ADVERTISEMENT

ಕಲಬುರಗಿ: ಈಜಲು ಹೋಗಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:25 IST
Last Updated 20 ಜೂನ್ 2024, 7:25 IST

ಕಲಬುರಗಿ: ತಾಲ್ಲೂಕಿನ ತಾವರಗೇರಾ ಗ್ರಾಮದಲ್ಲಿ ಸ್ನೇಹಿತರ ಜೊತೆಗೆ ಬಾವಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ತಾವರಗೇರಾ ನಿವಾಸಿ ಅಬ್ದುಲ್ ಖಾದರ್ (25) ನೀರು ಪಾಲಾದ ಯುವಕ. ಈಜು ಬಾರದ ಈತ, ಡಬ್ಬಿ ಕಟ್ಟಿಕೊಂಡು ಈಜಾಲು ಮಂಗಳವಾರ ಬಾವಿಗೆ ಇಳಿದಿದ್ದ. ಈ ವೇಳೆ ಡಬ್ಬಿ ಕಳಚಿದ್ದು ನೀರಿನಲ್ಲಿ ಮುಳುಗಿದ್ದಾನೆ. ಸಂಜೆಯಿಂದ ಅಗ್ನಿ ಶಾಮಕದಳ ಸಿಬ್ಬಂದಿ ಯುವಕನ ಪತ್ತೆಗೆ ಬಾವಿಯಲ್ಲಿ ಶೋಧಕಾರ್ಯ ನಡೆಸಿದ್ದು, ಬುಧವಾರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ವಿಚಾರಕ, ನಿವೃತ್ತ ನೌಕರ ಮನೆಯಲ್ಲಿ ಕಳವು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಮೆಂಟ್ ಕಾರ್ಖಾನೆಯೊಂದರ ಮೇಲ್ವಿಚಾರಕ ಹಾಗೂ ನಿವೃತ್ತ ನೌಕರನ ಮನೆಯಲ್ಲಿ ನಗದು ಸೇರಿ ಚಿನ್ನಾಭರಣ ಕಳುವಾಗಿದೆ.

ADVERTISEMENT

ಸೇಡಂ ತಾಲ್ಲೂಕಿನ ಮಳಖೇಡ ಸಮೀಪದ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಫೀಲ್ಡ್ ವರ್ಕ್‌ ಮೇಲ್ವಿಚಾರಕ ರಾಘವೇಂದ್ರ ವೆಂಕಟರಾವ ಅವರ ಮನೆಯಲ್ಲಿ ಕಳ್ಳತನವಾಗಿದೆ.

ಜೂನ್ 16ರ ಸಂಜೆ ರಾಘವೇಂದ್ರ ಅವರು ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‌ಗೆ ತೆರಳಿ, ಮರುದಿನ ವಾಪಸ್ ಬರುವಾಗ ಮಾರ್ಗ ಮಧ್ಯದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಜೂ.17ರ ರಾತ್ರಿ ರಾಘವೇಂದ್ರ ಅವರ ಮನೆ ಬಾಗಿಲಿನ ಕೊಂಡಿ ಮುರಿದು ಒಳ ನುಗ್ಗಿದ ಕಳ್ಳರು, ಅಲಮಾರಿಯಲ್ಲಿ ಇರಿಸಿದ್ದ ₹ 2.50 ಲಕ್ಷ ನಗದು ಸೇರಿ ₹5.83 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಮಳಖೇಡ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬಾಗಿಲು ಮುರಿದು ಕಳವು: ಕಲಬುರಗಿ ನಗರದ ತೇಲ್ಕರ ಕಾಲೊನಿಯ ನಿವೃತ್ತ ನೌಕರ ಸಿದ್ರಾಮಪ್ಪ ಕಲ್ಲಪ್ಪ ಅವರ ಮನೆಯ ಬಾಗಿಲು ಮುರಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ.

ಜೂನ್‌ 12ರಂದು ಕೆಲಸದ ನಿಮಿತ್ಯ ಮನೆಗೆ ಬೀಗ ಹಾಕಿದ ಸಿದ್ರಾಮಪ್ಪ ಅವರು ಬೆಂಗಳೂರಿಗೆ ಹೋಗಿದ್ದರು. ಅದೇ ದಿನ ರಾತ್ರಿ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ಒಳ ನುಗ್ಗಿ, ಅಲಮಾರಿಯಲ್ಲಿ ಇರಿಸಿದ್ದ ₹5 ಸಾವಿರ ನಗದು ಸೇರಿ ₹89,700 ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಚರಂಡಿಯಲ್ಲಿ ಹಸುವಿನ ತಲೆ ಪತ್ತೆ: ಕಲಬುರಗಿಯ ಮಾದವ ನಗರದ ರಸ್ತೆ ಬದಿಯ ಚರಂಡಿಯಲ್ಲಿ ತುಂಡರಿಸಿದ ಹಸುವಿನ ತಲೆ ಪತ್ತೆಯಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿ ಇದ್ದರೂ ನಗರದಲ್ಲಿ ಹಲವು ಜಾನುವಾರುಗಳ ಹತ್ಯೆ ಮಾಡಲಾಗಿದೆ. ಹಸುವಿನ ತಲೆಯನ್ನು ಬಹುಸಂಖ್ಯಾತ ಹಿಂದೂಗಳಿರುವ ಶಹಾಬಜಾರ್ ಬಡಾವಣೆಯ ಮಹದೇವ ನಗರದ ರಸ್ತೆ ಬದಿಯಲ್ಲಿ ಉದ್ದೇಶಪೂರ್ವಕವಾಗಿ ಎಸೆಯಲಾಗಿದೆ ಎಂದು ಹಿಂದೂ ಜಾಗೃತ ಸೇನೆ ಘಟಕದ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಆರೋಪಿಸಿದ್ದಾರೆ.

ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.