ಕಲಬುರಗಿ: ‘ಮಹಿಳೆ ಎಂದರೆ ಕೇವಲ ಹೆಣ್ಣು ಜೀವಿಯಲ್ಲ. ಸಂಸ್ಕೃತಿಯ ಸಾಕಾರ ರೂಪ. ಸಮಾಜದ ಅಸ್ತಿತ್ವ ಮತ್ತು ಅಸ್ಮಿತೆ’ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ ಅಭಿಪ್ರಾಯಪಟ್ಟರು.
ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಮತ್ತು ಶರಣಬಸವ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಭಾನುವಾರ ನಡೆದ ‘ಸಶಕ್ತ ಮಹಿಳೆ ಸದೃಢ ಭಾರತ’ ಪ್ರಾಂತ ಮಟ್ಟದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ಮಹಿಳೆಯನ್ನು ಕೇವಲ ಹೆಣ್ಣು ಜೀವಿ ಎಂದು ನೋಡದೆ ಅದರಾಚೆಗೂ ಗ್ರಹಿಸಬೇಕಾದ ಅಗತ್ಯ ಇದೆ’ ಎಂದರು.
‘ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯಲ್ಲಿ ಮಹಿಳೆಯು ಪುರುಷ ಯಜಮಾನಿಕೆಯ ಸ್ವತ್ತಾಗಿದ್ದಾಳೆ. ಜಾಹೀರಾತಿನಲ್ಲಿ ಮಹಿಳೆಯನ್ನು ವಸ್ತುವನ್ನಾಗಿ ತೋರಿಸಲಾಗುತ್ತಿದೆ. ಈ ಶೋಷಣೆ ತಪ್ಪಿಸಲು ಮಹಿಳಾ ಕೇಂದ್ರಿತ ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಯಾಗಬೇಕು’ ಎಂದು ಹೇಳಿದರು.
‘ಇಂದು ಮಹಿಳೆ ಆಧುನಿಕತೆಯ ಸುನಾಮಿ, ದೇಸಿ ವಿಚಾರಧಾರೆಗಳ ನಡುವಿನ ಸಂಘರ್ಷಕ್ಕೆ ಬಲಿಯಾಗುತ್ತಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿಯ ಸಾಮಾಜಿಕ ವಿಕೃತಿಗಳು ಅವಳನ್ನು ಕೃಷವಾಗಿಸುತ್ತಿವೆ. ಶರಣರ ಕಾಲದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆದ ಅಕ್ಕಮಹಾದೇವಿಯವರನ್ನು ಮಾದರಿಯಾಗಿಟ್ಟುಕೊಂಡು ಮಹಿಳೆಯರ ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸಬೇಕು’ ಎಂದರು.
‘ಸ್ತ್ರೀವಾದ ಪುರುಷ ವಿರೋಧಿಯಲ್ಲ. ಅದು ಪುರುಷರನ್ನೂ ಒಳಗೊಳ್ಳಬೇಕು. 2047ರ ಹೊತ್ತಿಗೆ ದೇಶವನ್ನು ವಿಕಸಿತ ಭಾರತ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಶೇ 50ರಷ್ಟಿರುವ ಮಹಿಳೆಯರ ಅಭಿವೃದ್ಧಿಗೆ ಯೋಜಿಸಲಾಗಿದೆ. ಮಹಿಳಾ ನಾಯಕತ್ವದ ಬೆಳವಣಿಗೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.
ಗುಜರಾತ್‌ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಮಿ ಉಪಾಧ್ಯಾಯ ಮಾತನಾಡಿ, ‘ವಿಶ್ವಕ್ಕೆ ಅರ್ಧನಾರೀಶ್ವರ ತತ್ವ ನೀಡಿದ ನೆಲದಲ್ಲಿ ನಿಂತು ಮಹಿಳಾ ಸಬಲೀಕರಣದ ಕುರಿತು ಮಾತನಾಡುತ್ತಿದ್ದೇವೆ. ಇದಕ್ಕಿಂತ ದಡ್ಡತನ ಮತ್ತೊಂದಿಲ್ಲ’ ಎಂದರು.
‘ದ್ರೌಪದಿ, ಸೀತಾ ಹಾಗೂ ಮೀರಾರ ಭೂಮಿ ಇದು. ವೇದಗಳ ಕಾಲದಲ್ಲಿಯೂ ಮಹಿಳೆಯರನ್ನು ಗೌರವಿಸಿದ ನೆಲ ಇದು. ಮಾತೃ ಭೂಮಿ, ಮಾತೃಭಾಷೆ, ಗಂಗಾ, ಯಮುನಾ ಎನ್ನುವ ಪದಗಳಲ್ಲಿಯೂ ಮಹಿಳಾ ಗೌರವ ಅಡಕವಾಗಿದೆ. ಇದು ಪುರುಷ ಹಾಗೂ ಮಹಿಳಾ ಪ್ರಧಾನ ಸಮಾಜವಲ್ಲ. ಧರ್ಮ ಪ್ರಧಾನ ಸಮಾಜ’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ‘ಮಹಿಳೆಯರನ್ನು ಹೊರಗಿಟ್ಟು ದೇಶದ ಅಭಿವೃದ್ಧಿ ಕುರಿತು ಯೋಚಿಸಲು ಸಾಧ್ಯವಿಲ್ಲ. ಸಿಂಧೂ ನಾಗರಿಕತೆಯ ಸಂದರ್ಭದಲ್ಲೂ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡಲಾಗಿತ್ತು. ದೇವತೆಗಳನ್ನು ಪೂಜಿಸಲಾಗುತ್ತಿತ್ತು’ ಎಂದರು.
ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಬಸವರಾಜ ಅನಾಮಿ, ಜಿಲ್ಲಾಧ್ಯಕ್ಷ ಬಸವರಾಜ ದೇಶಮುಖ, ಸಹ ಕಾರ್ಯದರ್ಶಿ ಪಲ್ಲವಿ ಪಾಟೀಲ ಸೇಡಂ ಹಾಜರಿದ್ದರು.
‘ಸ್ತ್ರೀ ಸೃಷ್ಟಿಯ ಮೂಲ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪ ಹೇಳಿದರು. ‘ಶಿವಾಜಿಯನ್ನು ರೂಪಿಸಿದ ಜೀಜಾಬಾಯಿ ಸ್ತ್ರೀಯರ ಮಹತ್ವ ಎತ್ತಿ ತೋರಿಸಿದ್ದಾರೆ. ಇಂದಿನ ಯುವತಿಯರು ಜೀಜಾಬಾಯಿಯವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಉತ್ತಮವಾಗಿ ಬೆಳೆಯಬೇಕು’ ಎಂದರು. ‘ಎಷ್ಟೇ ಕಠಿಣ ಕಾನೂನುಗಳು ಬಂದರೂ ಮಹಿಳಾ ಶೋಷಣೆ ನಿಲ್ಲುತ್ತಿಲ್ಲ. ಸಮಾಜದಲ್ಲಿ ಇನ್ನೂ ಅತ್ಯಾಚಾರ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿವೆ’ ಎಂದು ವಿಷಾದಿಸಿದರು.
‘ಶರಣಬಸವೇಶ್ವರ ಸಂಸ್ಥಾನದಲ್ಲಿ ಶೇ 60ರಷ್ಟು ಕೆಲಸ ಮಹಿಳೆಯರೇ ಮಾಡುತ್ತಿದ್ದಾರೆ. ಸಂಸ್ಥಾನದ ಶಿಕ್ಷಣ ಸಂಸ್ಥೆಗಳಲ್ಲಿ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಪ್ರವೇಶ ಪಡೆದಿದ್ದಾರೆ. ಸಂಸ್ಥಾನ ಮೊದಲಿನಿಂದಲೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ’ ಎಂದರು.
‘ಸೀತೆ ಊರ್ಮಿಳೆಯರು ಕೌಟುಂಬಿಕ ಮೌಲ್ಯಗಳ ಜೊತೆ ನಿಂತು ಮಾದರಿಯಾಗಿದ್ದಾರೆ. ಆದರೆ ಇಂದು ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ. ಕುಟುಂಬ ಹಾಗೂ ಮದುವೆ ಪದಗಳು ಅರ್ಥ ಕಳೆದುಕೊಳ್ಳುತ್ತಿವೆ’ ಎಂದು ಉಪನ್ಯಾಸಕಿ ಅಕ್ಷಯ ಗೋಖಲೆ ಹೇಳಿದರು.
‘ಸಶಕ್ತ ಮಹಿಳೆ ಸದೃಢ ಭಾರತ’ ಪ್ರಾಂತ ಮಟ್ಟದ ಮಹಿಳಾ ಸಮಾವೇಶದ ಪ್ರಯುಕ್ತ ನಡೆದ ‘ಕೌಟುಂಬಿಕ ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನ’ ಗೋಷ್ಠಿಯಲ್ಲಿ ಮಾತನಾಡಿದರು. ‘ಮಹಿಳೆಯರು ಸೀತೆಯ ಅಗ್ನಿ ತತ್ವ ಧರಿಸಿಕೊಳ್ಳಬೇಕು. ದ್ರೌಪದಿಯ ಪತಿವ್ರತತ್ವ ಅಳವಡಿಸಿಕೊಳ್ಳಬೇಕು. ಅಂದಾಗ ಮಾದರಿಯಾಗಿ ನಿಲ್ಲಲು ಸಾಧ್ಯ’ ಎಂದರು. ‘ಮಹಿಳೆಯರಿಗೆ ಕ್ರಾಂತಿಕಾರಿಗಳ ತಾಯಂದಿರು ಹಾಗೂ ಶಿವಾಜಿಯ ತಾಯಿ ಜೀಜಾಬಾಯಿ ಮಾದರಿಯಾಗಬೇಕು’ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಪುಟ್ಟಮಣಿ ದೇವಿದಾಸ ಮಾತನಾಡಿ ‘ಕಲ್ಯಾಣದ ಬಸವಾದಿ ಶರಣರು ಹಾಗೂ ಸಂವಿಧಾನದ ಕಾರಣದಿಂದ ಮಹಿಳೆಯರಿಗೆ ಹಕ್ಕುಗಳು ಸಿಕ್ಕಿವೆ’ ಎಂದರು. ಶರಣಬಸವ ವಿವಿ ಡೀನ್ ಲಕ್ಷ್ಮೀ ಪಾಟೀಲ ಮಾಕಾ ಪ್ರತಿಭಾ ಚಾಮಾ ಕಲ್ಪನಾ ನಿತೀನ್ ಗುತ್ತೇದಾರ ಸೇರಿ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.