ADVERTISEMENT

ತೆಲಂಗಾಣದಲ್ಲಿ ಭ್ರಷ್ಟ ಸರ್ಕಾರ ಕಿತ್ತೊಗೆದ ಮತದಾರರು: ಸಚಿವ ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 9:20 IST
Last Updated 3 ಡಿಸೆಂಬರ್ 2023, 9:20 IST
   

ಕಲಬುರಗಿ: ತೆಲಂಗಾಣದ ಬಿಎಸ್‌ಆರ್ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ದ ಜನ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು 'ನಾನು ಖುದ್ದಾಗಿ ತೆಲಂಗಾಣಕ್ಕೆ ಭೇಟಿ ನೀಡಿದ್ದೇನೆ. 10 ವರ್ಷದ ಕೆಸಿಆರ್ ಆಡಳಿತದಲ್ಲಿ 10 ಹಗರಣಗಳಲ್ಲಿ ₹ 10 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾಲೇಶ್ವರಂ ನೀರಾವರಿ ಯೋಜನೆಯೊಂದರಲ್ಲೇ ₹ 1.50 ಲಕ್ಷ ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಅಲ್ಲಿನ ಜನರೇ ಮಾತ‌ನಾಡಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಜನರು ತೆಲಂಗಾಣ ಉಳಿಯಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ನಮ್ಮ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಕೂಡಾ ತೆಲಂಗಾಣದಲ್ಲಿ ಪ್ರಭಾವ ಬೀರಿವೆ ಎಂದು ಹೇಳಿದ ಪ್ರಿಯಾಂಕ್, ಜನರ ಪರವಾದ ಅಭಿವೃದ್ದಿ ಪರವಾದ ಹಾಗೂ ಆರ್ಥಿಕ ಸ್ಥಿರತೆ ನಿರ್ಮಾಣ ಮಾಡುವ ಯೋಜನೆಗಳನ್ನು ಇಟ್ಟುಕೊಂಡೇ ನಾವು ಛತ್ತೀಸಗಡ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪ್ರಣಾಳಿಕೆ ತಯಾರು ಮಾಡಿದ್ದೇವೆ. ಇದಕ್ಕೆ ಜನರು ಮನ್ನಡೆ ನೀಡಿದ್ದಾರೆ. ಆದರೆ ಬಿಜೆಪಿಯವರು ಧರ್ಮ‌ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ಒಂದೇ ಒಂದು‌ ಜನಪರ ಹಾಗೂ ಆರ್ಥಿಕ‌ ಸಬಲತೆ ಮೂಡಿಸುವ ಕಾರ್ಯಕ್ರಮಗಳು ಇಲ್ಲ ಎಂದರು.

ADVERTISEMENT

ನಾಲ್ಕು ರಾಜ್ಯಗಳ ಈ ಚುನಾವಣೆ ಫಲಿತಾಂಶ ಲೋಕಸಭೆಯ ಚುನಾವಣೆಯ ಮೇಲೆ ಪರಿಣಾಮ ಬೀರದು ಎಂದ ಸಚಿವರು, ಲೋಕಸಭೆ ಚುನಾವಣೆಯಲ್ಲಿಯೂ ಆರ್ಥಿಕ‌ ಸ್ಥಿರತೆ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು‌ ಚುನಾವಣೆ ಎದುರಿಸುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಆಪರೇಷನ್ ಕಮಲದ ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು ಬಿಜೆಪಿಯವರು ಅಧಿಕಾರಕ್ಕಾಗಿ ರಂಗೋಲಿ ಕೆಳಗೆ ನುಗ್ಗುತ್ತಾರೆ. ಹಣಬಲ ತೋಳ್ಬಲ ಬಳಸಿ ಅಧಿಕಾರ‌ ಹಿಡಿಯಲು ಪ್ರಯತ್ನಿಸುತ್ತದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.