ಕಲಬುರಗಿ: ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರೊಂದಿಗೆ ಸಂವಾದ ಗುರುವಾರ ನಡೆಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿಂಗ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಂಥಾಲಯದ ಮೇಲ್ವಿಚಾರಕರ ಕುಂದುಕೊರತೆ, ಗೌರವ ಧನ ಬಾಕಿ ಪಾವತಿ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಕೆಲವು ಗ್ರಂಥಾಲಯ ಮೇಲ್ವಿಚಾರಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ವೇಳೆ, ಗ್ರಂಥಾಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ತಾಲ್ಲೂಕಿನ ಇಬ್ಬರು ಮೇಲ್ವಿಚಾರಕರಿಗೆ ಉತ್ತಮ ಸೇವಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ, ‘ಮೊದಲಿದ್ದ ಗ್ರಂಥಾಲಯವೆಂಬ ಹೆಸರನ್ನು ಬದಲಿಸಿ ಸರ್ಕಾರವು ಅರಿವು ಕೇಂದ್ರ ಎಂದು ನಾಮಕರಣ ಮಾಡಿದೆ. ಈ ಅರಿವು ಕೇಂದ್ರಗಳಿಗೆ ಸಾಕಷ್ಟು ಸೌಲಭ್ಯಗಳು ಒದಗಿಸಲಾಗಿದೆ. ಪ್ರತಿ ಕೇಂದ್ರಕ್ಕೂ ಟಿ.ವಿ., ಗಣಕಯಂತ್ರ, ಅಂತರ್ಜಾಲ ಸೌಲಭ್ಯ, ಪುಸ್ತಕಗಳು, ಮಕ್ಕಳಿಗೆ ಚೆಸ್, ಕೇರಂನಂಥ ಆಟಿಕೆಗಳನ್ನು ನೀಡಲಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಸಾಮಾನ್ಯ ಜ್ಞಾನ ಹೆಚ್ಚಿಸುವಂಥ ಪುಸ್ತಕಗಳನ್ನೂ ಒದಗಿಸಲಾಗಿದೆ. ಇವುಗಳ ಸದ್ಬಳಕೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.