ಕಲಬುರಗಿ: ‘ಕೃಷಿಕರ ಜಮೀನು, ಮಠ–ಮಂದಿರಗಳಿಗೆ ಆಸ್ತಿಗಳ ಉತಾರದಲ್ಲಿ ನಮೂದಾಗಿರುವ ವಕ್ಫ್ ಮಂಡಳಿಯ ಹೆಸರನ್ನು ನವೆಂಬರ್ 20ರ ಒಳಗಾಗಿಯೇ ಶಾಶ್ವತವಾಗಿ ತೆಗೆದುಹಾಕಬೇಕು. ಪ್ರತಿಯೊಂದು ಪಹಣಿಯೂ ವಾರಸುದಾರರ ಹೆಸರಲ್ಲಿ ಮಾತ್ರ ಇರಬೇಕು. ಕಾಲಹರಣ ಮಾಡಿದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಬಾಗಲಕೋಟೆಯ ಶ್ರದ್ಧಾನಂದ ಮಠದ ಜಗದೀಶಾನಂದ ಸ್ವಾಮೀಜಿ ಮತ್ತು ಮಕಣಾಪುರ ಮಠದ ಸೋಮೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮದ ಬೀರದೇವರ ದೇವಸ್ಥಾನ ಭೇಟಿಗೂ ಮುನ್ನ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮುಖ್ಯಮಂತ್ರಿಗಳು ನೋಟಿಸ್ ಹಿಂಪಡೆಯುವುದಾಗಿ ಖುದ್ದಾಗಿ ಹೇಳಿದ್ದರೂ ಉತಾರಿಯಲ್ಲಿ ವಕ್ಫ್ ಹೆಸರು ಕಾಣಿಸುತ್ತಿದೆ. ಬಾಯಿ ಮಾತಿನಲ್ಲಿ ಮೂಗಿಗೆ ತುಪ್ಪ ಒರೆಸುವುದು ಬೇಡ. ಅದು ಲಿಖಿತವಾಗಿ ಕಾಣಿಸಬೇಕು. ಪ್ರತಿಯೊಂದು ಪಹಣಿಯು ವಾರಸುದಾರರ ಹೆಸರಿನಲ್ಲಿ ಮಾತ್ರ ಇರಬೇಕು. ಇದನ್ನು ಆದಷ್ಟು ಬೇಗನೆ ಮಾಡಬೇಕು. ರಾಜ್ಯದಾದ್ಯಂತ ಹೋರಾಟಕ್ಕೆ ಸಂಘಟನೆ ಮಾಡಲಾಗುತ್ತಿದ್ದು, ಅದಕ್ಕೆ ಬೇಕಾದ ಸಕಲ ಸಿದ್ಧತೆಯೂ ನಡೆಯುತ್ತಿದೆ’ ಎಂದು ಜಗದೀಶಾನಂದ ಸ್ವಾಮೀಜಿ ಹೇಳಿದರು.
‘ಒಂದು ದಾಖಲೆ ತಿದ್ದುಪಡಿಗೆ ಐದಾರು ತಿಂಗಳು ಬೇಕಾಗುತ್ತದೆ. ರಾತ್ರೋರಾತ್ರಿ ರೈತರ ಜಮೀನು, ಧಾರ್ಮಿಕ ಕೇಂದ್ರಗಳ ಆಸ್ತಿಗಳು ಅನ್ಯರ ಹೆಸರಿಗೆ ಬದಲಾಗುತ್ತಿರುವುದನ್ನು ನೋಡಿ ರೈತರು ಭಯಬೀತರಾಗಿದ್ದಾರೆ. ಯಾವ ಕಾನೂನಿನ ಅಡಿ, ಯಾವೆಲ್ಲ ದಾಖಲೆಗಳನ್ನು ಇರಿಸಿಕೊಂಡು ಹೀಗೆಲ್ಲ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ಎಲ್ಲರೂ ಒಂದಾಗಿ ಧರ್ಮನಿರಪೇಕ್ಷಿತ ರಾಷ್ಟ್ರವನ್ನಾಗಿ ಮಾಡಿದ್ದೇವೆ. ಒಂದು ಸಮುದಾಯದವರ ತುಷ್ಟೀಕರಣ ಮಾಡಿ, ಇಡೀ ಸಮಾಜವನ್ನು ಬಲಿಕೊಡುವಂತಹ ಕಾನೂನುಬಾಹಿರ ವ್ಯವಸ್ಥೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಎಲ್ಲ ಸಮಾಜಗಳ ಸ್ವಾಮೀಜಿಗಳು, ರೈತರು, ಒಬಿಸಿ ಅವರನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಆಗಿರುವ ತಪ್ಪನ್ನು ಸರಿಪಡಿಸಿಕೊಂಡು, ರೈತರ ಹಾಗೂ ಮಠಾಧೀಶರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಒಂದು ಸಮಾಜದ ತುಷ್ಟೀಕರಣಕ್ಕಾಗಿ ಸಾವಿರಾರು ವರ್ಷಗಳಿಂದ ಮಠಗಳ ಅಧೀನದಲ್ಲಿರುವ ಆಸ್ತಿಗಳು ಬೇರೆಯವರಿಗೆ ಹೋಗುತ್ತಿವೆ. ಬೇರೆ ಸಮಾಜಗಳಿಗೆ ಬೆಲೆಯೇ ಇಲ್ಲವಾ? ಕಾನೂನುಬಾಹಿರವಾಗಿ ಹೆಸರು ಬದಲಾಯಿಸಿದರೆ ಸಂವಿಧಾನ ಮತ್ತು ಕಾನೂನಿಗೆ ಬೆಲೆ ಕೊಟ್ಟಂತೆ ಆಗುತ್ತಾ? ಇಂತಹ ನಡೆಗಳ ಮೂಲಕ ಸರ್ಕಾರ ಏನು ಮಾಡಲು ಹೊರಟಿದೆ’ ಎಂದು ಪ್ರಶ್ನಿಸಿದರು.
‘ಭಾರತೀಯ ಸಂಸ್ಕೃತಿ ಉಳಿಯಬೇಕು. ರೈತರ, ಮಠ–ಮಾನ್ಯಗಳ ಆಸ್ತಿಗಳನ್ನು ರಕ್ಷಿಸಬೇಕು. ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ, ಸಂವಿಧಾನದ ಆಸೆಯಗಳನ್ನು ಉಳಿಸಲು ಎಲ್ಲ ಸ್ವಾಮೀಜಿಗಳು ಹೋರಾಟಕ್ಕೆ ಇಳಿಯುತ್ತಿದ್ದೇವೆ’ ಎಂದು ಹೇಳಿದರು.
ಸೋಮೇಶ್ವರ ಸ್ವಾಮೀಜಿ ಮಾತನಾಡಿ, ‘ಹಿಂದೂ ಧರ್ಮಕ್ಕೆ ಅನ್ಯಾಯವಾಗುತ್ತಿದ್ದು, ನಮ್ಮವರೇ ನಮ್ನನ್ನು ತುಳಿಯುತ್ತಿದ್ದಾರೆ. ರೈತರಿಂದ ಮತ ಪಡೆದು ಅಧಿಕಾರಕ್ಕೆ ಬಂದವರನ್ನು ಈಗ ರೈತರನ್ನೇ ತುಳಿಯುವ ಕೆಲಸ ಮಾಡುತ್ತಿದ್ದಾರೆ. ರೈತರ ಹಾಗೂ ಮಠ–ಮಂದಿರಗಳನ್ನು ಉಳಿಸಲು ಮೂಲ ಬೇರನ್ನೇ (ವಕ್ಫ್ ಮಂಡಳಿ) ಕಿತ್ತೆಸೆಯುವುದೇ ಒಳ್ಳೆಯದ್ದು. ವಕ್ಫ್ ಮಂಡಳಿ ಇರಲೇಬಾರದು. ಅದನ್ನು ರದ್ದು ಮಾಡಬೇಕು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಧುಲಿಂಗ ಸ್ವಾಮೀಜಿ, ದತ್ತಮಹಾರಾಜ ಸೇರಿ ವಿವಿಧ ಮಠಗಳ ಮಠಾಧೀಶರು, ಕುರುಬ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.