ಯಡ್ರಾಮಿ: ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳ ಜತೆಗೆ ಕಾಯಂ ಶಿಕ್ಷಕರ ಅಭಾವ ಬಹುವಾಗಿ ಕಾಡುತ್ತಿದೆ.
ಪಟ್ಟಣದ ಕರ್ನಾಟಕ ಪಬ್ಲಿಕ್‌ಶಾಲೆ, ಸರ್ಕಾರಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆ, ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ, ಉರ್ದು ಪ್ರಾಥಮಿಕ ಶಾಲೆ ಹಾಗೂ ಉರ್ದು ಪ್ರೌಢಶಾಲೆಗಳಲ್ಲಿ ಬಹುತೇಕ ಶಿಕ್ಷಕರೇ ಇಲ್ಲ. ಇದು ಕೇವಲ ಈ ಶಾಲೆಗಳ ಸ್ಥಿತಿ ಅಲ್ಲ, ತಾಲ್ಲೂಕಿನ ಬಹುತೇಕ ಶಾಲೆಗಳ ಸ್ಥಿತಿ.
ತಾಲ್ಲೂಕಿನಲ್ಲಿ ಸದ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 37 ಕೋಣೆಗಳ ಬೇಡಿಕೆಯಿದೆ. ಈಗಾಗಲೇ 24 ಕೋಣೆಗಳು ಬೀಳುವ ಸ್ಥಿತಿಯಲ್ಲಿವೆ. 36 ಕೋಣೆಗಳ ಮೇಲ್ಚಾವಣಿ ದುರಸ್ಥಿಗಾಗಿ ಎದುರು ನೋಡುತ್ತಿವೆ.
ಯಡ್ರಾಮಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 750 ವಿದ್ಯಾರ್ಥಿಗಳಿದ್ದಾರೆ. ತಲಾ 11 ಜನ ಅತಿಥಿ ಮತ್ತು ಕಾಯಂ ಶಿಕ್ಷಕರಿದ್ದಾರೆ. ಗಣಿತ, ವಿಜ್ಞಾನ ಮತ್ತು ಹಿಂದಿ ಶಿಕ್ಷಕರು ಇಲ್ಲ. ಇನ್ನೂ 14 ಶಿಕ್ಷಕರ ಅಗತ್ಯವಿದೆ ಎನ್ನುತ್ತಾರೆ ಮುಖ್ಯಶಿಕ್ಷಕರು.
ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ 4 ಜನ ಅತಿಥಿ ಶಿಕ್ಷಕರು ಇದ್ದರೆ, ಮೂವರು ಕಾಯಂ ಶಿಕ್ಷಕರಿದ್ದಾರೆ. ಇನ್ನೂ 6 ಜನ ಶಿಕ್ಷಕರ ಕೊರತೆ ಕಾಡುತ್ತಿದೆ.
ಸರ್ಕಾರಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳು ಓದುತ್ತಿದ್ದಾರೆ. 5 ಜನ ಅತಿಥಿ ಶಿಕ್ಷಕರು ಇದ್ದಾರೆ. ಕಾಯಂ ಇರುವ ಒಬ್ಬ ಶಿಕ್ಷಕರು ಮುಖ್ಯಶಿಕ್ಷಕರಾಗಿದ್ದಾರೆ.
ಕರ್ನಾಟಕ ಪಬ್ಲಿಕ್‌ಶಾಲೆ, ಸರ್ಕಾರಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆ, ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಸೇರಿ ಒಟ್ಟು 1,000 ವಿದ್ಯಾರ್ಥಿಗಳಿಗೆ 14 ಜನ ಮಾತ್ರ ಕಾಯಂ ಶಿಕ್ಷಕರು ಇದ್ದಾರೆ. ಆದರೆ 1000 ವಿದ್ಯಾರ್ಥಿಗಳಿಗೆ 33 ಶಿಕ್ಷಕರು ಇರಬೇಕು.
ಐದು ಶಾಲೆಗಳಿಗೆ ಸೇರಿ ಒಂದೇ ಕಾಂಪೌಂಡ್ ಇದೆ. ರಾತ್ರಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಮದ್ಯಪಾನ ಮಾಡಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದು ಸಾಮಾನ್ಯವಾಗಿದೆ. ಬೆಳಿಗ್ಗೆ ಶಾಲೆಗೆ ಬಂದ ಶಿಕ್ಷಕರೇ ಅವುಗಳನ್ನು ಎತ್ತಿ ತೆಗೆದು ಸ್ವಚ್ಛ ಮಾಡಿ, ತರಗತಿಗಳಿಗೆ ಹೋಗುತ್ತಾರೆ. ಪ್ರತಿ ನಿತ್ಯ ಇದೇ ಗೋಳು ಎನ್ನುತ್ತಾರೆ ಶಾಲೆಯ ಶಿಕ್ಷಕರು ಅಲವತ್ತುಕೊಂಡರು.
ತಾಲ್ಲೂಕಿನ ಉಳಿದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಥಿತಿ ಇದಕ್ಕೆ ಹೊರತಾಗಿಲ್ಲ. ಜೇವರ್ಗಿ ಮತ್ತು ಯಡ್ರಾಮಿ ಸೇರಿ ಒಟ್ಟು 232 ಪ್ರಾಥಮಿಕ ಹಾಗೂ 42 ಪ್ರೌಢಶಾಲೆಗಳಿವೆ. ಹಳೆಯ ಶಾಲೆಗಳಿಗೆ ಹೊಸ ಕೋಣೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ಜೇವರ್ಗಿ ಬಿಇಒ ಈರಣ್ಣ ಅವರು ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದರೂ ಕಾರ್ಯ ಆರಂಭವಾಗಿಲ್ಲ.
ಯಡ್ರಾಮಿ– ಜೇವರ್ಗಿ ಸೇರಿ 40 ಶಾಲೆಗಳಿಗೆ ಮಾತ್ರ ಸ್ಮಾರ್ಟ್ ಕ್ಲಾಸ್ ಇದೆ. ಎರಡೂ ತಾಲ್ಲೂಕಿನ 10 ಶಾಲೆಗಳನ್ನು ಮಾದರಿ ಶಾಲೆ ಎಂದು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ ಶಾಲೆಗಳ ಅಭಿವೃದ್ಧಿ ಅಗತ್ಯವಿದೆ.
ಶಾಲೆಯಲ್ಲಿ ಕಾಯಂ ಶಿಕ್ಷಕರ ಕೊರತೆ ಇರುವುದರಿಂದ ಅತಿಥಿ ಶಿಕ್ಷಕರೊಂದಿಗೆ ಶಾಲೆ ನಡೆಸಿಕೊಂಡು ಹೋಗುತ್ತಿದ್ದೇವೆ.–ಬಸವರಾಜ ಪಾಟೀಲ, ಮುಖ್ಯಶಿಕ್ಷಕ ಪಬ್ಲಿಕ್ ಶಾಲೆ ಯಡ್ರಾಮಿ
420 ಶಿಕ್ಷಕರ ಕೊರತೆ ಇದೆ. ಇದರಲ್ಲಿ 52 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ಇಂಗ್ಲಿಷ್ ಸೇರಿ ಇನ್ನೂ ಕೆಲವು ಭಾಷೆಯ ಶಿಕ್ಷಕರು ಸಿಗುತ್ತಿಲ್ಲ ಹಂತ ಹಂತವಾಗಿ ತೆಗೆದುಕೊಳ್ಳುತ್ತೇವೆ.–ಈರಣ್ಣ, ಬಿಇಒ ಯಡ್ರಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.