ADVERTISEMENT

ಜಯದೇವ ಆಸ್ಪತ್ರೆಯಲ್ಲಿ ನೀರಿನ ಕೊರತೆ: ತುರ್ತಿಲ್ಲದ ಶಸ್ತ್ರಚಿಕಿತ್ಸೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಕಲಬುರಗಿಯ ಜಿಮ್ಸ್ ಆವರಣದ ಶೌಚಾಲಯಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು
ಕಲಬುರಗಿಯ ಜಿಮ್ಸ್ ಆವರಣದ ಶೌಚಾಲಯಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು   

ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಹಾಗೂ ಇದೇ ಕಟ್ಟಡದಲ್ಲಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಗೆ ನೀರಿನ ತೀವ್ರ ಕೊರತೆ ಎದುರಾಗಿದ್ದು, ತುರ್ತು ಶಸ್ತ್ರಚಿಕಿತ್ಸೆ ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ರೋಗಿಗಳು ಸಹ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ.

ಆಸ್ಪತ್ರೆಗೆ ಎಲ್‌ ಅಂಡ್ ಟಿ ಕಂಪನಿಯು ನಿತ್ಯ ನೀರು ಸರಬರಾಜು ಮಾಡುತ್ತದೆ. ಭೀಮಾ ಮತ್ತು ಬೆಣ್ಣೆತೋರಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಸ್ವಚ್ಛತೆಗೂ ಬಳಸಲು ಯೋಗ್ಯವಲ್ಲದ ನೀರಿನಿಂದಾಗಿ ವೈದ್ಯರು ಹಾಗೂ ರೋಗಿಗಳು ಪರಿತಪಿಸುತ್ತಿದ್ದಾರೆ. ಎಲ್‌ ಅಂಡ್ ಟಿ ಕಂಪನಿಗೆ ಆಸ್ಪತ್ರೆಗೆ ಅಗತ್ಯವಾದ ಕನಿಷ್ಠ ಪ್ರಮಾಣದ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಜಿಮ್ಸ್‌ಗೆ ನಿತ್ಯ 600ಕ್ಕೂ ಅಧಿಕ ಹೊರರೋಗಿಗಳು ಹಾಗೂ 100ಕ್ಕೂ ಹೆಚ್ಚು ಒಳರೋಗಿಗಳು ದಾಖಲಾಗುತ್ತಾರೆ. ಮೂರು ಶಿಫ್ಟ್‌ಗಳಲ್ಲಿ 1,000ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಪ್ರತಿದಿನ ಶಸ್ತ್ರಚಿಕಿತ್ಸೆ ಉಪಕರಣಗಳ ಸ್ವಚ್ಛತೆ, ರೋಗಿಗಳ ಆರೈಕೆ, ಶೌಚಾಲಯ, ಸ್ನಾನಕ್ಕೆ, ಬಟ್ಟೆ ಶುಚಿಗೊಳಿಸಲು ಸುಮಾರು 1.50 ಲಕ್ಷ ಲೀಟರ್ ನೀರಿನ ಅವಶ್ಯವಿದೆ. ಕಳೆದ ಒಂದು ವಾರದಿಂದ ಅಗತ್ಯದಷ್ಟು ನೀರು ಪೂರೈಕೆ ಆಗುತ್ತಿಲ್ಲ.

ADVERTISEMENT

ನೀರಿನ ಅಲಭ್ಯತೆಗೆ ಆಸ್ಪತ್ರೆಯಲ್ಲಿ ಶೌಚಾಲಯ ಹಾಗೂ ಸ್ನಾನದ ಕೊಠಡಿಗಳು ಮುಚ್ಚಲಾಗಿದೆ. ಇದರಿಂದ ರೋಗಿಗಳಿಗೆ ಹಾಗೂ ಆರೈಕೆ ಮಾಡುವವರಿಗೆ ತೊಂದರೆ ಆಗುತ್ತಿದೆ. ಆಸ್ಪತ್ರೆಯ ವಾರ್ಡ್‌ಗಳಲ್ಲಿ ಬ್ಯಾರೆಲ್‌ಗಳನ್ನು ಇರಿಸಿ ನೀರು ಸಂಗ್ರಹಿಸಲಾಗುತ್ತಿದೆ. ತುರ್ತು ಶಸ್ತ್ರಚಿಕಿತ್ಸೆಗೆ 20 ಲೀಟರ್‌ ನೀರಿನ ಕ್ಯಾನ್ ಬಳಸುವಂತಹ ಪರಿಸ್ಥಿತಿ ಬಂದಿದೆ. ತುರ್ತು ಅಲ್ಲದ ಚಿಕಿತ್ಸೆಗಳನ್ನು ಮುಂದೂಡಲಾಗಿದೆ.

‘ಆಸ್ಪತ್ರೆಗೆ ಬಂದು ನಾಲ್ಕು ದಿನ ಆಗಿದೆ. ಕುಡಿಯಲು, ಶೌಚಾಲಯ ಬಳಕೆಗೆ ನೀರಿಲ್ಲ. ಹೊರಗಡೆಯಿಂದ ಹಣ ಕೊಟ್ಟು ನೀರು ತರುತ್ತಿದ್ದೇವೆ’ ಎನ್ನುತ್ತಾರೆ ರೋಗಿಯ ಸಂಬಂಧಿಕ ಸಂಗಣ್ಣ.

‘ಟ್ಯಾಂಕರ್ ನೀರು ಕಳುಹಿಸುವಂತೆ ಎಲ್‌ ಅಂಡ್ ಟಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇರುವಷ್ಟು ನೀರಿನಲ್ಲಿ ಹಂಚಿಕೆ ಮಾಡುವಂತೆ ನಿರ್ದೇಶಕರು ಸೂಚಿಸಿದ್ದಾರೆ. ರೋಗಿಗಳ ಹಾಗೂ ಅವರ ಸಂಬಂಧಿಕರ ಸಂಕಷ್ಟ ನೋಡಲು ಆಗುತ್ತಿಲ್ಲ’ ಎನ್ನುತ್ತಾರೆ ಜಿಮ್ಸ್‌ನ ಪಂಪ್ ಆಪರೇಟರ್ ಅಶೋಕ ಪಂಚಾಳ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಎಸ್., ‘ಈ ಹಿಂದೆ ಬೇಸಿಗೆಯಲ್ಲಿ ಒಂದು ದಿನ ಕೊಳಚೆ ನೀರು ಪೂರೈಕೆ ಆಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಆರೇಳು ದಿನಗಳಿಂದ ಮಣ್ಣು ಮಿಶ್ರಿತ ಕೊಳಚೆ ನೀರು ಬರುತ್ತಿದೆ. ನಿತ್ಯ ಸುಮಾರು 1.50 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಆದರೆ, ಎಲ್‌ ಅಂಡ್ ಟಿ ಕಂಪನಿಯವರು 7ರಿಂದ 8 ಟ್ಯಾಂಕರ್‌ಗಳ ಮೂಲಕ 30,000 ಲೀಟರ್ ನೀರು ಪೂರೈಸುತ್ತಿದ್ದಾರೆ. ಇದು ಯಾವುದಕ್ಕೂ ಸಾಲುತ್ತಿಲ್ಲ. 20 ಲೀಟರ್ ಕ್ಯಾನ್ ನೀರು ತಂದು ಶಸ್ತ್ರಚಿಕಿತ್ಸೆಗಳನ್ನು ನಿರ್ವಹಣೆ ಮಾಡುತ್ತಿದ್ದೇವೆ’ ಎಂದರು.

‘ಬಳಕೆಗೆ ಹೋಗ್ಯವಲ್ಲದಂತಹ ಗಲೀಜು ನೀರು ನದಿ ಮೂಲಗಳಿಂದಲೇ ಬರುತ್ತಿದೆ. ಬಳಕೆ ಯೋಗ್ಯದ 21 ಪ್ಯಾರಾಮೀಟರ್‌ಗಳ ಪೈಕಿ 7ರಿಂದ 8 ಪ್ಯಾರಾಮೀಟರ್‌ಗಳೂ ಹೊಂದಾಣಿಕೆ ಆಗುತ್ತಿಲ್ಲ. ಲಾರಿ, ಟ್ರ್ಯಾಕ್ಟರ್‌ಗಳ ಮೂಲಕ ಟ್ಯಾಂಕರ್ ನೀರು ಪೂರೈಸುತ್ತಿದ್ದರೂ ಆಸ್ಪತ್ರೆಗಳ ಬೇಡಿಕೆಗೆ ಸಾಲುತ್ತಿಲ್ಲ’ ಎಂದು ಎಲ್‌ ಆಂಡ್ ಟಿ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಎಸ್.ವೈ.ಸಾಲಿಮನಿ ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಶೌಚಾಲಯದ ನಲ್ಲಿಯಲ್ಲಿನ ಕೊಳಚೆ ನೀರು ಬರುತ್ತಿರುವುದು
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಕ್ಯಾನ್‌ಗಳಲ್ಲಿ ನೀರು ತರಲಾಗುತ್ತಿದೆ.
ಆಸ್ಪತ್ರೆಗಳಿಗೆ ಅಗತ್ಯವಾದಷ್ಟು ಟ್ಯಾಂಕರ್ ನೀರು ಸರಬರಾಜು ಮಾಡುವಂತೆ ಎಲ್‌ ಅಂಡ್ ಟಿ ಕಂಪನಿ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ
-ಬಿ. ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ತೆರೆದ ಹೃದಯ ಶಸ್ತ್ರಚಿಕಿತ್ಸೆ ಬಳಿಕ ರೋಗಿಗೆ ಸೋಂಕು ತಗಲುದಂತೆ ನೋಡಿಕೊಳ್ಳಬೇಕಾಗುತ್ತದೆ. ರಾಡಿ ನೀರು ಬರುತ್ತಿದ್ದರಿಂದ ಮೂರ್ನಾಲ್ಕು ದಿನಗಳ ಮಟ್ಟಿಗೆ ಶಸ್ತ್ರಚಿಕಿತ್ಸೆ ನಿಲ್ಲಿಸಿದ್ದೇವೆ. ತುರ್ತು ಶಸ್ತ್ರಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ.
-ಡಾ.ವೀರೇಶ ಪಾಟೀಲ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.