ADVERTISEMENT

ಯಡ್ರಾಮಿ| ರಸ್ತೆ ಹಾಳಾಗಿವೆ; ಎಚ್ಚರಿಕೆಯಿಂದ ಸಂಚರಿಸಿ!

ಯಡ್ರಾಮಿ ತಾಲ್ಲೂಕಿನಲ್ಲಿ ಹೆದ್ದಾರಿಗಳು ಮಾತ್ರವಲ್ಲ ಗ್ರಾಮೀಣ ರಸ್ತೆಗಳೂ ಸರಿಯಿಲ್ಲ

ಮಂಜುನಾಥ ದೊಡಮನಿ
Published 26 ಅಕ್ಟೋಬರ್ 2024, 6:42 IST
Last Updated 26 ಅಕ್ಟೋಬರ್ 2024, 6:42 IST

ಯಡ್ರಾಮಿಯಿಂದ ಕುರಳಗೇರಾ ಗ್ರಾಮಕ್ಕೆ ತೆರಳುವ ರಸ್ತೆಯ ಸ್ಥಿತಿ ಇದು

ಯಡ್ರಾಮಿಯಿಂದ ಕುರಳಗೇರಾ ಗ್ರಾಮಕ್ಕೆ ತೆರಳುವ ರಸ್ತೆಯ ಸ್ಥಿತಿ ಇದು

ಯಡ್ರಾಮಿ: ಕೆಸರು ಗದ್ದೆಯಂತಾದ ರಸ್ತೆ, ತಗ್ಗುಗಳಿಂದಲೇ ತುಂಬಿದ ರಸ್ತೆ, ಕಿರಿದಾದ ರಸ್ತೆ, ಪಾದಚಾರಿಗಳಿಗೂ ಯೋಗ್ಯವಲ್ಲದ ರಸ್ತೆ...

ADVERTISEMENT

ನೂತನ ತಾಲ್ಲೂಕು, ರಾಜ್ಯಕ್ಕೆ ಮುಖ್ಯಮಂತ್ರಿ, ಕೆಕೆಆರ್‌ಡಿಬಿ ಅಧ್ಯಕ್ಷರನ್ನು ಕೊಟ್ಟ ಯಡ್ರಾಮಿ ತಾಲ್ಲೂಕಿನಲ್ಲಿರುವ ಬಹುತೇಕ ರಸ್ತೆಗಳ ಸ್ಥಿತಿ ಇದು.

ಯಡ್ರಾಮಿ ತಾಲ್ಲೂಕು ಕೇಂದ್ರ ಎಂದು ಸರ್ಕಾರ ಘೋಷಣೆ ಮಾಡಿದಾಗ ಈ ಭಾಗದ ಜನರು ಅಭಿವೃದ್ಧಿಯ ಮಾತನಾಡಿದ್ದರಷ್ಟೇ. ಆದರೆ, ಹಲವಾರು ವರ್ಷಗಳಾದರೂ ತಾಲ್ಲೂಕಿನ ರಸ್ತೆಗಳು ಇನ್ನೂ ಸುಧಾರಣೆಯನ್ನೇ ಕಂಡಿಲ್ಲ.

’ರಸ್ತೆ ಅಭಿವೃದ್ಧಿ ಇಲ್ಲದ ಕಾರಣ ಬಹುತೇಕ ಗ್ರಾಮಗಳು ಇನ್ನೂ ಬಸ್ ಮುಖವನ್ನೇ ನೋಡಿಲ್ಲ. ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ನಮ್ಮ ಭಾಗದ ರಸ್ತೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಯಾವಾಗ ರಸ್ತೆ ಅಭಿವೃದ್ಧಿಪಡಿಸುತ್ತಾರೋ, ನಮ್ಮೂರಿಗೆ ಎಂದು ಬಸ್ ಬರುತ್ತದೋ?  ನಮ್ಮ ಮಕ್ಕಳು ಯಾವಾಗ ನಡೆದುಕೊಂದು ಹೋಗುವುದನ್ನು ಬಿಟ್ಟು ಬಸ್‍ನಲ್ಲಿ ಸಂಚಾರ ಮಾಡುತ್ತಾರೋ? ಎಂಬುದು ಕನಸಾಗಿಯೇ ಉಳಿಯಲಿದೆ’ ಎನ್ನುತ್ತಾರೆ ಇಲ್ಲಿನ ಜನರು.

ಯಡ್ರಾಮಿಯಿಂದ ಸುಂಬಡ ಹಂಗರಗಾ(ಕೆ) ಕ್ರಾಸ್ ಮೂಲಕ ವಡಗೇರಾ ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರಿಂದ ಅನೇಕ ಅಪಘಾತಗಳಾಗಿವೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಯಡ್ರಾಮಿಯಿಂದ ಜೇವರ್ಗಿಗೆ ತೆರಳುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಪರಿಸ್ಥಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ರಸ್ತೆಯಲ್ಲಿ ತಗ್ಗುಗಳು ಬಿದ್ದಿದ್ದರಿಂದ ಎದುರು ಬರುವ ವಾಹನಗಳಿಗೆ ಸೈಡ್‌ ಬಿಡಲು ಆಗುತ್ತಿಲ್ಲ. ಈ ರಸ್ತೆಯನ್ನೂ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿಲ್ಲ. ಗ್ರಾಮೀಣ ರಸ್ತೆಗಳಿಗಿಂತ ಕೆಟ್ಟದಾಗಿ ಕಾಣುತ್ತದೆ. ಮಳೆಗಾಲದಲ್ಲಿ ರಸ್ತೆಯಲ್ಲಿನ ಗುಂಡಿಯಲ್ಲಿ ವಾಹನಗಳು ಸಿಕ್ಕಿಹಾಕಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಮಳ್ಳಿ–ನಾಗರಹಳ್ಳಿ ಜಿಲ್ಲಾ ರಸ್ತೆಯಲ್ಲಿ ಸಂಚರಿಸುವುದು ಎಂದರೇ ನರಕದಲ್ಲಿ ಯಾತ್ರೆ ಮಾಡಿದಂತೆ ಎನ್ನವುವ ಭಾವನೆ ವಾಹನ ಚಾಲಕರದ್ದು. ರಸ್ತೆಯಲ್ಲಿನ ಗುಂಡಿಯನ್ನು ಇಳಿದು ಹತ್ತುವಾಗ ವಾಹನ ಕೆಳಭಾಗ (ಚೆಸ್ಸಿ) ರಸ್ತೆಗೆ ತಾಕಿ ವಾಹನ ನಿಲ್ಲುತ್ತದೆ. ಬಳಿಕ ವಾಹನವನ್ನು ಮೇಲೆ ಎತ್ತುವಷ್ಟರಲ್ಲಿ ಚಾಲಕ, ಪ್ರಯಾಣಿಕರ ಜೀವ ಬಾಯಿಗೆ ಬಂದಿರುತ್ತದೆ.

ಶಿವಪುರ, ಯತ್ನಾಳ, ಕಡಕೋಳ, ಮಾಣಶಿವಣಗಿ, ಕುಕನೂರ, ಮಾಗಣಗೇರಿ, ಅಂಬರಖೇಡ, ಸೈದಾಪುರ, ಹರನಾಳ, ಯಲಗೋಡ ಸೇರಿದಂತೆ ಇನ್ನುಳಿದ ಗ್ರಾಮೀಣ ರಸ್ತೆಯಲ್ಲಿ ತಗ್ಗುಗುಂಡಿ ಎರಡು ಬದಿಗಳಲ್ಲಿ ಮುಳ್ಳು–ಕಂಟಿಗಳು ಬೆಳೆದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ಶಾಸಕರು ಇತ್ತಗಮಹರಿಸಲಿ ಎನ್ನುತ್ತಾರೆ ಈ ಭಾಗದ ಜನರು.

ಈ ಕ್ಷೇತ್ರದಿಂದ ಗೆದ್ದ ಧರ್ಮಸಿಂಗ್ ಮುಖ್ಯಮಂತ್ರಿ, ಅಜಯ್‌ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷರಾದರೂ ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಯೇ ಆಗಿಲ್ಲ ಎಂದು ಹಂಗರಗಾದ(ಕೆ) ಗ್ರಾಮದ ವಿದ್ಯಾಸಾಗರ ಕಟ್ಟಿ ಮನಿ ಅಸಮಾಧಾನ ವ್ಯಕ್ತಪಡಿಸಿದರು

‘ಕೆಕೆಆರ್‌ಡಿಬಿ ಅನುದಾನದಲ್ಲಿ ಚಿಗರಹಳ್ಳಿ ಕ್ರಾಸ್‌–ಯಡ್ರಾಮಿ, ಸುಂಬಡ–ಮಳ್ಳಿ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇವೆ. ಮೇಲಧಿಕಾರಿಗಳು ಈ ತಿಂಗಳ ಸಭೆಯಲ್ಲಿ ಫೈಲ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ’ ಪಿಡಬ್ಲ್ಯೂಡಿ ಎಇಇ ತಜ್ಮೂಲ್ ಉಸೇನ್ ತಿಳಿಸಿದರು.

ಬಸ್ ಸೌಕರ್ಯವೂ ಇಲ್ಲ. ಈಗಲಾದರೂ ಜನರ ಕಷ್ಟ ನೋಡಿ ರಸ್ತೆ ಸುಧಾರಣೆಯತ್ತ ಗಮನ ಹರಿಸಲಿ

-ವಿದ್ಯಾಸಾಗರ ಕಟ್ಟಿಮನಿಹಂಗರಗಾ(ಕೆ) ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.