ಕಲಬುರಗಿ: ಮಿಂಚಿನ ಡ್ರಿಬ್ಲಿಂಗ್, ನಿಖರವಾದ ಪಾಸ್, ಎದುರಾಳಿ ತಂಡದ ಫೌಲ್‌ಗಳ ಲಾಭವೆಂದೇ ಪರಿಗಣಿಸುವ ಫ್ರೀ ಥ್ರೋನಲ್ಲಿ ಚೆಂಡನ್ನು ನೇರವಾಗಿ ಹೂಪರ್‌ಗೆ(ಗೋಲ್) ಹಾಕುವ ಮೂಲಕ ಆಟಗಾರರು ಬಿಸಿಲನ್ನೂ ಲೆಕ್ಕಿಸದೇ ಅಂಗಣದಲ್ಲಿ ಮಿಂಚು ಹರಿಸಿದರು.
ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹಾಗೂ ಅಕ್ಕಮಹಾದೇವಿ ಕಾಲೊನಿಯ ಬ್ಯಾಸ್ಕೆಟ್‌ಬಾಲ್ ಅಂಗಣದಲ್ಲಿ ಆಯೋಜಿಸಿರುವ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು, ಚೆಂಡನ್ನು ಬಾಸ್ಕೆಟ್ ಹಾಕುವ ಮೂಲಕ ಸೋಮವಾರ ಚಾಲನೆ ನೀಡಿದರು.
ಬೆಳಿಗ್ಗೆ 8ರಿಂದಲೇ ಆರಂಭವಾದ ಟೂರ್ನಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ ಆಟಗಾರರು ತಮ್ಮ ಕೌಶಲ ಮೆರೆದರು.
ಕೆಲ ತಂಡಗಳು ತಮ್ಮ ಆಟದ ನೈಪುಣ್ಯ ಪ್ರದರ್ಶಿಸಿದರೆ, ಕೆಲವು ತಂಡಗಳು ಪಾಯಿಂಟ್ಸ್ ಗಳಿಸಲು ಪರದಾಡಿದವು. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಮಂಗಳವಾರ(ಅ.22) ನಡೆಯಲಿವೆ. ಟೂರ್ನಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಾಲಕಿಯರ 23 ಹಾಗೂ ಬಾಲಕರ 29 ತಂಡಗಳು ಪಾಲ್ಗೊಂಡಿವೆ.
ಬಾಲಕರ ತಂಡಗಳ ಫಲಿತಾಂಶ: ಬೀದರ್ ವಿರುದ್ಧ ರಾಯಚೂರು ತಂಡಕ್ಕೆ 31–45ರಿಂದ ಗೆಲುವು, ಕೊಪ್ಪಳ ವಿರುದ್ಧ ಶಿವಮೊಗ್ಗ 5–19ರಿಂದ ಗೆಲುವು, ಬಾಗಲಕೋಟೆ ವಿರುದ್ಧ ಕೋಲಾರ ತಂಡಕ್ಕೆ 24–33ರಿಂದ ಗೆಲುವು, ಹಾಸನಕ್ಕೆ ಚಿಕ್ಕಮಗಳೂರು ವಿರುದ್ಧ 39–17ರಿಂದ ಗೆಲುವು, ವಿಜಯಪುರಕ್ಕೆ ಬೆಂಗಳೂರು ಗ್ರಾಮೀಣ ವಿರುದ್ಧ 31–12ರಿಂದ ಗೆಲುವು, ಮಂಡ್ಯ ತಂಡಕ್ಕೆ ವಿಜಯನಗರ ವಿರುದ್ಧ 24–6ರಿಂದ ಗೆಲುವು, ಬೆಂಗಳೂರು ದಕ್ಷಿಣ ತಂಡಕ್ಕೆ ಉಡುಪಿ ವಿರುದ್ಧ 53–25ರಿಂದ ಗೆಲುವು, ಚಾಮರಾಜನಗರಕ್ಕೆ ಬೆಳಗಾವಿ ವಿರುದ್ಧ 28–19ರಿಂದ ಗೆಲುವು, ಮೈಸೂರು ತಂಡಕ್ಕೆ ಬಳ್ಳಾರಿ ವಿರುದ್ಧ 36–13ರಿಂದ ಗೆಲುವು, ರಾಮನಗರವು ಕಾರವಾರದ ವಿರುದ್ಧ 25–4ರಿಂದ ಗೆಲುವು ಸಾಧಿಸಿದರೆ, ಹಾವೇರಿ ವಿರುದ್ಧ ದಾವಣಗೆರೆ ತಂಡವು 20–39ರಿಂದ ಗೆಲುವು ಸಾಧಿಸಿತು.
ಬಾಲಕಿಯರ ತಂಡಗಳ ಫಲಿತಾಂಶ: ಕೊಡಗು ತಂಡಕ್ಕೆ ರಾಮನಗರ ವಿರುದ್ಧ 27–18ರಿಂದ ಗೆಲುವು, ದಾವಣಗೆರೆಗೆ ಬೀದರ್ ವಿರುದ್ಧ 45–6ರಿಂದ ಗೆಲುವು, ಮೈಸೂರು ತಂಡಕ್ಕೆ ಮಂಗಳೂರು ವಿರುದ್ಧ 45–11ರಿಂದ ಗೆಲುವು, ಧಾರವಾಡಕ್ಕೆ ಚಿಕ್ಕಮಗಳೂರು ವಿರುದ್ಧ 20–7ರಿಂದ ಗೆಲುವು, ಕೋಲಾರಕ್ಕೆ ಬಾಗಲಕೋಟೆ ವಿರುದ್ಧ 26–6ರಿಂದ, ಬೆಂಗಳೂರು ದಕ್ಷಿಣ ತಂಡ ಮಂಡ್ಯದ ವಿರುದ್ಧ 28–25ರಿಂದ ಗೆಲುವು ಸಾಧಿಸಿತು. ಬೆಂಗಳೂರು ಉತ್ತರ ತಂಡದ ವಿರುದ್ಧ ಹಾವೇರಿ ತಂಡಕ್ಕೆ ಒಂದೇ ಒಂದು ಬ್ಯಾಸ್ಕೆಟ್ ಹಾಕಲು ಸಾಧ್ಯವಾಗಲಿಲ್ಲ.
ಆರಂಭದಲ್ಲೇ ಹೊರಬಿದ್ದ ಕಲಬುರಗಿ ತಂಡಗಳು: ಕಲಬುರಗಿ ಬಾಲಕ–ಬಾಲಕಿಯರ ತಂಡಗಳು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದವು.
ಕಲಬುರಗಿ ಬಾಲಕರ ತಂಡವು ಧಾರವಾಡ ತಂಡದ ಎದುರು 36–21 ಪಾಯಿಂಟ್ಸ್ ಅಂತರದಿಂದ ಪರಾಭವಗೊಂಡರೆ, ಬಾಲಕಿಯರು ರಾಮನಗರ ತಂಡದ ಎದುರು ಹೆಚ್ಚಿನ ಅಂತರದಲ್ಲಿ ಸೋಲನುಭವಿಸಿದರು. ಎರಡೂ ತಂಡಗಳಲ್ಲೂ ತರಬೇತಿ ಮತ್ತು ಕೌಶಲ, ಅಭ್ಯಾಸದ ಕೊರತೆ ಕಂಡು ಬಂದಿತು. ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ, ರೆಫರಿಗಳಾದ ಶಂಕರ ಸೂರೆ, ಆಸೀಫ್ ಖಾನ್, ಭೀಮಾಶಂಕರ ಮಠಪತಿ, ಪ್ರವೀಣ ಪುಣೆ, ಧನಂಜಯ ಬೆನ್ನೂರ, ವಿಜಯಕುಮಾರ ಸಿಂದಗಿ, ಬಿ.ಎನ್.ಪಾಟೀಲ, ಚಂದ್ರಕಾಂತ ಶಿರೋಳಿ, ಸುರೇಶ ಪವಾರ, ಚಂದ್ರಕಾಂತ, ಗೋಪಾಲ, ದೇವೇಂದ್ರ, ಶಿವಕುಮಾರ ಸಜ್ಜನ, ಸನ್ನಿ, ರಮೇಶ, ಶಾಹೀದ್ ಇತರರು ಹಾಜರಿದ್ದರು.
ಫೈನಲ್ ಪಂದ್ಯ ಇಂದು
ಬಾಲಕರ ವಿಭಾಗದಲ್ಲಿ ವಿಜಯಪುರ, ಬೆಂಗಳೂರು ನಾರ್ತ್, ಮೈಸೂರು ತಂಡಗಳು ಸೆಮಿಫೈನಲ್‌ಗೇರಿದವು. 4ನೇ ಕ್ವಾರ್ಟ್ ಫೈನಲ್ ಪಂದ್ಯವು ಮಂಡ್ಯ–ದಾವಣಗೆರೆ ತಂಡಗಳ ನಡುವೆ ನಡೆಯಲಿದ್ದು, ಪಂದ್ಯವು ಮಂಗಳವಾರ ಬೆಳಿಗ್ಗೆ ನಡೆಯಲಿದೆ.
ಬೆಂಗಳೂರು ನಾರ್ತ್ ತಂಡವು, ಬೆಂಗಳೂರು ಸೌತ್ ವಿರುದ್ಧ 77–74ರಿಂದ ಗೆದ್ದರೆ, ವಿಜಯಪುರವು ರಾಯಚೂರು ವಿರುದ್ಧ 47–15ರಿಂದ ಗೆಲುವು ಸಾಧಿಸಿತು. ಮೈಸೂರು ಹಾಸನ ತಂಡದ ವಿರುದ್ಧ 68–35ರಿಂದ ಗೆಲುವು ಸಾಧಿಸಿ 4ರ ಘಟ್ಟ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.