ADVERTISEMENT

ವಿಧವಾ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಮೇ 2019, 15:11 IST
Last Updated 6 ಮೇ 2019, 15:11 IST
ಬಸವ ಜಯಂತಿ ನಿಮಿತ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬಿ ಗೌರವಿಸಲಾಯಿತು. ರಾಜಯೋಗಿನಿ ಬಿ.ಕೆ.ರತ್ನಾ, ಸಹೋದರಿ ರೇಖಾ, ವಿಜಯಕುಮಾರ ತೇಗಲತಿಪ್ಪಿ, ಡಾ.ಪ್ರತಿಮಾ ಕಾಮರೆಡ್ಡಿ, ಡಾ.ಕೆ.ಗಿರಿಮಲ್ಲ, ಶಕುಂತಲಾ ಪಾಟೀಲ ಜಾವಳಿ, ಅಪ್ಪು ಕಣಕಿ, ಸವಿತಾ ಸಜ್ಜನ ಇದ್ದರು
ಬಸವ ಜಯಂತಿ ನಿಮಿತ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬಿ ಗೌರವಿಸಲಾಯಿತು. ರಾಜಯೋಗಿನಿ ಬಿ.ಕೆ.ರತ್ನಾ, ಸಹೋದರಿ ರೇಖಾ, ವಿಜಯಕುಮಾರ ತೇಗಲತಿಪ್ಪಿ, ಡಾ.ಪ್ರತಿಮಾ ಕಾಮರೆಡ್ಡಿ, ಡಾ.ಕೆ.ಗಿರಿಮಲ್ಲ, ಶಕುಂತಲಾ ಪಾಟೀಲ ಜಾವಳಿ, ಅಪ್ಪು ಕಣಕಿ, ಸವಿತಾ ಸಜ್ಜನ ಇದ್ದರು   

ಕಲಬುರ್ಗಿ: ಬಸವ ಜಯಂತಿ ನಿಮಿತ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬಿ ಗೌರವಿಸಲಾಯಿತು.

ವಿಧವಾ ತಾಯಂದಿರನ್ನು ಮಂಗಳಮಯ ಕಾರ್ಯಕ್ರಮಗಳಿಂದ ದೂರವಿಡುವ ಈ ಸಮಾಜ ಅವರತ್ತ ವಕ್ರ ದೃಷ್ಟಿಯನ್ನು ಬೀರುತ್ತದೆ. ಇಂತಹ ಅರ್ಥವಿಲ್ಲದ ವಕ್ರದೃಷ್ಟಿಯನ್ನ ಬದಲಿಸಿ ಅವರನ್ನು ಪ್ರೀತಿ, ವಿಶ್ವಾಸ, ವಾತ್ಸಲ್ಯ, ಆತ್ಮೀಯತೆಯಿಂದ ಕಾಣಬೇಕೆಂಬ ಬಸವಾದಿ ಶರಣರ ಸಂದೇಶ ಸಾರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಲ್ಲಿಕಾರ್ಜುನ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಯ ಪ್ರಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ವೈದ್ಯೆ ಡಾ.ಪ್ರತಿಮಾ ಎಸ್.ಕಾಮರೆಡ್ಡಿ, ‘ಇಂದಿನ ಬಹುತೇಕ ಸಂಸಾರಗಳು ಮಹಿಳೆಯರ ಶ್ರಮ ಹಾಗೂ ಕಾಳಜಿಯ ಮೇಲೆ ನಿರ್ವಹಣೆಯಾಗುತ್ತಲಿವೆ. ಇಡೀ ಸಂಸಾರದ ಕಳಕಳಿ ಹೊಂದಿರುವ ಮಹಿಳೆಯರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ದುಡಿಯುತ್ತಿದ್ದಾರೆ. ಗಂಡ ಕುಡುಕನಾದರೂ, ದೈಹಿಕ, ಮಾನಸಿಕ ಕಿರುಕುಳವಿದ್ದರೂ ತಮ್ಮವರ ಕ್ಷೇಮವನ್ನೇ ಬಯಸುವ ಕ್ಷಮಯಾ ಧರಿತ್ರಿಯಾಗಿದ್ದಾಳೆ. ಗಂಡನನ್ನು ಕಳೆದುಕೊಂಡ ಮಹಿಳೆಯ ಬದುಕು ಅಕ್ಷರಶಃ ಒಂದು ಹೋರಾಟವಾಗಿರುತ್ತದೆ. ಅವರಿಗೆ ಮಾನಸಿಕ ಮತ್ತು ಕೌಟುಂಬಿಕ ಸಹಕಾರ ಕೊಡುವುದು ಸಮಾಜದ ಹೊಣೆಗಾರಿಕೆಯಾಗಿದೆ’ ಎಂದರು.

ADVERTISEMENT

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ‘ಪಿತೃ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳೆಯರ ಬಗೆಗಿನ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ. ಸರ್ವ ಕ್ಷೇತ್ರಗಳಲ್ಲಿ ಸಬಲಳಾಗಿ ದುಡಿಯುತ್ತಿರುವ ಮಹಿಳೆ ತಾನು ಅಬಲೆ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಸ್ವಾಭಿಮಾನದಿಂದ ಬದುಕಿ ಸಮಾಜಕ್ಕೆ ಕಣ್ಣಾಗಿದ್ದಾಳೆ. ಹಾಗಾಗಿ, ‘ಹೆಣ್ಣು ಸಮಾಜದ ಹುಣ್ಣಲ್ಲ' ಎಂಬ ಮನೋಭಾವ ಮೂಡಬೇಕಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರು ಸರ್ವಸಮಾನತೆಯ ಸಮಾಜವನ್ನು ಕಟ್ಟಬಯಸಿದ್ದರು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ಅಲ್ಲಗಳೆದು ಶರಣ ಚಿಂತನೆಯನ್ನು ಇಂದಿನ ಸಮಾಜಕ್ಕೆ ತಲುಪಿಸುವ ಒಂದು ಪ್ರಾಮಾಣಿಕ ಪ್ರಯತ್ನವೇ ಈ ಕಾರ್ಯಕ್ರಮದ್ದಾಗಿದೆ’ ಎಂದು ಹೇಳಿದರು.

ಸಂಘಟಕಿ ಸವಿತಾ ಸಜ್ಜನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಕಾರಾಬಾದ ಬ್ರಹ್ಮಕುಮಾರಿಸ್‌ ನಿರ್ದೇಶಕಿ ರಾಜಯೋಗಿನಿ ಬಿ.ಕೆ.ರತ್ನಾ ನೇತೃತ್ವ ವಹಿಸಿದ್ದರು. ಬ್ರಹ್ಮಕುಮಾರಿಗಳಾದ ರೇಖಾ, ಭಾಗೀರಥಿ ಮಾತನಾಡಿದರು.

ಶರಣ ಚಿಂತಕರಾದ ಬಿ.ಬಿ.ರಾಂಪೂರೆ, ಹಿರಿಯ ಕವಯತ್ರಿ ಶಕುಂತಲಾ ಪಾಟೀಲ ಜಾವಳಿ, ಯುವ ಮುಖಂಡ ಅಪ್ಪು ಕಣಕಿ, ಸಾಮಾಜಿಕ ಚಿಂತಕರಾದ ಮಮತಾ ಗಂಗಸಿರಿ, ಸವಿತಾ ಪಾಟೀಲ ಸೊಂತ, ಶುಭಾಂಗಿ ಐಹೊಳೆ, ಡಾ.ನಾಗರತ್ನಾ ಬಿ.ದೇಶಮಾನೆ, ಪ್ರಮುಖರಾದ ಶ್ರೀಕಾಂತ ಪಾಟೀಲ ತಿಳಗೂಳ, ಪ್ರಭುಲಿಂಗ ಮೂಲಗೆ, ಎಸ್.ಎಂ.ಪಟ್ಟಣಕರ್, ಡಾ.ಕೆ.ಗಿರಿಮಲ್ಲ, ಮಾಲತಿ ರೇಷ್ಮಿ, ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ಶಿವಾನಂದ ಮಠಪತಿ, ಡಾ.ನಾಗರಾಜ ಹೆಬ್ಬಾಳ, ಶಿವಕುಮಾರ ಸಿ.ಎಚ್. ಹಣಮಂತರಾವ ಪಾಟೀಲ ಕುಸನೂರ, ಸಾಬಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.