ಕಲಬುರಗಿ: 'ಕೌಟುಂಬಿಕ, ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಪ್ರಕರಣಗಳಲ್ಲಿನ ಸಂತ್ರಸ್ತ ಮಹಿಳೆಯರಿಗೆ ದೂರು ನೀಡಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಮಹಿಳಾ ಆಯೋಗದ ಸೆಲ್ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು' ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಆಯೋಗಕ್ಕೆ ದೂರು ಸಲ್ಲಿಸಲು ಜಿಲ್ಲಾ ಹಂತದಲ್ಲಿ ವ್ಯವಸ್ಥೆಯಾದರೆ ಮಹಿಳೆಯರಿಗೆ ಅನುಕೂಲವಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿಯೇ ಒಂದು ಸೆಲ್ ಸ್ಥಾಪನೆಯಾಗಿ, ಸಿಬ್ಬಂದಿ ನಿಯೋಜನೆಗೊಂಡರೆ ದೂರದ ಬೆಂಗಳೂರಿಗೆ ಬರುವುದು ತಪ್ಪಲಿದೆ' ಎಂದರು.
'ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಮಹಿಳೆಯರ ಕಳ್ಳ ಸಾಗಾಣೆಗೆ ಕಡಿವಾಣ ಹಾಕಬೇಕಿದೆ. ಅಪಹರಣಕ್ಕೆ ಒಳಗಾಗುವ ಬಾಲಕಿಯರು ಹಾಗೂ ಮಹಿಳೆಯರನ್ನು ಕಾನೂನು ಬಾಹಿರಚಟುವಟಿಕೆಗಳಿಗೆ ಬಳಸಿಕೊಳ್ಳುವ ದೊಡ್ಡ ಮಾಫಿಯಾ ಇದೆ. ಇದಕ್ಕೆಲ್ಲ ನಿಯಂತ್ರಣ ಹೇರಬೇಕಿದೆ. ಇದಕ್ಕಾಗಿ ಮಹಿಳಾ ಸಂಬಂಧಿತ ಇಲಾಖೆಗಳು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು' ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಕ್ಷಯ್ ಹಾಕೈ, ಡಿಸಿಪಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಎಸಿಪಿ ಬಿಂದುಮಣಿ ಆರ್.ಎನ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.