ಯಡ್ರಾಮಿ: ಪಟ್ಟಣಕ್ಕೆ 2015ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾದರೂ ಬಹಳ ಸಮಯದವರೆಗೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. 2021ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಯಿತು. ಆದರೆ, ಆರಂಭದಲ್ಲೇ ಉಪನ್ಯಾಸಕರ ಕೊರತೆ, ಕಂಪೌಂಡ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಕಾಡುತ್ತಿದೆ.
ಪ್ರಥಮ ಪಿಯುಗೆ ಈವರೆಗೂ 17 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದು ಪ್ರವೇಶ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ದ್ವಿತೀಯ ಪಿಯುನಲ್ಲಿ 61 ವಿದ್ಯಾರ್ಥಿಗಳು ಸೇರಿ ಒಟ್ಟು 78 ವಿದ್ಯಾರ್ಥಿಗಳಿದ್ದಾರೆ.
ಕಳೆದ ವರ್ಷ ಪ್ರಥಮ ಪಿಯುನಲ್ಲಿ 85 ವಿದ್ಯಾರ್ಥಿಗಳು, 87 ವಿದ್ಯಾರ್ಥಿನಿಯರು, ದ್ವಿತೀಯ ಪಿಯುಸಿಯಲ್ಲಿ 32 ವಿದ್ಯಾರ್ಥಿಗಳು, 44 ವಿದ್ಯಾರ್ಥಿನಿಯರು ಸೇರಿ ಒಟ್ಟು 248 ವಿದ್ಯಾರ್ಥಿಗಳು ಇದ್ದರು.
2023-24ನೇ ಸಾಲಿನಲ್ಲಿ ಈ ಕಾಲೇಜಿನಲ್ಲಿ ಮೂವರು ಕಾಯಂ ಉಪನ್ಯಾಸಕರು, ಇಬ್ಬರು ಅತಿಥಿ ಉಪನ್ಯಾಸಕರು, ಒಬ್ಬರು ನಿಯೋಜಿತ ಉಪನ್ಯಾಸಕರು ಇದ್ದರು. ಒಬ್ಬ ಎಫ್‍ಡಿಸಿ ಹೊರತುಪಡಿಸಿದರೆ ಪ್ರಸಕ್ತ ಸಾಲಿನಲ್ಲಿ ಪ್ರಸ್ತುತ ಅತಿಥಿ ಶಿಕ್ಷಕರು, ಕಾಯಂ ಶಿಕ್ಷಕರು, ಪ್ರಾಂಶುಪಾಲರೂ ಇಲ್ಲ.
ನೆಲೋಗಿ ಕಾಲೇಜಿನ ಪ್ರಾಂಶುಪಾಲರಿಗೇ ಸದ್ಯ ಯಡ್ರಾಮಿ, ಮಳ್ಳಿ ಕಾಲೇಜಿನ ಪ್ರಭಾರ ವಹಿಸಲಾಗಿದೆ.
ಯಡ್ರಾಮಿ ಪಿಯು ಕಾಲೇಜಿನಲ್ಲಿ ಪ್ರಯೋಗಾಲಯ ಇಲ್ಲ. ಇಲ್ಲಿ ಹೊಸ ಕಾಲೇಜಿಗೆ ಬೇಡಿಕೆ ಇದೆ. ವಿಜ್ಞಾನ, ಅರ್ಥಶಾಸ್ತ್ರ, ಇಂಗ್ಲೀಷ್ ಸೇರಿ ಅನೇಕ ವಿಷಯಗಳ ಉಪನ್ಯಾಸಕರಿಲ್ಲ. ಪ್ರತ್ಯೇಕ ಕಂಪ್ಯೂಟರ್ ಕೊಠಡಿ ಇಲ್ಲ, ಕಾಲೇಜು ಕಾಂಪೌಂಡ್‌ನ ಎತ್ತರ ಕಡಿಮೆ ಇರುವುದರಿಂದ ಕಿಡಿಗೇಡಿಗಳು ರಾತ್ರಿ ವೇಳೆ ಇಲ್ಲಿ ಮದ್ಯಪಾನ ಮಾಡಿ ಹೋಗುತ್ತಾರೆ. ಇದರಿಂದ ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಿಂದ ಮಳ್ಳಿಯ ಪದವಿ ಪೂರ್ವ ಕಾಲೇಜು ಆರಂಭವಾಗಿದೆ ಆದರೆ ಇಲ್ಲಿ ಯಾವುದೇ ಹುದ್ದೆಯ ಮಂಜೂರಾತಿ ಇಲ್ಲ. ವರ್ಷಕ್ಕೆ 60 ರಿಂದ 70 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ಮಕ್ಕಳ ವಿದ್ಯಾಬ್ಯಾಸ ಕುಂಠಿತಗೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ಮಾಹಿತಿಗಾಗಿ ಮಳ್ಳಿ ಪಿಯು ಕಾಲೇಜುಗಳ ಪ್ರಾಂಶುಪಾಲ ಪಂಡಿತ್‌ರಾರ್ ಪವಾರ್ ನೆಲೋಗಿ ಅವರಿಗೆ ಮಾಡಿದರೆ ಸಂಪರ್ಕಕ್ಕೆ ಸಿಕ್ಕಿಲ್ಲ.
ಕಳೆದ ವರ್ಷದ ಎಲ್ಲ ಅತಿಥಿ ಶಿಕ್ಷಕರು ಕಾಯಂ ಶಿಕ್ಷಕರು ಪ್ರಾಂಶುಪಾಲರು ಎಲ್ಲರೂ ವರ್ಗಾವಣೆಗೊಂಡಿದ್ದಾರೆ. ಈ ವರ್ಷ ಮತ್ತೆ ಹೊಸದಾಗಿ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳುತ್ತೇವೆ. ಮಳ್ಳಿಯಲ್ಲಿನ ಕಾಲೇಜು ಕೆಕೆಆರ್‌ಡಿಬಿ ವತಿಯಿಂದ ಆರಂಭವಾಗಿರುವುದರಿಂದ ಕಳೆದ ನಾಲ್ಕು ವರ್ಷದಿಂದ ಅತಿಥಿ ಉಪನ್ಯಾಕರೇ ಇದ್ದಾರೆ.ಶಿವಶರಣಪ್ಪ ಮೂಳೆಗಾವ, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.