ADVERTISEMENT

ನಿಮ್ಮನ್ನು ನೀವು ಗೆದ್ದರಷ್ಟೇ ಸಾಧನೆ ಸಾಧ್ಯ: ಪೊಲೀಸ್‌ ಕಮಿಷನರ್ ಚೇತನ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:43 IST
Last Updated 12 ಜನವರಿ 2024, 15:43 IST
ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಬುರಗಿ ಪೊಲೀಸ್‌ ಕಮಿಷನರ್ ಚೇತನ್‌ ಆರ್‌. ಮಾತನಾಡಿದರು. ಮಹೇಶ್ವರಾನಂದ ಮಹಾರಾಜ, ಶಾಸಕ ಅಲ್ಲಮಪ್ರಭು ಪಾಟೀಲ, ಸ್ವಾಮಿ ವಿಭಾಕರಾನಂದ ಮಹಾರಾಜ, ಸ್ವಾಮಿ ಚೈತನ್ಯಾನಂದ ಮಹಾರಾಜ, ಮಹಾದೇವಯ್ಯ ಕರದಳ್ಳಿ ಇದ್ದಾರೆ  –ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಬುರಗಿ ಪೊಲೀಸ್‌ ಕಮಿಷನರ್ ಚೇತನ್‌ ಆರ್‌. ಮಾತನಾಡಿದರು. ಮಹೇಶ್ವರಾನಂದ ಮಹಾರಾಜ, ಶಾಸಕ ಅಲ್ಲಮಪ್ರಭು ಪಾಟೀಲ, ಸ್ವಾಮಿ ವಿಭಾಕರಾನಂದ ಮಹಾರಾಜ, ಸ್ವಾಮಿ ಚೈತನ್ಯಾನಂದ ಮಹಾರಾಜ, ಮಹಾದೇವಯ್ಯ ಕರದಳ್ಳಿ ಇದ್ದಾರೆ  –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಸ್ವಾಮಿ ವಿವೇಕಾನಂದರ ಏಳಿ, ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಸಂದೇಶವು ಸಾಧನೆಯ ಸಾರ್ವತ್ರಿಕ ಮಂತ್ರವಾಗಿದೆ’ ಎಂದು ನಗರದ ಪೊಲೀಸ್‌ ಕಮಿಷನರ್ ಚೇತನ್ ಆರ್‌. ಹೇಳಿದರು.

ನಗರದ ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಯು ಶಿಕ್ಷಣ ಇಲಾಖೆ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದಲ್ಲಿ ಬೆಳಿಗ್ಗೆ 6 ಗಂಟೆಗೆ ಏಳಲು ರಾತ್ರಿ ಅಲಾರಾಂ ಇಡುತ್ತೀರಿ. ಬೆಳಿಗ್ಗೆ ಅಲಾರಾಂ ಹೊಡೆದಾಗ ನೀವು ಎದ್ದು ಓದಿನಲ್ಲಿ ತೊಡಗಿದರೆ ಜೀವನದಲ್ಲಿ ಮುಂದೆ ಬರುತ್ತೀರಿ ಎಂದರ್ಥ. ಅಲಾರಾಂ ಬಂದ್‌ ಮಾಡಿ ಮತ್ತೆ ಮಲಗಿದರೆ, ನಿಮ್ಮ ಪ್ರಯತ್ನದಲ್ಲಿ ನೀವು ಮೊದಲ ಸೋಲು ಒಪ್ಪಿದಂತೆ. ನಿಮ್ಮನ್ನು ನೀವು ಗೆಲ್ಲದಿದ್ದರೆ, ಪ್ರಪಂಚದಲ್ಲಿ ಏನನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ’ ಎಂದರು.

ADVERTISEMENT

‘ಯುವಶಕ್ತಿ ಹಾಗೂ ಮುಂದುವರಿದ ತಲೆಮಾರಿನ ಬಗ್ಗೆ ನನಗೆ ನಂಬಿಕೆಯಿದೆ. ಅವರು ಸಮಸ್ಯೆಯನ್ನು ಸಿಂಹದಂತೆ ಎದುರಿಸಬಲ್ಲರು ಎಂದು ವಿವೇಕಾನಂದರು ಹೇಳಿದ್ದರು. ಬರೀ ಜೀನ್ಸ್ ಪ್ಯಾಂಟ್‌ ಧರಿಸಿ, ಕನ್ನಡಕ ಹಾಕಿದರೆ ನಾವು ಮಾಡರ್ನ್ ಜನರೇಷನ್‌ ಆಗಲ್ಲ. ನಮ್ಮ ಯೋಚನೆಗಳು ಆಧುನಿಕರಣವಾಗಬೇಕು. ಎಲ್ಲರೂ ಒಂದೇ, ಎಲ್ಲ ಜಾತಿಯವರೂ ಒಂದೇ. ಬಡವರು–ಶ್ರೀಮಂತರು, ಹೆಣ್ಣು–ಗಂಡು ಎಲ್ಲರೂ ಒಂದೇ ಎಂದು ಅರಿಯುವುದು ಮಾಡರ್ನ್‌ ಜನರೇಷನ್‌ ವ್ಯಾಖ್ಯಾನ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳು ವಿವೇಕಾನಂದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲ್ಯಾಣ ಭಾಗದಲ್ಲಿ 371(ಜೆ) ಕಾಯ್ದೆ ಜಾರಿಯಾಗಿದ್ದು, ವಿಶೇಷ ಮೀಸಲಾತಿ ಸೌಲಭ್ಯ ದೊರೆತಿದೆ. ವಿದ್ಯಾರ್ಥಿಗಳು ಮೊಬೈಲ್‌ ಬಿಟ್ಟು ಓದಿಗೆ ಆದ್ಯತೆ ನೀಡಿದರೆ, ಉನ್ನತ ಹುದ್ದೆಗಳಿಗೆ ಏರಲು ಅವಕಾಶವಿದೆ. ಈ ಮೂಲಕ ಈ ಭಾಗದ ಹಿಂದುಳಿದಿದೆ ಎಂಬ ಹಣೆಪಟ್ಟಿ ಕಳಚಲು ಶ್ರಮಿಸಬೇಕು’ ಎಂದರು.

ಬಿಹಾರದ ಮುಜಾಫರಪುರದ ರಾಮಕೃಷ್ಣ ಮಿಷನ್ ಸೇವಾಶ್ರಮದ ಸ್ವಾಮಿ ವಿಭಾಕರಾನಂದ ಮಹಾರಾಜ, ಕೊಪ್ಪಳದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಚೈತನ್ಯಾನಂದ ಮಹಾರಾಜ ಮಾತನಾಡಿದರು. ಕಲಬುರಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಮಹೇಶ್ವರಾನಂದ ಮಹಾರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಮಿನಿವಿಧಾನಸೌಧದಿಂದ ರಾಮಕೃಷ್ಣ ವಿವೇಕಾನಂದ ಆಶ್ರಮದ ತನಕ ವಿವೇಕಾನಂದ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆ ಬಾಲಕ –ಬಾಲಕಿಯರು ವಿವೇಕಾನಂದರ ವೇಷಭೂಷಣದಲ್ಲಿ ಕಂಗೊಳಿಸಿದರು.

ಪ್ರಯತ್ನಕ್ಕೆ ವಿವೇಕಾನಂದರೇ ಉದಾಹರಣೆ

‘ಎಷ್ಟೇ ಸಮಸ್ಯೆಗಳು ಬರಲಿ ಅವುಗಳ ನಿವಾರಣೆ ಪ್ರಯತ್ನಪಡುವವರಿಗೆ ಆತ್ಮವಿಶ್ವಾಸ ಹೊಂದಿರುವವರಿಗೆ ಪರಮಾತ್ಮನೂ ಸಹಾಯ ಮಾಡುತ್ತಾನೆ. ಪ್ರಯತ್ನಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ’ ಎಂದು ಕೆನರಾ ಬ್ಯಾಂಕ್‌ ನಿವೃತ್ತ ಅಧಿಕಾರಿ ಮಹಾದೇವಯ್ಯ ಕರದಳ್ಳಿ ನುಡಿದರು. ಅತಿಥಿ ಭಾಷಣ ಮಾಡಿದ ಅವರು ‘ಶಕ್ತಿ ಜ್ಞಾನ ಶೀಲ ನಿತ್ಯ ಜೀವನದ ಭಾಗವಾಗಿರಬೇಕು. ಜೊತೆಗೆ ಸತ್ಸಂಗವೂ ಇರಬೇಕು. ಆಗ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯ’ ಎಂದರು.

ದೇಶದ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು ಹಲವರು ಇರಬಹುದು. ಆದರೆ ಅವರೆಲ್ಲ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದರು.
-ಮಹೇಶ್ವರಾನಂದ ಮಹಾರಾಜ, ಅಧ್ಯಕ್ಷರು ರಾಮಕೃಷ್ಣ ವಿವೇಕಾನಂದ ಆಶ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.