ADVERTISEMENT

ಕಮಲಾಪುರ: ಬ್ರಿಜ್‌ ಕಂ ಬ್ಯಾರೇಜ್‌ ನೀರು ಪೋಲು

ತೀರ್ಥಕುಮಾರ
Published 19 ನವೆಂಬರ್ 2024, 5:28 IST
Last Updated 19 ನವೆಂಬರ್ 2024, 5:28 IST
ಕಮಲಾಪುರ ತಾಲ್ಲೂಕಿನ ಸೊಂತ ಪಟವಾದ ಮಧ್ಯದ ಬ್ರಿಜ್‌ ಕಂ ಬ್ಯಾರೇಜ್‌ ಗೇಟ್‌ ತೆರೆದಿದ್ದು ನೀರು ಹರೀದುಹೋಗುತ್ತಿರುವುದು
ಕಮಲಾಪುರ ತಾಲ್ಲೂಕಿನ ಸೊಂತ ಪಟವಾದ ಮಧ್ಯದ ಬ್ರಿಜ್‌ ಕಂ ಬ್ಯಾರೇಜ್‌ ಗೇಟ್‌ ತೆರೆದಿದ್ದು ನೀರು ಹರೀದುಹೋಗುತ್ತಿರುವುದು   

ಕಮಲಾಪುರ: ತಾಲ್ಲೂಕಿನಲ್ಲಿ ಎಲ್ಲ ಬ್ರಿಜ್‌ ಕಂ ಬ್ಯಾರೇಜ್‌ಗಳ ಗೇಟ್‌ಗಳು ಡಿಸೆಂಬರ್ ಸಮೀಪಿಸುತ್ತಿದ್ದರೂ ತೆರದ ಸ್ಥಿತಿಯಲ್ಲೇ ಇದ್ದು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅಪಾರ ಅನುದಾನ ವ್ಯಯಿಸಿ ನಿರ್ಮಿಸಿದ ಬ್ರಿಜ್‌ ಕಂ ಬ್ಯಾರೇಜ್‌ಗಳ ಸದುಪಯೋಗವಾಗದೆ ಇರುವುದರಿಂದ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸೂಕ್ತ ನಿರ್ವಹಣೆಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಬೆಣ್ಣೆತೊರೆ, ಗಂಡೋರಿ ನಾಲಾ, ಮುಲ್ಲಾಮಾರಿ ನದಿ ಸೇರಿದಂತೆ ತಾಲ್ಲೂಕಿನಲ್ಲಿ ಹರಿಯುವ ವಿವಿಧ ಹಳ್ಳ ನಾಲೆಗಳಿಗೆ ಸುಮಾರು 20ಕ್ಕಿಂತ ಹೆಚ್ಚು ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಪ್ರತಿಯೊಂದು ಸರಾಸರಿ 15 ರಿಂದ 30 ಮಿಲಿಯನ್‌ ಕ್ಯೂಬಿಕ್‌ ಫೀಟ್‌ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿವೆ.

ಗ್ರಾಮಗಳು, ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವುದರ ಜತೆ ರೈತರ ಸೇತುವೆಗೆ ಗೇಟ್‌ಗಳನ್ನು ಅಳವಡಿಸಿ ಹರಿದು ಹೋಗುವ ನೀರಿನ್ನು ಒಂದೆಡೆ ಸಂಗ್ರಹ ಮಾಡಿ ಪಕ್ಕದ ರೈತರ ಜಮೀನುಗಳಿಗೆ ನೀರೊದಗಿಸುವುದು ಇವುಗಳ ಮೂಲ ಉದ್ದೇಶವಾಗಿದೆ. ನೀರಿನ ಪ್ರವಾಹ ಹೆಚ್ಚಾಗಿ, ಸೇತುವೆ ಜಮೀನು, ಬೆಳೆ, ಹಾನಿಯಾಗಬಾರದೆಂದು ಮಳೆಗಾಲದ ಆರಂಭಿಕ ಹಂತದ ಜೂನ್‌ನಲ್ಲಿ ಗೇಟ್‌ ತೆಗೆದಿಡಲಾಗುತ್ತದೆ.

ADVERTISEMENT

ಮಳೆಗಾಲದ ಕೊನೆ ಹಂತದಲ್ಲಿ ಅಕ್ಟೋಬರ್‌ನಲ್ಲಿ ಈ ಗೇಟ್‌ಗಳನ್ನು ಅಳವಡಿಸಿ ನೀರನ ಸಂಗ್ರಹಣೆ ಮಾಡಬೇಕು. ತೊಗರಿ, ಜೋಳ ಸೇರಿದಂತೆ ಖರೀಫ್ ಬೆಳೆಗಳಿಗೆ ನೀರೊದಗಿಸಲು ಅನುಕೂಲವಾಗುತ್ತದೆ. ಸದ್ಯ ತೊಗರಿ ಬೆಳೆಗೆ ನೀರೊದಗಿಸಲು ರೈತರ ಪರಿತಪಿಸುತ್ತಿದ್ದು ಯಾವೊಂದು ಬ್ಯಾರೇಜ್‌ನಲ್ಲೂ ನೀರಿನ ಸಂಗ್ರಹವಿಲ್ಲ. ಎಲ್ಲ ಬ್ಯಾರೇಜ್‌ಗಳ ಗೇಟ್‌ಗಳು ತೆರೆದ ಸ್ಥಿತಿಯಲ್ಲೆ ಇದೆ.

ನೀರು ಸಂಪೂರ್ಣ ಪೋಲಾಗುತ್ತಿದೆ. ಇನ್ನು 10 ದಿನಗಳ ವರೆಗೆ ಮಾತ್ರ ಹಳ್ಳ, ನಾಲಗಳಲ್ಲಿ ನೀರು ಜಿನುಗುತ್ತವೆ. ಈಗಲೇ ಗೇಟ್‌ ಹಾಕಿದರೆ ಮಾತ್ರ ನೀರು ಸಂಗ್ರಹಗೊಳ್ಳುತ್ತದೆ. ವಿಳಂಬ ಮಾಡಿದರೆ ಊರು ಕೊಳ್ಳೆ ಹೊಡೆದ ಮೇಲೆ ಅಗಸಿ ಬಾಗಿಲು ಹಾಕಿದಂತಾಗುತ್ತದೆ ಎಂದು ರೈತರು ಲೇವಡಿ ಮಾಡಿದರು.

ತೊಗರಿ ಹೂ ಬಿಟ್ಟಿದ್ದು ಕಾಯಿಕಟ್ಟುವ ಹಂತದಲ್ಲಿದೆ ತೇವಾಂಶ ಕಡಿಮೆಯಾಗಿದೆ. ಬ್ರಿಜ್‌ ಕಂ ಬ್ಯಾರೇಜ್‌ಗೆ ಗೇಟ್‌ ಅಳವಡಿಸಿದರೆ ನೀರು ಹರಿಸಲು ಅನುಕೂಲವಾಗುತ್ತಿತ್ತು
-ಅಮೃತಪ್ಪ ದೋಶೆಟ್ಟಿ ಪ್ರಗತಿಪರ ರೈತ
ವಾರದಲ್ಲಿ ಕಮಲಾಪುರ ತಾಲ್ಲೂಕಿನ ಎಲ್ಲ ಬ್ರಿಜ್‌ ಕಂ ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸಲಾಗುವುದು
-ರಾಜಶೇಖ ಸಜ್ಜನಶೆಟ್ಟಿ, ಸಣ್ಣ ನೀರಾವರಿ ಇಲಾಖೆ ಎಇಇ
ನೂರಾರು ಕೋಟಿ ಅನುದಾನದಲ್ಲಿ ರೈತರ ಅನುಕೂಲಕ್ಕಾಗಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಅಧಿಕಾರಿಗಳ ಜತೆ ಮಾತನಾಡಿ ಕೂಡಲೇ ಗೇಟ್‌ ಅಳವಡಿಸಲು ಸೂಚಿಸುವೆ
-ಬಸವರಾಜ ಮತ್ತಿಮಡು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.