ವಾಡಿ: ಹಲಕರ್ಟಿಯ ವೀರಭದ್ರೇಶ್ವರ ರಥೋತ್ಸವ ಬುಧವಾರ ಸಂಜೆ ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆ ನಿಮಿತ್ತ ಕಳೆದ 6 ದಿನಗಳಿಂದ ಆರಂಭವಾಗಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂತಿಮ ಭಾಗವಾಗಿ ಜರುಗಿದ ರಥೋತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಮೆರೆದರು.
ರಥವನ್ನು ಬಗೆಬಗೆಯ ಹೂವುಗಳು, ಛತ್ರಿ, ಚಾಮರಗಳಿಂದ ಸಿಂಗರಿಸಿ ಅಲಂಕರಿಸಲಾಗಿತ್ತು. ಸಂಜೆ 7.20ಕ್ಕೆ ದೇವಸ್ಥಾನ ಸಮಿತಿ ಅಧ್ಯಕ್ಷ ಮುನೀಂದ್ರ ಶಿವಾಚಾರ್ಯರು ರಥಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೂ ಮುನ್ನ ಗ್ರಾಮದ ಚೌಡೇಶ್ವರಿ ದೇವಸ್ಥಾನದಿಂದ ಚೌಡಕಿ ಮೆರವಣಿಗೆ ನಡೆಯಿತು. ದೇಶಮುಖ ಮನೆಯಿಂದ ಮೆರವಣಿಗೆ ಮೂಲಕ ಕುಂಭ ತರಲಾಯಿತು.
ಮಂಗಳವಾರ ತಡರಾತ್ರಿ ದೇವಸ್ಥಾನದ ಆವರಣದಲ್ಲಿ ಭಕ್ತರ ಹರಕೆಯ ಅಗ್ನಿ ಪ್ರವೇಶ ಜರುಗಿತು. ಪೂಜಾರಿಗಳು, ಪುರವಂತರು ಅಗ್ನಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾ ನಂತರ ಅಗ್ನಿ ಪ್ರವೇಶ ಮಾಡಿದ ನಂತರ ಸಾಲಾಗಿ ನಿಂತಿದ್ದ ಭಕ್ತರು ಕೆಂಡ ತುಳಿದು ಭಕ್ತಿ ಸಮರ್ಪಿಸಿದರು.
ಪಟಾಕಿಗಳ ದಟ್ಟ ಹೊಗೆ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿ ಮಹಿಳೆಯರು ಮಕ್ಕಳು ಪರದಾಡಿದರು. ಪ್ರತಿವರ್ಷ ಜಾತ್ರೆಯಲ್ಲಿ ಜೂಜು ಅಡ್ಡೆಗಳು ತಲೆ ಎತ್ತಿ ಜಾತ್ರೆಗೆ ಬಂದ ಭಕ್ತರನ್ನು ಸುಲಿಗೆ ಮಾಡುತ್ತಿದ್ದು ಕಂಡು ಬರುತ್ತಿತ್ತು. ಆದರೆ ಈ ಬಾರಿ ಪೊಲೀಸ್ ಇಲಾಖೆ ಕಠಿಣ ಕ್ರಮದಿಂದ ವೀರಭದ್ರೇಶ್ವರ ಜಾತ್ರೆ ಜೂಜು ಅಡ್ಡೆಗಳಿಂದ ಮುಕ್ತವಾಗಿತ್ತು.
ದೇವಸ್ಥಾನದ ಭಕ್ತರಾದ ದಿ.ದಾನಮ್ಮ ಪುಟ್ಟಪ್ಪ ಮಲೆಬೆನ್ನೂರು ಸ್ಮರಣಾರ್ಥ ಮಲೆಬೆನ್ನೂರಿನ ಬೆನಕೊಂಡಿ ಪರಿವಾರ ಹಾಗೂ ಫರತಾಬಾದಿನ ವಿಜಯಕುಮಾರ ಶಂಕ್ರಣ್ಣ ಸಜ್ಜನ ಕುಟುಂಬದ ವತಿಯಿಂದ ಹಾಗೂ ವೀರಭದ್ರೇಶ್ವರ ದೇವಸ್ಥಾನ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಜಯಪುರ ಶಂಕರ ಮಹಾದೇವಪ್ಪ ಮತ್ತು ವೀರೇಶ ಮಹಾದೇವಪ್ಪ ಹಳಕರ್ಟಿ ಅವರು ರಥೋತ್ಸವಕ್ಕೂ ಮುನ್ನ ಮದ್ದು ಸುಡುವ ಮೂಲಕ ಭಕ್ತಿ ಸಮರ್ಪಿಸಿದರು. ಡಿವೈಎಸ್ಪಿ ಶಂಕರಗೌಡ ಪಾಟೀಲ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐಗಳಾದ ತಿರುಮಲೇಶ ಕುಂಬಾರ, ಶ್ರೀಶೈಲ ಅಂಬಾಟಿ ನೇತೃತ್ವದಲ್ಲಿ ವಾಡಿ, ಚಿತ್ತಾಪುರ, ಶಹಾಬಾದ, ಮಾಡಬೂಳ ಪೊಲೀಸ್ ಠಾಣೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.