ADVERTISEMENT

ರೈತರನ್ನು ಬೀದಿಗೆ ತಳ್ಳಿದ ಮೋದಿ ಸರ್ಕಾರ: ಸೀತಾರಾಂ ಯೆಚೂರಿ

ಸಿಪಿಐ (ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 6:12 IST
Last Updated 22 ಆಗಸ್ಟ್ 2020, 6:12 IST
ಸೀತರಾಂ ಯೆಚೂರಿಯವರು ಆನ್‌ಲೈನ್ ಮೂಲಕ ಮಾತನಾಡಿದ್ದನ್ನು ಕಲಬುರ್ಗಿಯ ಸಿಪಿಐ (ಎಂ) ಪಕ್ಷದ ಮುಖಂಡರು ಕಲಬುರ್ಗಿಯಲ್ಲಿ ಆಲಿಸಿದರು. ಯು. ಬಸವರಾಜ, ಮಾರುತಿ ಮಾನಪಡೆ, ಶರಣಬಸಪ್ಪ ಮಮಶೆಟ್ಟಿ ಇತರರು ಇದ್ದರು
ಸೀತರಾಂ ಯೆಚೂರಿಯವರು ಆನ್‌ಲೈನ್ ಮೂಲಕ ಮಾತನಾಡಿದ್ದನ್ನು ಕಲಬುರ್ಗಿಯ ಸಿಪಿಐ (ಎಂ) ಪಕ್ಷದ ಮುಖಂಡರು ಕಲಬುರ್ಗಿಯಲ್ಲಿ ಆಲಿಸಿದರು. ಯು. ಬಸವರಾಜ, ಮಾರುತಿ ಮಾನಪಡೆ, ಶರಣಬಸಪ್ಪ ಮಮಶೆಟ್ಟಿ ಇತರರು ಇದ್ದರು   

ಕಲಬುರ್ಗಿ: ರೈತರಿಗೆ ಮರಣ ಶಾಸನವಾದ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಸುಗ್ರೀವಾಜ್ಞೆಯ ಮೂಲಕ ದೇಶದ ಬೆನ್ನೆಲುಬಾದ ರೈತರನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬೀದಿಗೆ ತಳ್ಳುತ್ತಿದೆ ಎಂದು ಸಿಪಿಐ (ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದರು.

ರಾಷ್ಟ್ರವ್ಯಾಪಿ ಇದೇ 24ರಿಂದ 29ರವರೆಗೆ ‘ಕೋವಿಡ್‌–19’ ಪರಿಹಾರಕ್ಕೆ ಒತ್ತಾಯಿಸಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ಆನ್‌ಲೈನ್ ಚಳವಳಿ ಅಂಗವಾಗಿ ಜಿಲ್ಲೆಯ ಪಕ್ಷದ ಮುಖಂಡರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಮಾತನಾಡಿದ ಅವರು, ‘ಪೆಟ್ರೋಲ್–ಡೀಸೆಲ್ ದರಗಳ ನಿರಂತರ ಹೆಚ್ಚಳದಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ಬೇರೆಡೆ ಸಾಗಿಸಿ ಮಾರಾಟ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಬೆಲೆಗಳ ಕುಸಿತದಿಂದಾಗಿ ಜರ್ಝರಿತರಾಗಿದ್ದಾರೆ. ಕಾರ್ಪೊರೇಟ್‌ ಕಂಪನಿಗಳನ್ನು ಮೇಲೆತ್ತಲು ತೋರಿಸುತ್ತಿರುವ ಆಸಕ್ತಿಯನ್ನು ಮೋದಿ ಅವರು ರೈತರು, ಜನಸಾಮಾನ್ಯರ ಬಗ್ಗೆ ತೋರಿಸುತ್ತಿಲ್ಲ. ಕೋವಿಡ್ ಮಹಾಮಾರಿ ದೇಶದ ಕೋಟ್ಯಂತರ ಜನರನ್ನು ಬಾಧಿಸುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸದೃಢ ಮಾಡುವತ್ತ ಗಮನ ಹರಿಸುತ್ತಿಲ್ಲ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸಂಪೂರ್ಣ ಕೈಚೆಲ್ಲಿದೆ’ ಎಂದರು.

ಬೆಳೆ ವಿಮೆಯಲ್ಲಿ ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭವಾಗುತ್ತಿದೆ. ಅದನ್ನು ವೈಜ್ಞಾನಿಕವಾಗಿ ಮಾಡಲು ಗಮನ ಹರಿಸುತ್ತಿಲ್ಲ. ಕೋವಿಡ್‌ ಸಂದರ್ಭದ ಆರ್ಥಿಕ ಕುಸಿತದ ಸಂದರ್ಭದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗಿದ್ದು, ಅವರ ಏಕೈಕ ಆಶಾಕಿರಣವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನವೂ ಸರಿಯಾಗಿ ಆಗುತ್ತಿಲ್ಲ. ಕೂಲಿ ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ಟೀಕಿಸಿದರು.

ADVERTISEMENT

ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನಪಡೆ, ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ ಮ್ಯಾಗೇರಿ, ರೇವಣಸಿದ್ದಪ್ಪ ಕಲಬಬುರ್ಗಿ, ನಾಗಯ್ಯಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.