ADVERTISEMENT

ಕಲಬುರಗಿ: ಮಹಿಳಾ ಸಬಲೀಕರಣಕ್ಕೆ ‘ಡ್ರೋಣ್‌’ ಬಲ

ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ 12 ಡ್ರೋಣ್‌ ಸಖಿಯರು

ಮಲ್ಲಪ್ಪ ಪಾರೇಗಾಂವ
Published 6 ಸೆಪ್ಟೆಂಬರ್ 2024, 6:18 IST
Last Updated 6 ಸೆಪ್ಟೆಂಬರ್ 2024, 6:18 IST
ಡ್ರೋಣ್‌ ಸಖಿ ಸಂಗೀತಾ ಅವರಿಗೆ ಇಫ್ಕೋ ಕಂಪನಿಯವರು ನೀಡಿರುವ ಎಲೆಕ್ಟ್ರಿಕ್‌ ವಾಹನ ಹಾಗೂ ಡ್ರೋಣ್‌
ಡ್ರೋಣ್‌ ಸಖಿ ಸಂಗೀತಾ ಅವರಿಗೆ ಇಫ್ಕೋ ಕಂಪನಿಯವರು ನೀಡಿರುವ ಎಲೆಕ್ಟ್ರಿಕ್‌ ವಾಹನ ಹಾಗೂ ಡ್ರೋಣ್‌   

ಕಲಬುರಗಿ: ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭ ಪಡೆದುಕೊಂಡು ಸ್ವಾಭಿಮಾನದ ಬದುಕು ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಜಿಲ್ಲೆಯ ‘ಕಲಬುರಗಿ ಡ್ರೋಣ್‌ ಸಖಿ’ಯರ ತಂಡವು ಮಾದರಿಯಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ತಂಡ ಮಾಡುತ್ತಿದೆ.

‘ಡ್ರೋಣ್‌ ಸಖಿ’ ತಂಡದಲ್ಲಿ 12 ಮಹಿಳೆಯರಿದ್ದು, ಎಲ್ಲರೂ ಡ್ರೋಣ್‌ ಚಾಲನಾ ತರಬೇತಿ ಹಾಗೂ ಪರವಾನಗಿ ಪಡೆದಿದ್ದಾರೆ. ಜಿಲ್ಲೆಯಲ್ಲಿ ಡ್ರೋಣ್‌ ಬಳಸಿ, ರೈತರ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡುವ ಮೂಲಕ ಉತ್ತಮ ಆದಾಯವನ್ನೂ ಗಳಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಕೇಂದ್ರ ಸರ್ಕಾರದ ‘ನಮೋ ಡ್ರೋಣ್‌ ದೀದಿ’ ಯೋಜನೆ ಸಂಪೂರ್ಣ ಲಾಭ ಪಡೆದಿರುವ ಸಖಿಯರು, ಸಂಜೀವಿನಿ–ಎನ್‌ಆರ್‌ಎಲ್‌ಎಂ ಯೋಜನೆ ಅಡಿಯಲ್ಲಿ ವಿವಿಧ ಕಂಪನಿಗಳಿಂದ ತರಬೇತಿ ಪಡೆದು ಡ್ರೋಣ್‌ಗಳನ್ನು ಸ್ವಯಂ ಚಾಲನೆ ಮಾಡುವ ಮೂಲಕ ಬೆರಗುಗೊಳಿಸಿದ್ದಾರೆ. ಸರ್ಕಾರದ ಇಫ್ಕೋ, ಕೋರಮಂಡಲ, ಆರ್‌ಸಿಎಫ್‌ ಸೇರಿದಂತೆ ಇತರ ಹಲವು ಕಂಪನಿಗಳು, ಮೈಸೂರು, ಹೈದರಾಬಾದ್‌ ಮತ್ತು ಚನ್ನೈಗಳಲ್ಲಿ ತರಬೇತಿ ನೀಡುತ್ತವೆ.

ADVERTISEMENT

ಏನೇನು ಸೌಲಭ್ಯ ಸಿಗುತ್ತವೆ: ಡ್ರೋಣ್‌ ಚಾಲನಾ ತರಬೇತಿ ನೀಡಿದ ಕಂಪನಿಯೇ ಮಹಿಳೆಯರಿಗೆ ಉಚಿತವಾಗಿ ಡ್ರೋಣ್‌, ಅದರ ಪರಿಕರಗಳು, ಅಗತ್ಯವಿರುವ ಎಲೆಕ್ಟ್ರಿಕ್‌ ವಾಹನ ಹಾಗೂ ಜನರೇಟರ್‌ ಅನ್ನು ಉಚಿತವಾಗಿ ನೀಡುತ್ತದೆ.

‘ಡಿಜಿಟಲ್‌ ಯುಗದಲ್ಲಿ ಕೃಷಿಯಲ್ಲಿ ಡ್ರೋಣ್‌ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಬೆಳೆಗಳಿಗೆ ಅಗತ್ಯವಿರುವ ದ್ರವರೂಪದ ಕೀಟನಾಶಕ, ರಸಗೊಬ್ಬರ ಸಿಂಪಡಣೆಗೆ ಡ್ರೋಣ್‌ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ರೈತರ ಸಮಯ ಮತ್ತು ವೆಚ್ಚ ಎರಡೂ ಕಡಿಮೆಯಾಗುತ್ತದೆ. ಕೂಲಿಕಾರ್ಮಿಕರನ್ನು ಅವಲಂಬಿಸುವ ಅಗತ್ಯವಿರುವುದಿಲ್ಲ. ಕೃಷಿ ಕೆಲಸ ಮಾಡುವಾಗ ಹಾವು ಸೇರಿದಂತೆ ವಿಷಜಂತುಗಳು ಕಚ್ಚಿ ಸಾವು ಸಂಭವಿಸುವ ಅಪಾಯವೂ ಇರುವುದಿಲ್ಲ. ಉತ್ಪಾದನೆಯಲ್ಲೂ ಹೆಚ್ಚಳ ಕಂಡು ಬರುತ್ತಿದ್ದು, ರೈತ ಸ್ನೇಹಿಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ಮಾಹಿತಿ ನೀಡಿದರು.

‘ಒಂದು ಎಕರೆ ಔಷಧ ಸಿಂಪಡಣೆಗೆ ಸುಮಾರು 10ರಿಂದ 15 ನಿಮಿಷ ಸಾಕಾಗುತ್ತದೆ. 1ರಿಂದ 1.5 ಚದರ ಕಿ.ಮೀ. ವಿಸ್ತೀರ್ಣ ಪ್ರದೇಶದಲ್ಲಿ ಡ್ರೋಣ್‌ ಚಾಲನೆ ಮಾಡಬಹುದಾಗಿದೆ. ಬೆಳೆಗೆ ಸಮಪ್ರಮಾಣದಲ್ಲಿ ಔಷಧ ಸಿಂಪಡಣೆ ಆಗುವುದರಿಂದ ಫಲಿತಾಂಶವೂ ಉತ್ತಮವಾಗಿರುತ್ತದೆ. ರೋಗಗಳು ಹಾಗೂ ಕೀಟಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ ಕಡಿಮೆಯೆಂದರೂ 10ರಿಂದ 15 ಎಕರೆವರೆಗೆ ಡ್ರೋಣ್‌ ಮೂಲಕ ಔಷಧ ಸಿಂಪಡಣೆ ಮಾಡಬಹುದು. ದಿನಕ್ಕೆ ಕಡಿಮೆಯೆಂದರೂ ₹5 ಸಾವಿರದಿಂದ ₹6 ಸಾವಿರ ಆದಾಯ ಸಿಗುತ್ತದೆ. ಡ್ರೋಣ್‌ ಅನ್ನು ಯೋಗ್ಯ ರೀತಿಯಲ್ಲಿ ಬಳಸಿದರೆ, ತಿಂಗಳಿಗೆ ಹೆಚ್ಚಿನ ಆದಾಯ ಗಳಿಕೆ ಮಾಡಬಹುದಾಗಿದೆ’ ಎಂದು ಅವರು ತಿಳಿಸಿದರು.

ಔಷಧ ಸಿಂಪಡಣೆಗಾಗಿ ಸಿದ್ಧತೆಯಲ್ಲಿ ತೊಡಗಿರುವ ಡ್ರೋಣ್‌ ಸಖಿ ಸಂಗೀತಾ

‘ಒಂದು ಬಾರಿ ಚಾರ್ಚ್‌ ಮಾಡಿದರೆ ಅರ್ಧ ತಾಸು ನಡೆಯುತ್ತದೆ. ಒಂದು ಬಾರಿಗೆ 10 ಲೀಟರ್‌ ಔಷಧ ಸಿಂಪಡಣೆ ಮಾಡಹಬುದು. ಒಂದು ಎಕರೆ ಔಷಧ ಸಿಂಪಡಣೆಗೆ ₹400 ಪಡೆಯುತ್ತೇವೆ. ಒಂದು ದಿನದಲ್ಲಿ ಕಡಿಮೆಯೆಂದರೂ 4ರಿಂದ 5 ಎಕರೆವರೆಗೂ ಔಷಧ ಸಿಂಪಡಣೆ ಮಾಡುತ್ತೇವೆ. ಇದರಿಂದ ರೈತರಿಗೂ ವೆಚ್ಚ ಕಡಿಮೆಯಾಗುತ್ತದೆ. ಉದ್ದು, ಹೆಸರು, ಅಲಸಂಧೆ ಸೇರಿದಂತೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಬಾಳೆತೋಟ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳಿಗೂ ಋತುಮಾನಕ್ಕೆ ತಕ್ಕಂತೆ ಔಷಧ ಸಿಂಪಡಣೆ ಮಾಡುತ್ತೇವೆ. ಈವರೆಗೂ 150ಕ್ಕೂ ಹೆಚ್ಚು ಎಕರೆಯಲ್ಲಿ ಔಷಧ ಸಿಂಪಡಣೆ ಮಾಡಿದ್ದೇನೆ’ ಎಂದು ‘ಡ್ರೋಣ್‌ ಸಖಿ’ ಸಂಗೀತಾ ಹೇಳಿದರು.

ಡ್ರೋಣ್‌ ಸಖಿಯರು: ಬನಶಂಕರಿ ನಿಂಬಾಳ, ಕನ್ಯಾಕುಮಾರಿ ನಿಂಬಾಳ, ಜಕ್ಕಮ್ಮ ಕೋಟ್ಯಾಳ, ವಿಜಯಲಕ್ಷ್ಮಿ ನಾಗೂರ, ಅನ್ನಪೂರ್ಣಾ ಆಲೆಗಾಂವ, ಸುಧಾರಾಣಿ ಉಪ್ಪಿನ, ಮಂಜುಳಾ ಅಣಬಿ, ಫಾತಿಮಾ ಶೇರಖಾನ, ಕವಿತಾ ಸುಗ್ಗಾ, ಸುಧಾರಾಣಿ ನಿಂಬರ್ಗಾ, ಸುಧಾರಾಣಿ ಪಾಟೀಲ ಅವರು ಡ್ರೋಣ್‌ ಸಖಿಯರಾಗಿದ್ದಾರೆ. ರೈತರು ತಮ್ಮ ಹೊಲಗಳಿಗೆ ಔಷಧ ಸಿಂಪಡಣೆಗಾಗಿ ಡ್ರೋಣ್‌ ಸಖಿಯರನ್ನು ಸಂಪರ್ಕಿಸಬಹುದು.

ಸಮದ್‌ ಪಟೇಲ್‌ ಕೃಷಿ ಜಂಟಿ ನಿರ್ದೇಶಕ
ಗ್ರಾಮೀಣ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಡ್ರೋಣ್‌ ಯೋಜನೆ ಹೇಳಿ ಮಾಡಿಸಿದಂತಿದೆ. ಡ್ರೋಣ್‌ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು
ಸಮದ್‌ ಪಟೇಲ್‌ ಕೃಷಿ ಇಲಾಖೆ ಉಪ ನಿರ್ದೇಶಕ
ಐಲರೆಡ್ಡಿ ಪೊಲೀಸ್‌ಪಾಟೀಲ ರೈತ
ಕೂಲಿಕಾರ್ಮಿಕರ ಸಮಸ್ಯೆಯಿತ್ತು. ಡ್ರೋಣ್‌ ಬಳಸಿದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವಾಯಿತು. ಐದಾರು ತಾಸುಗಳಲ್ಲಿ 24 ಎಕರೆ ಔಷಧ ಸಿಂಪಡಣೆ ಮಾಡಲಾಯಿತು. ಸಮಪ್ರಮಾಣದಲ್ಲಿ ಔಷಧ ಸಿಂಪಡಣೆ ಆಗುವುದರಿಂದ ಕೀಟಗಳು ಹತೋಟಿಗೆ ಬಂದಿವೆ
ಐಲರೆಡ್ಡಿ ಪೊಲೀಸ್‌ಪಾಟೀಲ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.