ADVERTISEMENT

‘ವಾಲ್ಮೀಕಿ ನಿಗಮದ ಹಗರಣ, ಅಗತ್ಯ ಬಿದ್ದರೆ ಸಿಬಿಐಗೆ’

ವಿರೋಧ ಪಕ್ಷದವರು ಕೇಳಿದರೆಂದು ರಾಜೀನಾಮೆ ಕೊಡಬೇಕಾ? ಪ್ರಿಯಾಂಕ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 6:26 IST
Last Updated 2 ಜೂನ್ 2024, 6:26 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಬಗ್ಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮೂಲಕ ತನಿಖೆಗೆ ಆದೇಶಿಸಿದ್ದು, ಪ್ರಾಥಮಿಕ‌‌ ವರದಿ ನೀಡಲಿದೆ. ಅಗತ್ಯ ಬಿದ್ದರೆ ಸಿಬಿಐಗೂ ಕೊಡೋಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ನಗರದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ‌ ನೀಡಬೇಕಾ? ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯಮಂತ್ರಿ ಅವರ ಪರಮಾಧಿಕಾರವಾಗಿದೆ’ ಎಂದರು. 

ಕೆಆರ್‌ಐಡಿಎಲ್ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ‌‘ಗುತ್ತಿಗೆದಾರರ ಡೆತ್ ನೋಟ್‌ನಲ್ಲಿ ಕೆಲವೊಂದು ವೈಯಕ್ತಿಕ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ. ಘಟನೆಯ ಹಿನ್ನೆಲೆಯ ಕುರಿತಂತೆ ತನಿಖೆಗೆ ಮೂವರು ಅಧಿಕಾರಿಗಳ ತಂಡ ರಚನೆ ಮಾಡಲಾಗಿದ್ದು, ತನಿಖೆ‌‌ ನಡೆಯಲಿದೆ’ ಎಂದರು.

ADVERTISEMENT

ಸಂವಿಧಾನದ 371 (ಜೆ) ಕಲಂ ವಿಚಾರಕ್ಕೆ‌ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆದ ಕೆಲ ಗೊಂದಲಗಳನ್ನು ನಾವು ಸರಿಪಡಿಸಿದ್ದೇವೆ. ಕಲ್ಯಾಣ ಕರ್ನಾಟಕ‌ ಭಾಗಕ್ಕೆ ಆದ ಐತಿಹಾಸಿಕ‌ ಅನ್ಯಾಯ ಹಾಗೂ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಉದ್ದೇಶದಿಂದ ಸಂವಿಧಾನಕ್ಕೆ‌ ತಿದ್ದುಪಡಿ ತಂದು‌ ಆರ್ಟಿಕಲ್ 371 (ಜೆ) ಸೇರಿಸಲಾಗಿದೆ. ಹಾಗಾಗಿ, ಇದನ್ನು‌ ವಿರೋಧಿಸುವವರು ನಮ್ಮ‌ ಭಾಗದ ಅಭಿವೃದ್ಧಿಯನ್ನು ರಾಜ್ಯದ ಇತರೆ ಭಾಗದೊಂದಿಗೆ ಹೋಲಿಕೆ ಮಾಡಿ‌ ನೋಡಲಿ. ಈ ಬಗ್ಗೆ ಈಗಾಗಲೇ ಕಾನೂನು ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ’ ಎಂದರು.

ಬಿರುಗಾಳಿ ಮಳೆಗೆ ಬೆಳೆ ಹಾನಿಯಾಗಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳ ಸಭೆ ನಡೆಸುತ್ತೇನೆ. ಬೀಜದ ಕೊರತೆ ಇಲ್ಲ ಎಂದು ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ ಅವರ ಪಕ್ಷ ಅಧಿಕಾರದಲ್ಲಿದ್ದಾಗ ಪಿಎಸ್‌ಐ ಅಕ್ರಮ ನಡೆದಿತ್ತಲ್ಲ ಆಗ ಏಕೆ ಮಾತನಾಡಲಿಲ್ಲ? ಏಕೆ ದಾಖಲೆ ಒದಗಿಸಲಿಲ್ಲ? ಈಗ ಇದ್ದಕ್ಕಿದ್ದಂತೆ ಪರಿಶಿಷ್ಟರ ಮೇಲೆ ಯಾಕೆ ಪ್ರೀತಿ ಹೆಚ್ಚಾಗಿದೆ?
–ಪ್ರಿಯಾಂಕ್ ಖರ್ಗೆ, ಸಚಿವ

ಕೇಂದ್ರದಲ್ಲಿ ‘ಇಂಡಿಯಾ’ ಮಿತ್ರ ಪಕ್ಷಗಳು ಅಧಿಕಾರಕ್ಕೆ‌ ಬರಲಿವೆ. ರಾಜ್ಯದಲ್ಲಿ 18ಕ್ಕೂ ಅಧಿಕ‌ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಪ್ರಿಯಾಂಕ್ ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಚಂದ್ರಶೇಖರ ಪಾಟೀಲ, ಶಾಸಕ ಎಂ.ವೈ. ಪಾಟೀಲ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಜರ್ ಅಲಂ ಖಾನ್,‌ ಡಾ.ಕಿರಣ ದೇಶಮುಖ್ ಸೇರಿದಂತೆ ಹಲವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.