ಗಂಧದ ಮೆರವಣಿಗೆಯ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 4:55 IST
Last Updated 14 ಅಕ್ಟೋಬರ್ 2024, 4:55 IST
ಆಳಂದ ಪಟ್ಟಣದಲ್ಲಿ ಲಾಡ್ಲೆ ಮಶಾಕ್‌ ದರ್ಗಾದ ಉರುಸ್‌ ಪ್ರಯುಕ್ತ ಸಂದಲ್‌ ಮೆರವಣಿಗೆ ಸಂಭ್ರಮದಿಂದ ಜರುಗಿತು
ಆಳಂದ ಪಟ್ಟಣದಲ್ಲಿ ಲಾಡ್ಲೆ ಮಶಾಕ್‌ ದರ್ಗಾದ ಉರುಸ್‌ ಪ್ರಯುಕ್ತ ಸಂದಲ್‌ ಮೆರವಣಿಗೆ ಸಂಭ್ರಮದಿಂದ ಜರುಗಿತು   

ಆಳಂದ: ಪ್ರಸಿದ್ಧ ಸೂಫಿ ಸಂತ ಹಜರತ್‌ ಲಾಡ್ಲೆ ಮಶಾಕ್‌ ಮಕದೂಮ್‌ ಅನ್ಸಾರಿ ಅವರ 669ನೇ ಉರುಸ್‌ ಸಂಭ್ರಮಕ್ಕೆ ಭಾನುವಾರ ಸಂಜೆ ಸಂದಲ್‌ (ಗಂಧೋತ್ಸವ) ಮೆರವಣಿಗೆ ಮುನ್ನುಡಿ ಬರೆಯಿತು.

ಲಾಡ್ಲೆ ಮಶಾಕ್‌ರ ಸಾವಿರಾರು ಅನುಯಾಯಿಗಳು–ಭಕ್ತರು ಸಂದಲ್‌ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಪಟ್ಟಣದ ಮುಖ್ಯಬೀದಿಗಳಲ್ಲಿ ತಡರಾತ್ರಿ ತನಕ ಸಂದಲ್‌ ಮೆರವಣಿಗೆ ಸಾಗಿತ್ತು.

ಸಂದಲ್‌ ಮೆರವಣಿಗೆ ಆರಂಭಕ್ಕೂ ಮುನ್ನ ಪಟ್ಟಣದ ಹೊರವಲಯದ ತಾಲ್ಲೂಕು ಆಡಳಿತ ಭವನದಲ್ಲಿ ಕವ್ವಾಲಿ ಕಾರ್ಯಕ್ರಮ ಜರುಗಿತು. ದರ್ಗಾ ಸಮಿತಿಯ ಮೌಲಾನಾಗಳಿಂದ ಸಮಾ ಕಾರ್ಯಕ್ರಮ, ಕುರಾನ್‌ ಪಠಣ ಮತ್ತು ಪ್ರಾರ್ಥನೆ, ಫಾತೆಹಾ ಖಾನಿ ನಡೆಯಿತು.

ADVERTISEMENT

ನಂತರ ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ಸಂದಲ್‌ ಹೊತ್ತು ಪಟ್ಟಣದ ಹಳೆಯ ತಹಶೀಲ್ದಾರ್‌ ಕಚೇರಿವರೆಗೂ ಸರ್ಕಾರಿ ವಾಹನದಲ್ಲಿ ತಂದರು. ಇಲ್ಲಿ ದರ್ಗಾ ಸಮಿತಿಯ ಅಧ್ಯಕ್ಷ ಆಸೀಪ್‌ ಅನ್ಸಾರಿ, ಮೋಹಿಜ್‌ ಕಾರಬಾರಿ, ಸಾದತ್‌ ಅನ್ಸಾರಿ ಅವರಿಗೆ ಸಂದಲ್‌ ಹಸ್ತಾಂತರಿಸಲಾಯಿತು.

ಅಲ್ಲಿಂದ ಸಂದಲ್‌ ಮೆರವಣಿಗೆಗೆ ಚಾಲನೆ ದೊರೆಯಿತು. ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಸಾಗಿ ತಡರಾತ್ರಿ ದರ್ಗಾ ತಲುಪಿತು.

ಪಟ್ಟಣದ ಚಕ್ರಿ ಕಟ್ಟಾ ಮಾರ್ಗವಾಗಿ ಲಾಡ್ಲೆ ಮಶಾಕ್‌ರ ದರ್ಗಾವರೆಗೂ ವಿದ್ಯುತ್‌ ದೀಪಾಲಂಕಾರ, ಸೊಲ್ಲಾಪುರ, ಹೈದರಾಬಾದ್‌ನಿಂದ ಬಂದಿದ್ದ ವಿವಿಧ ವಾದ್ಯಗಳ ವಾದನ, ಕಲಾಮೇಳಗಳ ಪ್ರದರ್ಶನ ಹಾಗೂ ಯುವಕರ ಕುಣಿತ ಸಂದಲ್‌ ಮೆರವಣಿಗೆಗೆ ಮೆರುಗು ತುಂಬಿತು.

ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ, ಮುಖಂಡರಾದ ಸಿದ್ದರಾಮ ಪ್ಯಾಟಿ, ಶಂಕರರಾವ ದೇಶಮುಖ, ಮಲ್ಲಪ್ಪ ಹತ್ತರಕಿ, ಮಜರ್‌ ಹುಸೇನ್‌, ದತ್ತರಾಜ ಗುತ್ತೇದಾರ, ಅಹ್ಮದ್‌ಅಲಿ ಚುಲಬುಲ್‌, ಸಂಜಯ ನಾಯಕ, ರೇವಣಪ್ಪ ನಾಗೂರೆ, ದಯಾನಂದ ಶೇರಿಕಾರ, ಚಂದ್ರಕಾಂತ ಹತ್ತರಕಿ, ರಾಜಶೇಖರ ಪಾಟೀಲ, ಲಕ್ಷ್ಮಣ ಝಳಕಿ, ದಿಲೀಪ ಕ್ಷೀರಸಾಗರ, ಸಲಾಂ ಸಗರಿ, ಮೌಲಾ ಮುಲ್ಲಾ, ಫಿರ್ದೋಶಿ ಅನ್ಸಾರಿ, ಫಿರಾಸತ್‌ ಅನ್ಸಾರಿ, ಅಮ್ಜದ್‌ಅಲಿ ಕರ್ಜಗಿ, ಸುಲೇಮಾನ್‌ ಮುಗುಟ, ಇಕ್ಬಾಲ್‌ ಬಿಲಗುಂದಿ, ಸಜ್ಜಾದ್‌ ಅಲಿ ಇನಾಂದಾರ, ಗುಲಾಬಹುಸೇನ್‌ ಟಪ್ಪೆವಾಲೆ, ಇಕ್ರಾಂ ಅನ್ಸಾರಿ, ವಹೀದ್‌ ಜರ್ಧಿ, ತಯ್ಯಬ್‌ಅಲಿ ಶೇಖ್‌ ಸೇರಿದಂತೆ ವಿವಿಧ ಸಮಾಜದ ಗಣ್ಯರು ಭಾಗವಹಿಸಿದ್ದರು.

ಡಿವೈಎಸ್ಪಿ ಗೋಪಿ ಆರ್‌., ಸಿಪಿಐ ಪ್ರಕಾಶ ಯಾತನೂರು, ಪಿಐ ಮಹಾದೇವ ಪಂಚಮುಖಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ದಾರಿ ಮಧ್ಯದ ಪ್ರಾರ್ಥನಾ ಮಂದಿರದ ಮುಂದೆ ಯಾತ್ರಿಕರಿಗಾಗಿ ನೀರು, ತಂಪುಪಾನೀಯ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಆಳಂದ ಪಟ್ಟಣದಲ್ಲಿ ಲಾಡ್ಲೆ ಮಶಾಕ್‌ ದರ್ಗಾದ ಉರುಸ್‌ ಅಂಗವಾಗಿ ಭಾನುವಾರ ಗಣ್ಯರು ಸಂದಲ್‌ ಹೊತ್ತು ಮೆರವಣಿಗೆಯಲ್ಲಿ ಸಾಗಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.