ADVERTISEMENT

ಕಲಬುರಗಿ: ದರ ಪೈಪೋಟಿಗಿಳಿದ ತರಕಾರಿ, ಮಳೆ ಬಿಡದಿದ್ದರೆ ಮತ್ತಷ್ಟು ದುಬಾರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:56 IST
Last Updated 4 ಜುಲೈ 2024, 5:56 IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಟೊಮ್ಯಾಟೊ ಖರೀದಿಸುತ್ತಿರುವ ಗ್ರಾಹಕರು
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಟೊಮ್ಯಾಟೊ ಖರೀದಿಸುತ್ತಿರುವ ಗ್ರಾಹಕರು   

ಕಲಬುರಗಿ: ಬೆಲೆಯೇರಿಕೆಯ ಬಿಸಿ ನಿಧಾನವಾಗಿ ತರಕಾರಿ ಮಾರುಕಟ್ಟೆಗೂ ತಟ್ಟುತ್ತಿದ್ದು, ಈರುಳ್ಳಿ ಹೊರತುಪಡಿಸಿದರೆ ಪ್ರತಿ ತರಕಾರಿಯ ದರವೂ  ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದೆ.

ನಿತ್ಯ ಒಗ್ಗರಣೆಗೆ ಬಳಸುವ ಈರುಳ್ಳಿ ಕೆಜಿಗೆ ₹40ರ ಆಸುಪಾಸಿನಲ್ಲಿದ್ದರೆ, ಟೊಮ್ಯಾಟೊ ದರ ₹60ಕ್ಕೇರಿದೆ. ಇನ್ನು ಹಸಿಮೆಣಸಿನಕಾಯಿ ಗ್ರಾಹಕರಿಗೆ ಮತ್ತಷ್ಟು ಖಾರವಾಗಿದ್ದು ಕೆಜಿಗೆ ₹100 ತಲುಪಿದೆ. ಹಾಗಲಕಾಯಿ, ಹೀರೆಕಾಯಿ, ಬದನೆಕಾಯಿ, ದೊಣ್ಣಮೆಣಸಿನಕಾಯಿ ಹೀಗೆ ಪಲ್ಯಕ್ಕಾಗಿ ನೀವು ಯಾವುದೇ ತರಕಾರಿ ತೆಗೆದುಕೊಂಡರೂ ಕೆಜಿಗೆ ₹80 ದರ ನಿಗದಿಯಾಗಿದೆ.

ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಮೀನಿನಲ್ಲಿ ಬೆಳೆದು ನಿಂತ ತರಕಾರಿ ಹಾಳಾಗುತ್ತಿದೆ. ಹೀಗಾಗಿ ಸಗಟು ದರ ಏರಿಕೆಯಾದ್ದರಿಂದ, ಚಿಲ್ಲರೆ ಮಾರುಕಟ್ಟೆಯಲ್ಲೂ ತರಕಾರಿ ಬೆಲೆ ಗಗನಮುಖಿಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಸಮೀರ್‌. ‌

ADVERTISEMENT

ನಿಂಬೆಹಣ್ಣು ಒಂದಕ್ಕೆ ₹3 ರಿಂದ ₹4ಕ್ಕೆ ಸಿಗುತ್ತಿದ್ದರೆ, ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನ ದರ ₹160 ಇದೆ. ಇನ್ನು ಸೊಪ್ಪಿನತ್ತ ಸುಳಿದರೆ ಮೆಂತೆ ಸೂಡಿಗೆ ₹10 ಇದೆ. ಹಸಿ ಮೆಣಸಿನಕಾಯಿ ಖಾರ ಎಂದು ಒಣಮೆಣಸಿನಕಾಯಿಯತ್ತ ಹೊರಳಿದರೆ ಬ್ಯಾಡಗಿ ಘಾಟು ರಾಚುತ್ತದೆ. ಕೆಜಿಗೆ ₹300 ದರವಿದೆ. ಗುಂಟೂರು ಕಾಯಿ ₹140 ಇದೆ.

ಇನ್ನು ಬೇಳೆ ಸಾಂಬಾರ್ ಜೊತೆ ಒಂದೆರಡು ನುಗ್ಗೇಕಾಯಿ ಹಾಕೋಣವೆಂದರೆ ಕೆಜಿಗೆ ₹200. ಈರುಳ್ಳಿ ಬದಲು ಬೆಳ್ಳುಳ್ಳಿ ಬಳಸೋಣವೆಂದರೆ ಅದೂ ₹200. ಮಾರುಕಟ್ಟೆಯಲ್ಲಿ ಕಾಯಿಪಲ್ಯೆ ರೇಟ್‌ ಕೇಳಿ ಕೇಳಿ ಮುಂದಕ್ಕೋಗುವಂತಾಗಿದೆ ಎನ್ನುತ್ತಾರೆ ಗೃಹಿಣಿ ಜ್ಯೋತಿ. ಊಟವಾದ ಮೇಲೆ ಬಾಯಿ ಕೆಂಪು ಮಾಡಿಕೊಳ್ಳೋಣವೆಂದು ವೀಳ್ಯದೆಲೆಗೆ ಕೈಹಾಕಿದರೆ 100ಕ್ಕೆ ₹60. 

ಮಳೆ ಬಿಡುವು ಕೊಟ್ಟರೆ ಮಾರುಕಟ್ಟೆಗೆ ಆವಕ ಹೆಚ್ಚಾಗಿ ದರ ಇಳಿಯುತ್ತದೆ. ಮಳೆ ನಿರಂತರವಾಗಿ ಮುಂದುವರಿದರೆ ತರಕಾರಿ ದರ ಕೆಜಿಗೆ ₹100 ದಾಟಿದರೂ ಅಚ್ಚರಿಯಿಲ್ಲ
ಜಾಕೀರ್‌ ವ್ಯಾಪಾರಿ
ತರಕಾರಿ ದರ ಎಷ್ಟೇ ಹೆಚ್ಚಾದರೂ ತೆಗೆದುಕೊಳ್ಳಲೇಬೇಕು. ಅರ್ಧ ಕೆಜಿ ಒಯ್ಯುತ್ತಿದ್ದವರು ಈಗ ಪಾವ್‌ ಕೆಜಿ ತೆಗೆದುಕೊಳ್ಳುತ್ತಿದ್ದೇವೆ. ವಾರಕ್ಕೊಮ್ಮೆ ಬರುತ್ತಿದ್ದವರು ಈಗ ಎರಡು ಬಾರಿ ಬರುವಂತಾಗಿದೆ
ಜ್ಯೋತಿ ಗ್ರಾಹಕಿ
ತರಕಾರಿ;ದರ(ಕೆ.ಜಿ.ಗೆ)
ಈರುಳ್ಳಿ;₹40 ಟೊಮ್ಯಾಟೊ;₹80 ಬೆಳ್ಳುಳ್ಳಿ;₹200 ಹಸಿಮೆಣಸಿನಕಾಯಿ;100 ಒಣ ಮೆಣಸಿನಕಾಯಿ(ಗುಂಟೂರು);140 ಒಣ ಮೆಣಸಿನಕಾಯಿ(ಬ್ಯಾಡಗಿ);₹300 ಹಾಗಲಕಾಯಿ;₹80 ಹೀರೆಕಾಯಿ;₹80 ಡೊಣ್ಣಮೆಣಸಿನಕಾಯಿ;₹80 ಆಲೂಗಡ್ಡೆ;₹40 ಹುಣಸೆಹಣ್ಣು;₹160 ಸೌತೆಕಾಯಿ;₹60

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.