ADVERTISEMENT

3,500 ಹೆಕ್ಟೇರ್‌ನಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿ

₹7.70 ಕೋಟಿ ಅನುದಾನಕ್ಕಾಗಿ ಕೆಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಕೆ

ಮಲ್ಲಿಕಾರ್ಜುನ ನಾಲವಾರ
Published 22 ಮೇ 2024, 4:55 IST
Last Updated 22 ಮೇ 2024, 4:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ಬರದ ಬವಣೆಯನ್ನು ದೂರಾಗಿಸಿ ಮಳೆಯಾಶ್ರಿತ ಜಮೀನುಗಳಲ್ಲಿ ನಿರಂತರ ಕೃಷಿ ಚಟುವಟಿಕೆ ಹಾಗೂ ಭೂಮಿಯ ಫಲವತ್ತತೆ ಕಾಪಾಡಲು ಪ್ರಾಯೋಗಿಕ ಯೋಜನೆಯಡಿ ಜಿಲ್ಲೆಯ 3,500 ಹೆಕ್ಟೇರ್‌ನಲ್ಲಿ ಜಲಾನಯನ ಪ್ರದೇಶವನ್ನು ಅಭಿವೃದ್ಧಿಪಡಿಸುವ ಪ್ರಸ್ತಾವವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಕೆಕೆಆರ್‌ಡಿಬಿಗೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ವಾರ್ಷಿಕ ಸುಮಾರು 770 ಮಿ.ಮೀ ಮಳೆಯಾಗುತ್ತದೆ. ಶೇ 89ರಷ್ಟು ರೈತರು ಮಳೆಯನ್ನೇ ನಂಬಿಕೊಂಡು ಬಿತ್ತನೆ ಮಾಡುತ್ತಾರೆ. ಆದರೂ ಮಾನ್ಸೂನ್ ಮಾರುತಗಳ ವೈಫಲ್ಯವು ರೈತರನ್ನು ಕಂಗಾಲಾಗಿಸಿದೆ. ಆಗಾಗ ಸಂಭವಿಸುವ ಬರದಿಂದ ರೈತರು ಹಾಗೂ ಪ್ರಾಣಿ–ಪಕ್ಷಿಗಳನ್ನು ಪಾರು ಮಾಡಲು ಆರಂಭಿಕ ಹಂತದಲ್ಲಿ ಅವಿಭಜಿತ ಏಳು ತಾಲ್ಲೂಕುಗಳಲ್ಲಿ ತಲಾ 500 ಹೆಕ್ಟೇರ್‌ನಲ್ಲಿ ಜಲಾನಯನ ಪ್ರದೇಶ ತಲೆ ಎತ್ತಲಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ₹7.70 ಕೋಟಿ ಅನುದಾನದ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರತಿ ಜಲಾನಯನ ಪ್ರದೇಶಕ್ಕೆ ₹1.10 ಕೋಟಿ ಖರ್ಚಾಗಲಿದೆ.

ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಜನರಲ್ಲಿ ಮಳೆ ನೀರು ಸಂಗ್ರಹ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಅರಿವು ಮೂಡಿಸಲಾಗುತ್ತದೆ. ಆಯ್ಕೆಯಾಗುವ ಪ್ರದೇಶದಲ್ಲಿ ಗ್ರಾಮ ಸಭೆ, ಜಾಥಾ, ಬೀದಿ ನಾಟಕ ನಡೆಸಲಾಗುತ್ತದೆ. ಮಹಿಳಾ ಸಂಘಗಳು, ಸ್ವಸಹಾಯ ಗುಂಪುಗಳ ನೆರವೂ ಪಡೆಯಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಅಂತರ್ಜಲ ಕುಸಿತ, ಸತತ ಮಳೆ ಕೊರತೆ, ಜನದಟ್ಟಣೆಯ, ಅತಿ ಹಿಂದುಳಿದ, ಗುಡ್ಡ ಗಾಡು, ಮಣ್ಣಿನ ಸತ್ವ ಕಡಿಮೆ ಇರುವ, ಕಣಿವೆ ಮಾದರಿಯಲ್ಲಿ ಇರುವ ಪ್ರದೇಶವನ್ನು ಆಯ್ದುಕೊಳ್ಳಲಾಗುತ್ತದೆ. ಬದು, ಕೃಷಿ ಹೊಂಡ, ಚೆಕ್ ಡ್ಯಾಂ, ನಾಲಾ ಬದು, ಜಿನುಗು ಕೆರೆ ಮೊದಲಾದ ಕಾಮಗಾರಿಗಳ ಮೂಲಕ ಮಳೆ ನೀರು ಸಂಗ್ರಹಿಸಲಾಗುತ್ತದೆ.

‘ಕೃಷಿ ವಿಶ್ವವಿದ್ಯಾಲಯ ತಜ್ಞರು ಜಮೀನಿನ ಪ್ರತಿಯೊಂದು ಸರ್ವೆ ನಂಬರ್ ಅಧ್ಯಯನ ಮಾಡಿ ಭೂಸಂಪನ್ಮೂಲ ನಕ್ಷೆ ತಯಾರಿಸಿದ್ದಾರೆ. ಭೌಗೋಳಿಕ ಲಕ್ಷಣ, ಇಳಿಜಾರು ಪ್ರದೇಶ, ಜಲಮೂಲ ಲಭ್ಯತೆ, ಮಣ್ಣಿನ ಫಲವತ್ತತೆ, ತೇವಾಂಶ ಲಭ್ಯತೆಯಂತಹ ಅಂಶಗಳು ನಕ್ಷೆಯಲ್ಲಿವೆ. ಮಣ್ಣಿನಲ್ಲಿನ ಪೋಷಕಾಂಶ ಲಭ್ಯತೆ ಮತ್ತು ಕೊರತೆ, ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳಾದ ಮಣ್ಣಿನ ಆಳ, ಭೂಮಿಯ ಇಳಿಜಾರು, ರಸಸಾರ, ಕ್ಷಾರತೆಯಂತಹ ಮಾಹಿತಿ ಒಳಗೊಂಡಿದೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್.

‘ಯಾವ ಮಣ್ಣಿನಲ್ಲಿ ಯಾವ ಬೆಳೆಗಳು ಬೆಳೆದರೆ ಸೂಕ್ತ? ಯಾವ ಮಣ್ಣಿನಲ್ಲಿ ತೋಟಗಾರಿಕೆ, ಅರಣ್ಯ, ಮಳೆಯಾಶ್ರಿತ ಬೆಳೆಗಳು ಬೆಳೆಯಬಹುದು ಎಂಬಿತ್ಯಾದಿ ಮಾಹಿತಿ ಒಳಗೊಂಡಿದೆ. ಭೂವ್ಯೋಮ ತಂತ್ರಜ್ಞಾನವನ್ನು ಬಳಸಿಕೊಂಡು ವೈಜ್ಞಾನಿಕ ಮಾಹಿತಿ ಮೇಲೆ ಭೂಮಿಯ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಿ, ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು’ ಎಂದರು.

Cut-off box - ದೀರ್ಘಾವಧಿಯ ಯೋಜನೆ: ಸಮದ್‌ ಪಟೇಲ್ ‘ಜಲಾನಯನ ಯೋಜನೆಯು ದೀರ್ಘಾವಧಿಯ ಗುರಿಯಾಗಿದ್ದು ಸಾಕಷ್ಟು ಶ್ರಮ ಮತ್ತು ಸಮುದಾಯದ ಸಹಭಾಗಿತ್ವ ಬೇಡುತ್ತದೆ. ಹೀಗಾಗಿ ಹಂತ– ಹಂತವಾಗಿ ವಿಸ್ತರಣೆ ಮಾಡುತ್ತೇವೆ’ ಎಂದು ಸಮದ್‌ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಳೆ ನೀರು ಸಂಗ್ರಹದ ಜತೆಗೆ ತೋಟಗಾರಿಕೆ ಅರಣ್ಯ ಪಶುಸಂಗೋಪನೆ ಮೀನುಗಾರಿಕೆಯಂತಹ ಆದಾಯ ಉತ್ಪಾದನೆಯ ಗುರಿಯೂ ಇದೆ. ಜನರಿಗೆ ತಿಳಿವಳಿಕೆ ಹಾಗೂ ತರಬೇತಿಯೂ ಕೊಡಲಾಗುತ್ತದೆ. ಕೃಷಿ ಚಟುವಟಿಕೆಗಾಗಿ ಕೃಷಿ ಹೊಂಡ ಸಹಾಯಕ ಮಹಿಳಾ ಸ್ವಸಹಾಯ ಗುಂಪು ಆದಾಯ ಉತ್ಪನ್ನಗಳ ಪರಿಣಿತ ಯೋಜನಾ ಮುಖ್ಯಸ್ಥರು ಎನ್‌ಜಿಒಗಳನ್ನು ನೇಮಕ ಮಾಡಿಕೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು. ‘3500 ಹೆಕ್ಟೇರ್‌ನಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಲು 3ರಿಂದ 5 ವರ್ಷಗಳು ಬೇಕಾಗುತ್ತದೆ. ಹೀಗಾಗಿ ಆರಂಭಿಕ ಹಂತ ಮುಗಿದ ಮೇಲೆ 5000 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.