ADVERTISEMENT

ವಾಡಿ: ಕಾರ್ಖಾನೆ ದೂಳಿನಿಂದ ಜನರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 4:33 IST
Last Updated 30 ಅಕ್ಟೋಬರ್ 2024, 4:33 IST
   

ವಾಡಿ: ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಹಗಲು ರಾತ್ರಿ ಹೊರಸೂಸುತ್ತಿರುವ ವಿಷಕಾರಿ ದೂಳಿನಿಂದ ವಾಡಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ದೂಳಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುತ್ತಿದ್ದು ಜನರ ಉಸಿರು ಬಿಗಿಯುವಂತೆ ಮಾಡುತ್ತಿದೆ.

ದಶಕಗಳಿಂದ ವಾಡಿ ಪಟ್ಟಣ ನಿವಾಸಿಗಳು ದೂಳು ಮತ್ತು ದುರ್ವಾಸನೆಯಿಂದ ಬೇಸರಗೊಂಡಿದ್ದು ಹಲವು ರೋಗರುಜಿನಗಳಿಂದ ಬಳಲುತ್ತಿದ್ದಾರೆ. ಕಾರ್ಖಾನೆಯ ದೂಳಿನಿಂದ ಸದ್ಯ ವಾಡಿ ವಾಯುಮಾಲಿನ್ಯದ ಹಾಟ್‌ಸ್ಪಾಟ್ ಆಗಿ ಬದಲಾಗಿದೆ.

ಕಾರ್ಖಾನೆಯಲ್ಲಿ ಕಚ್ಚಾ ವಸ್ತುಗಳ ಗ್ರೈಂಡಿಂಗ್, ಮಿಶ್ರಣ, ಪೂರ್ವಭಾವಿಯಾಗಿ ಕಾಯಿಸುವಿಕೆ, ಗೂಡು ಕಾರ್ಯವಿಧಾನಗಳು, ಕ್ಲಿಂಕರ್ ಡಂಪಿಂಗ್ ಮತ್ತು ಸಿಮೆಂಟ್ ಗ್ರೈಂಡಿಂಗ್, ಪೈಪ್‌ಗಳನ್ನು ಏರ್‌ಔಟ್ ಮಾಡುವುದು ಸೇರಿದಂತೆ ಉತ್ಪಾದನೆಯ ಸಮಯದಲ್ಲಿ ಸಿಮೆಂಟ್ ಸ್ಥಾವರಗಳಲ್ಲಿ ಉತ್ಪತ್ತಿಯಾಗುತ್ತಿರುವ ದೂಳು ಸ್ಥಳೀಯ ಜನರ ಗೋಳು ಹೆಚ್ಚಿಸುತ್ತಿದೆ. ದೂಳಿನಲ್ಲಿನ ವಿಷಕಾರಿ ಸೂಕ್ಷ್ಮ ಕಣಗಳು ದೊಡ್ಡ ಮಟ್ಟದ ಅರೋಗ್ಯ ಮತ್ತು ಪರಿಸರ ಸಮಸ್ಯೆ ಉಂಟು ಮಾಡುತ್ತಿವೆ. ಪ್ರತಿನಿತ್ಯ ಸಾರ್ವಜನಿಕರ ಶ್ವಾಸಕೋಶ ಸೇರುತ್ತಿರುವ ಸೂಕ್ಷ್ಮ ಕಣಗಳು ದಿನೇದಿನೇ ಅರೋಗ್ಯ ದುರ್ಬಲಗೊಳಿಸುತ್ತಿವೆ. ಜನರಲ್ಲಿ ಆಸ್ತಮಾ, ಬ್ರಾಂಕೈಟಿಸ್, ಹೃದಯರಕ್ತನಾಳದ ಕಾಯಿಲೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತಿವೆ.

ADVERTISEMENT

‘ದೂಳಿನಿಂದ ಬದುಕೇ ಸರ್ವನಾಶವಾಗುತ್ತಿದೆ. ಆರೋಗ್ಯದಲ್ಲಿ ಏರುಪೇರು, ಹೃದಯಘಾತ, ಶ್ವಾಸಕೋಶ ಕಾಯಿಲೆಗಳು ಹೆಚ್ಚಾಗುತ್ತಿದ್ದು ಕೂಡಲೇ ಸ್ಥಳೀಯರ ಆರೋಗ್ಯ ತಪಾಸಣೆ ನಡೆಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅರ್ಜುನ ದಹಿಹಂಡೆ.

ವಾಡಿ ಪಟ್ಟಣ, ಇಂಗಳಗಿ, ಲಕ್ಷ್ಮೀಪುರವಾಡಿ, ರಾವೂರು, ಕುಂದನೂರು ಸಹಿತ ಹಳ್ಳಿಗಳಿಗೆ ದೂಳು ಪ್ರಸರಣವಾಗುತ್ತಿದ್ದು ಜನರ ನೆಮ್ಮದಿಗೆ ಭಂಗ ಉಂಟಾಗುತ್ತಿದೆ.

ಮಂಗಳವಾರ ಬೆಳಿಗ್ಗೆ ಕಾರ್ಖಾನೆ ಯಿಂದ ದೊಡ್ಡ ಪ್ರಮಾಣದ ದೂಳು ಹೊರಬಂದು ಜನಜೀವನ ಅಸ್ತವ್ಯಸ್ತಗೊಂಡ ಘಟನೆ ಜರುಗಿತು. ಪಟ್ಟಣದಲ್ಲಿ ಸಾರ್ವಜನಿಕರು ಕಿರಿಕಿರಿ ಅನುಭವಿಸಿದ ಜತೆಗೆ ರಸ್ತೆ ಕಾಣಿಸದೆ ಕೆಲ ಕಾಲ ವಾಹನ ಸವಾರರು ಪರದಾಡಿದ ಘಟನೆ ಸಹ ಜರುಗಿತು.

ಜಿಲ್ಲಾಧಿಕಾರಿಗಳೊಂದಿಗೆ ಕೃಷಿ, ಆರೋಗ್ಯ ಇಲಾಖೆಯ ನುರಿತ ಅಧಿಕಾರಿಗಳ ತಂಡ ರಚಿಸಿ ಕಾರ್ಖಾನೆ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಪರಿಶೀಲನೆ ನಡೆಸಿ ದೂಳಿನಿಂದ ಉಂಟಾಗುತ್ತಿರುವ ಅನಾಹುತಗಳ ವರದಿ ಮಾಡಿ ಬಳಿಕ ತಜ್ಞರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.