ADVERTISEMENT

ಕಲಬುರಗಿ | ಕಡಿಮೆ ಬೆಲೆಗೆ ಹೊಸ ವಾಹನ ಕೊಡಿಸುವುದಾಗಿ ಆಮಿಷ: ₹28 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 5:30 IST
Last Updated 11 ಸೆಪ್ಟೆಂಬರ್ 2024, 5:30 IST
<div class="paragraphs"><p>ಸಾಂಕೇತಿ ಚಿತ್ರ&nbsp;</p></div>

ಸಾಂಕೇತಿ ಚಿತ್ರ 

   

ಕಲಬುರಗಿ: ಕಡಿಮೆ ಬೆಲೆಗೆ ಹೊಸ ವಾಹನಗಳನ್ನು ಕೊಡಿಸುವುದಾಗಿ ನಂಬಿಸಿದ ಬೀದರ್ ಮೂಲದ ಮೂವರು ಫೈನಾನ್ಸ್ ಕಂಪನಿಯ ಸಾಲ ವಸೂಲಿಗಾರರು ಗ್ರಾಹಕರಿಂದ ₹28.20 ಲಕ್ಷ ಪಡೆದು ಬೇರೆಯವರ ಹೆಸರಿನಲ್ಲಿದ್ದ ವಾಹನಗಳನ್ನು ಕೆಲವರಿಗೆ ಕೊಟ್ಟು ವಂಚಿಸಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಶಿವನಗರ ದೊಡ ತಾಂಡಾ ನಿವಾಸಿ ಕುಮಾರ ಚವ್ಹಾಣ್ ನೀಡಿದ ದೂರಿನ ಅನ್ವಯ ಬೀದರ್‌ನ ಇರಾನಿ ಗಲ್ಲಿಯ ತಾಲಿಬ್ ಹುಸೇನ್, ಸೋಹೆಲ್ ತಾಲಿಬ್ ಮತ್ತು ಇಜಾಜ್ ಅಲಿ ಅವರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಂಡಾ ನಿವಾಸಿ ಕಿಶನ್ ದಾಮ್ಲಾ ಅವರು ವರ್ಷದ ಹಿಂದೆ ಈ ಮೂವರು ಆರೋಪಿಗಳನ್ನು ಕರೆದುಕೊಂಡು ಬಂದಿದ್ದರು. ಫೈನಾನ್ಸ್ ಸೀಸರ್‌ಗಳೆಂದು ಪರಿಚಯಿಸಿಕೊಂಡ ಮೂವರು, ಕಡಿಮೆ ಬೆಲೆಗೆ ಹೊಸ ಟ್ರ್ಯಾಕ್ಟರ್, ಬೊಲೆರೊ ಪಿಕಪ್, ಸರಕು ವಾಹನ, ಬೈಕ್‌, ಸ್ಕೂಟಿಗಳನ್ನು ಕೊಡಿಸುವುದಾಗಿ ನಂಬಿಸಿದ್ದರು.

ಈ ಮೂವರ ಮಾತು ನಂಬಿದ ಕುಮಾರ ₹40 ಸಾವಿರ, ದೀಪಕ್ ಚವ್ಹಾಣ್ ₹5.50 ಲಕ್ಷ, ರಾಜು ರಾಠೋಡ ₹ 13 ಲಕ್ಷ, ಮದನ ರಾಠೋಡ ₹50 ಸಾವಿರ, ಯಾದಗಿರಿ ತಾಲ್ಲೂಕಿನ ಯರಗೋಳದ ಗೌಸ್‌ ಚೌದ್ರಿ ₹2 ಲಕ್ಷ, ಮುದಿಯಪ್ಪ ₹ 30 ಸಾವಿರ, ವಿಶ್ವನಾಥ ₹50 ಸಾವಿರ, ಲಿಂಗಣ್ಣ ಮಾನೆಗಾರ ₹4 ಲಕ್ಷ ಮತ್ತು ಮೌನೇಶ ದೇವಣ್ಣ ₹2 ಲಕ್ಷ ಸೇರಿ ಒಟ್ಟು ₹28.20 ಲಕ್ಷ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇರೆಯವರ ಹೆಸರಿನಲ್ಲಿನ ಹೊಸ ವಾಹನಗಳನ್ನು ಖರೀದಿಸಿ, ಸೆಟ್ಲ್‌ಮೆಂಟ್ ಮಾಡಿಕೊಡುವುದಾಗಿ ಆ ವಾಹನಗಳ ಮಾಲೀಕರಿಗೂ ವಂಚಿಸಿದ್ದಾರೆ. ಹಣ ನೀಡದವರ ಪೈಕಿ ಕೆಲವರಿಗೆ ಮಾತ್ರ ವಾಹನಗಳನ್ನು ಕೊಟ್ಟಿದ್ದು, ಉಳಿದವರಿಗೆ ವಾಹನ ಮತ್ತು ಹಣ ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಫೈನಾನ್ಸ್‌ ಕಂಪನಿಯವರು ಬಂದು ವಾಹನಗಳ ಮೇಲೆ ಸಾಲ ಇದೆ ಎಂದು ವಾಹನಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ವಾಹನ ಖರೀದಿಸಿದ್ದವರ ಫೋನ್ ಕರೆಯನ್ನು ಆರೋಪಿಗಳು ಸ್ವೀಕರಿಸುತ್ತಿರಲಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.