ADVERTISEMENT

ಚಿಂಚೋಳಿ | ವಕ್ಫ್ ಜಮೀನು: ಆತಂಕದಲ್ಲಿ ನೂರಾರು ರೈತರು

ಜಗನ್ನಾಥ ಡಿ.ಶೇರಿಕಾರ
Published 1 ನವೆಂಬರ್ 2024, 7:26 IST
Last Updated 1 ನವೆಂಬರ್ 2024, 7:26 IST
<div class="paragraphs"><p>ಗಡಿಕೇಶ್ವಾರ ಮತ್ತು ಸುತ್ತಲಿನ ತಾಂಡಾಗಳ ಸಂತ್ರಸ್ತ ರೈತರು ತಮ್ಮ ಅಳಲು ತೋಡಿಕೊಂಡರು</p></div>

ಗಡಿಕೇಶ್ವಾರ ಮತ್ತು ಸುತ್ತಲಿನ ತಾಂಡಾಗಳ ಸಂತ್ರಸ್ತ ರೈತರು ತಮ್ಮ ಅಳಲು ತೋಡಿಕೊಂಡರು

   

ಚಿಂಚೋಳಿ: ತಾಲ್ಲೂಕಿನಲ್ಲಿ ಸಾವಿರಾರು ಎಕರೆ ವಕ್ಫ್ ಜಮೀನು ನೂರಾರು ರೈತರಿಗೆ ಮಂಜೂರಾಗಿದ್ದು, ಈಗ ಆ ಜಮೀನು ಏನಾಗುತ್ತದೆಯೋ ಎಂಬ ಆತಂಕದಲ್ಲಿ ರೈತರು ಕಾಲ ಕಳೆಯುವಂತಾಗಿದೆ.

ಅವಿಭಜಿತ ತಾಲ್ಲೂಕಿನಲ್ಲಿ 925 ಎಕರೆ ಜಮೀನನ್ನು ರೈತರಿಗೆ ಸರ್ಕಾರವೇ ಮಂಜೂರು ಮಾಡಿದ್ದು, ಈ ರೈತರ ಹೆಸರಲ್ಲಿಯೇ ಪಹಣಿಗಳಿದ್ದು ರೈತರೇ ಕಬ್ಜಾ ಮತ್ತು ಮಾಲಿಕತ್ವ ಹೊಂದಿದ್ದಾರೆ. ಸರ್ಕಾರ ಮಂಜೂರು ಮಾಡಿದ ಜಮೀನು ಹಲವು ವರ್ಷಗಳ ನಂತರ ಕೆಲ ರೈತರು ಮಾರಾಟ ಮಾಡಿದ್ದಾರೆ. ಇದನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಖರೀದಿಸಿ ಭೂರಹಿತ ಪರಿಶಿಷ್ಟ ರೈತರಿಗೆ ನೀಡಿದ್ದು ಗಡಿಕೇಶ್ವಾರದಲ್ಲಿ ಕಂಡು ಬಂದಿದೆ.

ADVERTISEMENT

ದರ್ಗಾ, ಅಶೂರ ಖಾನ್‌, ಈದ್ಗಾ, ಖಬರ್‌ಸ್ತಾನ್‌, ಜಾಮೀಯಾ ಮಸೀದಿ ಹೀಗೆ ಐದು ರೀತಿಯಲ್ಲಿ ವಕ್ಫ್ ಆಸ್ತಿಯಿದ್ದು, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಾಮಿಯಾ ಮಸೀದಿ ಸಹಿತ ಕೆಲ ದರ್ಗಾಗಳ ಮುತುವಲಿಗಳು ಜಮೀನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ನಂತರ ಅದನ್ನು ರೈತರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಜಾಮಿಯಾ ಮಸೀದಿಯ ಆಸ್ತಿಯ ಮೇಲೆ 19 ಆದೇಶಗಳಾಗಿವೆ. ಸರ್ಕಾರ ಮಂಜೂರು ಮಾಡಿದ ಮೇಲೆ ಪಹಣಿ ರೈತರ ಹೆಸರಲ್ಲಿ ಹೊರಬಂದು ಹಲವು ವರ್ಷಗಳು ಗತಿಸಿದ ನಂತರ ಈ ಜಮೀನು ವಕ್ಫ್‌ಗೆ ಸೇರಿದ್ದು ಎಂದು ಪಹಣಿಯಲ್ಲಿ ದಶಕದ ಹಿಂದೆಯೇ ಸೇರಿಸಿದ್ದರಿಂದ ರೈತರು ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂದು ಮುಖಂಡ ಮೇಘರಾಜ ರಾಠೋಡ್ ತಿಳಿಸಿದರು.

ವಕ್ಫ್ ಸಚಿವರು ನಮ್ಮ ಗ್ರಾಮಕ್ಕೆ ಬಂದು ಸಮಸ್ಯೆ ಆಲಿಸಲಿ. ನಮಗೆ ಜಮೀನು ಮಾರಾಟ ಮಾಡಿದ ವ್ಯಕ್ತಿಯ ಹೆಸರಲ್ಲಿರುವ ಜಮೀನು ಜಪ್ತಿ ಮಾಡಿ ನಮಗೆ ನ್ಯಾಯ ಕೊಡಿಸಬೇಕು’ ಎಂದು ನಾಗಯ್ಯ ಗುತ್ತೇದಾರ ಹೇಳಿದರು.

ಗಡಿಕೇಶ್ವಾರದಲ್ಲಿ ಗ್ರಾಮ ವಿಸ್ತರಣೆಯಾಗಿ ವಕ್ಫ್ ಆಸ್ತಿಯಲ್ಲಿಯೇ ಜನ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ರೈತರ ಬಳಿ ಜಮೀನು ಕ್ರಯ ಮಾಡಿಕೊಂಡ ಪತ್ರ, ಹಳೆಯ ಪಹಣಿಗಳಿದ್ದು ಕಬ್ಜಾ ಮಾತ್ರ ಹೊಂದಿದ್ದಾರೆ. ಜತೆಗೆ ಬ್ಯಾಂಕುಗಳಲ್ಲಿ ಸಾಲವನ್ನೂ ಪಡೆದುಕೊಂಡಿದ್ದಾರೆ. ಈ ಜಮೀನು ವಕ್ಫ್ ಆಸ್ತಿ ಎಂದು ದಶಕದ ಹಿಂದೆಯೇ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾಗಿದೆ ಎಂದು ಗ್ರಾಮದ ಜಗದೀಶ್ವರಯ್ಯ ಕಂಬದ್ ತಿಳಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಖರೀದಿಸಿ ಭೂರಹಿತರಿಗೆ ನೀಡಿದ ಜಮೀನು ವಕ್ಫ್ ಹೆಸರಿಗೆ ವರ್ಗವಾಗಿದ್ದು ವಕ್ಫ್ ವರ್ಸಸ್‌ ಅಂಬೇಡ್ಕರ್ ನಿಗಮ ಹೋರಾಟ ನಡೆಸುವಂತಾಗಿದೆ.

ಚಿಂಚೋಳಿ ಪಟ್ಟಣದ ಸರ್ವೆ ನಂ.15ರಲ್ಲಿ 2007ರಲ್ಲಿ ರೈತರು ಜಮೀನು ಖರೀದಿಸಿದ್ದಾರೆ. ಜಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ದಾಖಲೆ ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಿದೆ. ಆದರೂ ನಮ್ಮ ಜಮೀನಿನ ಪಹಣಿಯಲ್ಲಿ ಸೇರಿಸಲಾದ ವಕ್ಫ್ ಹೆಸರು ತೆಗೆದಿಲ್ಲ ಎಂದು ಸಂತ್ರಸ್ತರಾದ ಶಿವಶಂಕರ ಶಿವಪುರಿ ಮತ್ತು ಸೋಮಯ್ಯ ಮಠಪತಿ ತಿಳಿಸಿದ್ದಾರೆ.

‘ಈ ಜಮೀನು 1963-64ರಲ್ಲಿ ರೈತರ ಹೆಸರಲ್ಲಿದೆ. ಅಲ್ಲಿ ವಕ್ಫ್‌ ಹೆಸರಿಲ್ಲ. ನಂತರ ಯಾವ ವರ್ಷದ ದಾಖಲೆಯಲ್ಲಿಯೂ ವಕ್ಫ್‌ ನಮೂದಾಗಿಲ್ಲ. ನಾವು ಖರೀದಿಸಿದ ಹಲವು ವರ್ಷಗಳ ನಂತರ ವಕ್ಫ್ ಹೆಸರು ಸೇರಿಸಿದ್ದು ಹುಬ್ಬೇರಿಸುವಂತಾಗಿದೆ. ಇನ್ನೂ ವಿಚಿತ್ರವೆಂದರೆ ವಕ್ಫ್‌ ಆಸ್ತಿಯ ಗೆಜೆಟ್ ನೋಟಿಫೀಕೇಶನ್‌ 20ಜೂನ್ 1974ರಲ್ಲಿ ಆಗಿದೆ’ ಎಂದು ತಿಳಿಸಿದರು.

ವಕ್ಫ್ ಆಸ್ತಿಯನ್ನು ಭೂನ್ಯಾಯ ಮಂಡಳಿ ವಿವಿಧೆಡೆ ರೈತರಿಗೆ ಮಂಜೂರಿಸಿದೆ. ಈ ಜಮೀನಿನ ಕುರಿತು ಏನು ಮಾಡಬೇಕು? ವಕ್ಫ್ ನಮೂದಿಸಲು ಸಾಧ್ಯವೇ ಎಂದು ಸೂಕ್ತ ನಿರ್ದೇಶನಕ್ಕಾಗಿ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇನೆ
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.