ಕಲಬುರಗಿ: ‘ವರ ಕೊಟ್ಟ ಶಿವನನ್ನೇ ಸುಡಲು ಅಟ್ಟಿಸಿಕೊಂಡು ಹೋಗಿದ್ದ ಭಸ್ಮಾಸುರನಂತೆ ಅಧಿಕಾರ ಕೊಟ್ಟ ರೈತರು, ದಲಿತರು ಸೇರಿದಂತೆ ನಮ್ಮೆಲ್ಲರನ್ನು ಮುಗಿಸಲು ಕಾಂಗ್ರೆಸ್ ಹೊರಟಿದೆ. ವಕ್ಫ್ ಮಂಡಳಿ ಎಂಬ ಆಧುನಿಕ ಭಸ್ಮಾಸುರನ ನಾಶಕ್ಕೆ ಎಲ್ಲರೂ ಜಾಗೃತರಾಗಿ ಹೋರಾಡಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಇಲ್ಲಿನ ಜಗತ್ ವೃತ್ತದಲ್ಲಿ ಶನಿವಾರ ಸಂಪನ್ನಗೊಂಡ ನೇಗಿಲ ಯೋಗಿ ಸ್ವಾಭಿಮಾನಿ ವೇದಿಕೆಯ ‘ವಕ್ಫ್ ಹಠಾವೋ, ಅನ್ನದಾತ ಬಚಾವೋ’ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ರಾಜ್ಯ ಕಾಂಗ್ರೆಸ್‌ಗೆ ರೈತರು, ದಲಿತರು ಹಾಗೂ ಬಡವರು ಅಧಿಕಾರ ಎಂಬ ವರವನ್ನು ಕೊಟ್ಟಿದ್ದಾರೆ. ಈಗ, ವರ ಕೊಟ್ಟವರ ತಲೆಯ ಮೇಲೆ ಕೈ ಇಟ್ಟು, ಅವರನ್ನು ಭಸ್ಮ ಮಾಡಲು ಮುಂದಾಗಿದೆ. ವಕ್ಫ್ ಮಂಡಳಿ ಎಂಬ ಭಸ್ಮಾಸುರನ ವಧೆ ಮಾಡಿದರೆ ರೈತರು, ದಲಿತರು, ಮಠ–ಮಂದಿರಗಳು, ಹಿಂದೂಗಳ ಸ್ಮಶಾನ ಭೂಮಿ, ಸನಾತನ ಧರ್ಮ ಉಳಿಯುತ್ತದೆ’ ಎಂದರು.
‘ಕಂಡಿದ್ದೆಲ್ಲವನ್ನೂ ನನಗೆ ಸೇರಿದ್ದು ಎನ್ನುತ್ತಿರುವ ವಕ್ಫ್ ಮಂಡಳಿಯು ಬಕಾಸುರ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದೆ. ಭೀಮನ ಸಂವಿಧಾನದ ಬಲವನ್ನು ಇಟ್ಟುಕೊಂಡು ಭೀಮನ ರೀತಿಯಲ್ಲಿ ಹಿಂದೂಗಳು ಸಂಘಟಿತರಾಗಬೇಕು. ಆ ಮೂಲಕ ಬಕಾಸುರನ ವಿರುದ್ಧ ಹೋರಾಡಬೇಕು’ ಎಂದು ಹೇಳಿದರು.
‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾದ ವಕ್ಫ್ ಮಂಡಳಿ ರದ್ದಾಗಬೇಕು. ವಕ್ಫ್ ಮಂಡಳಿಗೆ ಯಾರು, ಎಷ್ಟು ಭೂಮಿ, ಯಾವಾಗ ದಾನವಾಗಿ ಕೊಟ್ಟಿದ್ದರೂ ಎಂಬುದನ್ನು ದಾಖಲೆಗಳ ಸಮೇತವಾಗಿ ದೃಢಪಡಿಸಬೇಕು. ನಕಲಿ ದಾಖಲೆಗಳನ್ನು ಸೃಷ್ಟಿಸಿ ದಾನವಾಗಿ ಕೊಟ್ಟಿದ್ದಾರೆ ಎಂದು ಹೇಳಿದರೆ ನಾವು ಒಪ್ಪುವುದಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಆಗಬೇಕು’ ಎಂದರು.
ಅಧಿವೇಶನದಲ್ಲಿ ಪ್ರಸ್ತಾಪಿಸಲು ಮನವಿ: ‘ಕಲಬುರಗಿ ಜಿಲ್ಲೆಯಲ್ಲಿ 17,000 ಎಕರೆ ಪಹಣಿಗಳಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿದೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರ್ಕಾರದ ಗಮನಕ್ಕೆ ತರಬೇಕು ಎಂದು ಮಠಾಧೀಶರು, ವೇದಿಕೆಯ ಮುಖಂಡರು ಹಾಗೂ ರೈತರು ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿದರು.
ಸತ್ಯಾಗ್ರಹದಲ್ಲಿ ಶ್ರೀನಿವಾಸ ಸರಡಗಿ ಶಕ್ತಿ ಪೀಠದ ಪೀಠಾಧಿಪತಿ ಅಪ್ಪರಾವ ದೇವಿ ಮುತ್ಯಾ ಸೇರಿದಂತೆ ಬಡದಾಳ, ಹಲಕರ್ಟಿ, ಕೋರವಾರ, ರೋಜಾ, ನೀಲೂರ, ಯರಗಲ್ ಸೇರಿದಂತೆ ವಿವಿಧ ಗ್ರಾಮಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ, ಮುಖಂಡರಾದ ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಶಿವರಾಜ ಪಾಟೀಲ ರದ್ದೇವಾಡಗಿ, ನಿತಿನ್ ಗುತ್ತೇದಾರ, ಮಣಿಕಂಠ ರಾಠೋಡ, ಗಿರಿರಾಜ್ ಯಳಮೇಲಿ, ಶಿವರಾಜ್ ಸಂಗೋಳಗಿ, ಪ್ರಶಾಂತ್ ಗುಡ್ಡಾ, ಸತೀಶ್ ಮಾಹೂರ, ಅನಿಲ್ ತಂಬಾಕೆ, ಎಂ.ಎಸ್.ಪಾಟೀಲ ನರಿಬೋಳ, ಡಾ.ಸುಧಾ ಹಾಲಕಾಯಿ, ಸವಿತಾ ಪಾಟೀಲ, ಸುವರ್ಣಾ ವಾಡೆ ಸೇರಿ ಹಲವು ಮಹಿಳೆಯರು, ರೈತರು, ಮುಖಂಡರು ಉಪಸ್ಥಿತರಿದ್ದರು.
‘ಪ್ರಿಯಾಂಕ್ ಖರ್ಗೆ ಸತ್ಯ ಹೇಳುವ ಧೈರ್ಯ ಮಾಡಲಿ’
‘ಅಫ್ಗಾನಿಸ್ತಾನದ ಬಾಮಿಯಾನ್‌ನಲ್ಲಿ ಬುದ್ಧನ ಪ್ರತಿಮೆಯನ್ನು ಫಿರಂಗಿಯಿಂದ ಧ್ವಂಸ ಮಾಡಲಾಗಿದೆ. ಕಲಬುರಗಿಯ ಬುದ್ಧ ವಿಹಾರಕ್ಕೂ ಆ ಸ್ಥಿತಿ ಬರಬಾರದು ಎಂದುಕೊಂಡಿದ್ದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಜಾಕಾರರ ಬಗ್ಗೆ ಸತ್ಯವನ್ನು ಹೇಳುವ ಧೈರ್ಯ ಮಾಡಲಿ’ ಎಂದು ಸಿ.ಟಿ. ರವಿ ಸವಾಲು ಹಾಕಿದರು. ‘ರಜಾಕಾರರ ಬಗ್ಗೆ ಇವತ್ತು ಸತ್ಯ ಹೇಳಿದರೆ ಚುನಾವಣೆಯಲ್ಲಿ ಸೋಲು ಬರಬಹುದು. ಮುಂದೊಂದು ದಿನ ಸಾಯುವುದು ತಪ್ಪುತ್ತದೆ. ಚುನಾವಣೆಯ ಲಾಭಕ್ಕಾಗಿ ರಜಾಕಾರರ ಸಂಸ್ಕೃತಿ ಬೆಳೆಸಿ ಮತಾಂಧ ಸಂಸ್ಕೃತಿಗೆ ಬೆಂಬಲ ಕೊಟ್ಟರೆ ನಾವ್ಯಾರೂ ಉಳಿಯುವುದಿಲ್ಲ’ ಎಂದರು.
ಡಿ.ಸಿ. ವಿರುದ್ಧ ಬೇಸರ
‘ಹೋರಾಟದ ವೇದಿಕೆಗೆ ಬರಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು ತಮ್ಮ ವೃತ್ತಿಗೆ ರಜೆ ಹಾಕಿ ಬೆಂಗಳೂರಿಗೆ ಹೋಗಿ ಕುಳಿತ್ತಿದ್ದಾರೆ. ಎಷ್ಟು ದಿನಗಳು ಕೂರುತ್ತಾರೆ ಕೂರಲ್ಲಿ ಇವರು ಏನು ಮಾಡಿತ್ತಾರೆ ಎಂಬ ತಾತ್ಸಾರ ಪ್ರದರ್ಶಿಸಿದ್ದಾರೆ’ ಎಂದು ಪಾಳಾದ ಗುರುಮೂರ್ತಿ ಶಿವಾಚಾರ್ಯರು ಹೇಳಿದರು. ‘ನೀವು ಕಲಬುರಗಿಗೆ ಬಂದಾಗ ಇನ್ನೊಮ್ಮೆ ಹೋರಾಟ ಮಾಡಿ ರೈತರ ಕೈಯಿಂದಲೇ ಮನವಿ ಪತ್ರವನ್ನು ಕೊಡಿಸುತ್ತೇವೆ. ಅದನ್ನು ನೀವು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.