ಯಡ್ರಾಮಿ: ಪಟ್ಟಣದಿಂದ 4 ಕಿ.ಮೀ ದೂರ ಇರುವ ಸುಂಬಡ ಗ್ರಾಮ ಚಾರಿತ್ರಿಕ ಮಹತ್ವದ ಗ್ರಾಮ. ಗುಡ್ಡದ ಮೇಲಿರುವ ದುಬಲಾಂಬಿಕಾ ದೇವಿಯ ದೇವಾಸ್ಥಾನದಿಂದಾಗಿ ಪ್ರಸಿದ್ಧಿಯಾಗಿದೆ.
ಪೌರಾಣಿಕವಾಗಿ ಅಸುರ ಶಂಭನ ಬೀಡು ಇದಾಗಿದ್ದರಿಂದ ಸುಂಬಡ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಶಾಸನಗಳು ಮಾತ್ರ ಈ ಗ್ರಾಮವನ್ನು ಸುಮುಡ, ಸಿಂಬಡ ಎಂದೇ ಉಲ್ಲೇಖಿಸಿವೆ.
ಕ್ರಿ.ಶ 12ನೇ ಶತಮಾನದ ಶಾಸನವು ಸುಮುಡದ ಪ್ರಭು ಬಸವೇಶ್ವರ ದೇವಗಿರಿಯ ಯಾದವ ದೊರೆ ರಾಮಚಂದ್ರದೇವನ
ಕಾಲದಲ್ಲಿ ಎಳರಾವೆಯ ಶ್ರೀರಾಮೇಶ್ವರ ದೇವರಿಗೆ 30 ಮತ್ತರು ಭೂಮಿಯನ್ನು ಉಂಬಳಿಯಾಗಿ ಬಿಟ್ಟ ಮಾಹಿತಿಯನ್ನು ನೀಡುತ್ತದೆ. ಶಾಸನದ ಆಧಾರದ ಮೇಲೆ ಈ ಗ್ರಾಮದಲ್ಲಿ ಪ್ರಾಚೀನ ಕಾಲದಲ್ಲಿ ಬಸವೇಶ್ವರ ಹೆಸರಿನ ದೇವಾಲಯವು ಇತ್ತೆಂದು ತೋರುತ್ತದೆ. ಸದ್ಯಕ್ಕೆ
ಪ್ರಾಚೀನವಾಗಿ ಮಲ್ಲಿಕಾರ್ಜುನ ಹಾಗೂ ಸೋಮನಾಥ ಹೆಸರಿನ ದೇಗುಲಗಳು ಇಲ್ಲಿ ನೋಡಲು ಸಿಗುತ್ತವೆ.
ಮಲ್ಲಿಕಾರ್ಜುನ ದೇವಾಲಯವು ಗ್ರಾಮದ ನಡುವೆ ಇದ್ದು ಪೂರ್ವಕ್ಕೆ ಮುಖ ಮಾಡಿ ಅಗ್ನಿಶಿಲೆಯಲ್ಲಿ ಕಟ್ಟಲಾಗಿದೆ. ಗರ್ಭಗೃಹ, ತೆರೆದ ಅಂತರಾಳ, ನವರಂಗ ಹಾಗೂ ಮುಖಮಂಟಪ ಒಳಗೊಂಡಿದ್ದು ಸುಂದರವಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು ದ್ವಾರವು ಪದ್ಮ, ಹೂಬಳ್ಳಿ, ಅರ್ಧಕಂಬ ಹಾಗೂ ಸಿಂಹಯಾಳಿ ಪಟ್ಟಿಕೆಗಳಿಂದ ಕೂಡಿದೆ.
ಇಕ್ಕೆಲಗಳ ತಳಭಾಗದಲ್ಲಿ ಶಂಖ, ಚಕ್ರ, ಗದಾ ಹಿಡಿದು ನಿಂತಿರುವ ವೈಷ್ಣವ ದ್ವಾರಪಾಲಕರು ಮತ್ತು ಚಾಮರಧಾರಿಯರಿದ್ದಾರೆ. ನವರಂಗದ ಮಧ್ಯದಲ್ಲಿ ಕಛಕ ಮುಖಗಳು, ಫಲಕ ಬೋದಿಗೆಗಳಿಂದ ಕೂಡಿದ ನಾಲ್ಕು ಸ್ತಂಭಗಳಿದ್ದು, ಈ ಸ್ತಂಭಗಳ ಮೇಲೆ ಪದ್ಮ ಹಾರ ಹಾಗೂ ಕೀರ್ತಿಮುಖಗಳ ಸೂಕ್ಮ ಅಲಂಕರಣಗಳಿವೆ.
ಛತ್ತಿನಲ್ಲಿ ಚಿತ್ತಾಕರ್ಷವಾದ ಕಮಲದ ಫಲಕ ಇದೆ. ಒಳಭಿತ್ತಿಯಲ್ಲಿ ಬರಿದಾಗಿರುವ ದೇವಕೋಷ್ಠಕಗಳಿವೆ. ಮುಂಭಾಗದಲ್ಲಿ ಆಯತಾಕಾರದ ಮುಖಮಂಟಪವಿದ್ದು, ಒರಗು ಗೋಡೆವುಳ್ಳ ಕಕ್ಷಾಸನವನ್ನು ಹೊಂದಿದೆ. ಕಕ್ಷಾಸನದ ಹೊರಭಿತ್ತಿಯಲ್ಲಿ ಪದ್ಮಸಾಲು ಮತ್ತು ಸಂಗೀತ ನೃತ್ಯ ಕಲಾವಿದರ ಉಬ್ಬುಶಿಲ್ಪಗಳನ್ನು ಕಂಡರಿಸಲಾಗಿದೆ.
ಇಡೀ ದೇಗುಲವು ಎತ್ತರದ ಅಧಿಷ್ಟಾನದ ಮೇಲಿದ್ದು, ಪ್ರವೇಶದ ಬಳಿಯಿರುವ ಆನೆಯ ಸೋಪಾನಗಳು ನೆಲದಲ್ಲಿ ಹುದುಗಿವೆ. ದೇಗುಲದ ಹೊರಭಿತ್ತಿಯಲ್ಲಿ ಯಾವುದೇ ಶಿಲ್ಪಗಳಿರದೇ ಸರಳವಾದ ರಚನೆಯಿಂದ ಕೂಡಿದ್ದು, ಅಲ್ಲಲ್ಲಿ ಹೊರಗೋಡೆಯು ಕುಸಿದು ಬಿದ್ದಿರುವುದರಿಂದ ಆಸರೆಯಾಗಿ ಕಲ್ಲುಗಳನ್ನು ಜೋಡಿಸಿಟ್ಟಿದ್ದಾರೆ.
ಗ್ರಾಮದ ಹೊರಗಡೆ ಇರುವ ಸೋಮನಾಥ ದೇವಾಲಯವು ಪ್ರಾಚೀನವಾಗಿದ್ದು, ಜೀರ್ಣೋದ್ಧಾರ ಮಾಡಲಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಕಕ್ಷಾಸನವಿರುವ ನವರಂಗದಿಂದ ಕೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.