ಬೆಂಗಳೂರು: 2021–22ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಶೇ 79.44ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆದರೆ, ಗುಣಾತ್ಮಕ ಫಲಿತಾಂಶ ವಿಶ್ಲೇಷಣಾ ಆಧಾರಿತ ಜಿಲ್ಲಾ ಶ್ರೇಣಿಯಲ್ಲಿ ‘ಬಿ’ ಗ್ರೇಡ್ ಪಡೆದಿದೆ.
ದಕ್ಷಿಣ ಜಿಲ್ಲೆಯಿಂದ 54,709 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 43,462 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 27,083 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 20,165 ಮಂದಿ ಬಾಲಕರು ತೇರ್ಗಡೆಯಾಗಿದ್ದಾರೆ. ಈ ಮೂಲಕ ಶೇ.74.46ರಷ್ಟು ಫಲಿತಾಂಶ ಬಂದಿದೆ.
27,626 ಬಾಲಕಿಯರು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ 23,298 ಮಂದಿ ಬಾಲಕಿಯರು ತೇರ್ಗಡೆಯಾಗಿ ಶೇ 84.33ರಷ್ಟು ಫಲಿತಾಂಶದ ಸಾಧನೆ ಮಾಡುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
‘ಸರ್ಕಾರಿ ಶಾಲೆಗಳು ಶೇ 61.5ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಉತ್ತಮ ಸಾಧನೆ ತೋರಿವೆ. 86 ಶಾಲೆಗಳಲ್ಲಿ ಕಡಿಮೆ ಫಲಿತಾಂಶ ದೊರೆತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರಲಿಲ್ಲ. ಖಾಲಿ ಹುದ್ದೆಗಳೂ ಇಲ್ಲ. ಆದರೂ, ಬಿ ಗ್ರೇಡ್‌ಗೆ ಸೇರಿರುವುದು ಯಕ್ಷ ಪ್ರಶ್ನೆಯಾಗಿದೆ’ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ ತಿಳಿಸಿದರು.
‘ಬೊಮ್ಮನಹಳ್ಳಿ, ತಾವರಕೆರೆ, ಕಾಮಾಕ್ಷಿಪಾಳ್ಯ ಮುಂತಾದ ಪ್ರದೇಶಗಳಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದೂ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರಿರಬಹುದು. ಶಾಲೆಗಳಲ್ಲಿ ಶೇ30ರಿಂದ 35ರಷ್ಟು ವಿದ್ಯಾರ್ಥಿಗಳು ಗೈರುಹಾಜರಾಗುವುದೂ ಕಂಡು ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.
‘ಈ ಫಲಿತಾಂಶ ನಮಗೆ ಎಚ್ಚರಿಕೆಯ ಗಂಟೆ. ಒಟ್ಟಾರೆ ಫಲಿತಾಂಶದ ಬಗ್ಗೆ ಮುಖ್ಯಶಿಕ್ಷಕರಿಂದ ವರದಿ ಪಡೆಯಲಾಗುವುದು. ಮುಂದಿನ ವರ್ಷದ ಪರೀಕ್ಷೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಜತೆಗೆ ಉತ್ತಮ ಶಿಕ್ಷಕರಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದು ಬೈಲಾಂಜಿನಪ್ಪ ಅವರು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯು ಎ ಗ್ರೇಡ್ ಸ್ಥಾನ ಪಡೆದಿದೆ.
‘ಟ್ಯೂಷನ್‌ಗೆ ಹೋಗದೆಯೇ 625’
‘ಪಾಠವನ್ನು ಸರಿಯಾಗಿ ಕೇಳುತ್ತಿದ್ದೆ. ಟ್ಯೂಷನ್‌ಗೆ ಹೋಗುತ್ತಿರಲಿಲ್ಲ. ಜತೆಗೆ, ಶಿಕ್ಷಕರು ಸಹ ಉತ್ತಮ ಮಾರ್ಗದರ್ಶನ ಮಾಡಿದರು’ ಎಂದು 625 ಅಂಕಗಳಿಸಿರುವ ವಿಜಯನಗರದ ಕಾರ್ಡಿಯಲ್ ಪ್ರೌಢಶಾಲೆಯ ಬಿ. ಅಭಿಜ್ಞಾ ತಿಳಿಸಿದರು. ‘ನಮ್ಮ ತಂದೆ ಬಸವರಾಜು ಮತ್ತು ತಾಯಿ ಶೈಲಾ ನನಗೆ ಎಲ್ಲ ರೀತಿಯಲ್ಲಿ ಬೆಂಬಲ ಮತ್ತು ನೆರವು ನೀಡಿದರು’ ಎಂದು ಅಭಿಜ್ಞಾ ಪ್ರತಿಕ್ರಿಯಿಸಿದರು.
‘ತಾಯಿ, ಶಿಕ್ಷಕರೇ ಶ್ರೀರಕ್ಷೆ’
ತಾಯಿಯ ಆಸರೆ, ಶಿಕ್ಷಕರ ಪ್ರೋತ್ಸಾಹದೊಂದಿಗೆ ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕಗಳಿಸಿರುವ ಎಸ್. ಧನಲಕ್ಷ್ಮಿಗೆ ವೈದ್ಯೆಯಾಗುವ ಗುರಿ.
ತಂದೆಯನ್ನು ಕಳೆದುಕೊಂಡಿರುವ ಎಸ್. ಧನಲಕ್ಷ್ಮಿ ಅವರಿಗೆ ತಾಯಿಯೇ ಸಂಪೂರ್ಣ ಬೆಂಬಲ ನೀಡಿದ್ದಾರೆ. ಟೈಲರಿಂಗ್ ಮಾಡುತ್ತ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಧನಲಕ್ಷ್ಮಿ ಅವರ ತಾಯಿಯೇ ಓದಿಸುತ್ತಿದ್ದಾರೆ.
‘ತಾಯಿ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ನಮ್ಮ ಶಿಕ್ಷಣಕ್ಕೆ ನೆರವಾದರು. ಶಾಲೆಯಲ್ಲಿ ಶಿಕ್ಷಕರು ಉತ್ತಮ ಮಾರ್ಗದರ್ಶನ ಮತ್ತು ಬೆಂಬಲ ನೀಡಿದರು. ಸಾಧನೆ ಮಾಡಬೇಕು ಎನ್ನುವ ಛಲ ನಮ್ಮಲ್ಲಿಯೂ ಇತ್ತು. ಇಂಗ್ಲಿಷ್ ಹೊರತುಪಡಿಸಿ ಉಳಿದ ಎಲ್ಲ ವಿಷಯಗಳಿಗೆ ಶೇ 100ರಷ್ಟು ಅಂಕ ದೊರೆತಿವೆ. ಇಂಗ್ಲಿಷ್‌ನಲ್ಲಿ 99 ಅಂಕಗಳು ದೊರೆತಿವೆ’ ಎಂದು ಸುಂಕದಕಟ್ಟೆಯ ಅರುಣೋದಯ ಹೈಸ್ಕೂಲ್‌ನ ಧನಲಕ್ಷ್ಮಿ ತಿಳಿಸಿದರು.
‘ದಿನಪತ್ರಿಕೆ ಹಾಕುತ್ತಲೇ ಓದು’
ಬೆಳಿಗ್ಗೆ ದಿನಪತ್ರಿಕೆ ಹಾಕುತ್ತಾ ಅಧ್ಯಯನದಲ್ಲಿ ತೊಡಗಿದ್ದ ವಿಜಯನಗರದ ಕಾರ್ಡಿಯಲ್ ಹೈಸ್ಕೂಲ್‌ನ ಪ್ರೌಢಶಾಲೆಯ ಮೊನಿಷ್‌ಗೌಡ ಎನ್.ಡಿ. ಅವರು 625 ಅಂಕಗಳನ್ನು ಪಡೆದಿದ್ದಾರೆ.
‘ಮಗ ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ದಿನಪತ್ರಿಕೆ ಹಾಕುತ್ತಾನೆ. ಈ ಕಾರ್ಯದ ನಂತರ ಓದು ಮತ್ತು ಶಾಲೆ. ಎಂದಿಗೂ ಒತ್ತಡಕ್ಕೊಳಗಾಗಿ ಓದಿಲ್ಲ. ಇಷ್ಟಪಟ್ಟು ಅಧ್ಯಯನ ಮಾಡಿದ್ದಾನೆ. ಟ್ಯೂಷನ್‌ಗೂ ಹೋಗಿಲ್ಲ. ಸ್ವಯಂ ಪ್ರಯತ್ನ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಗಳಿಸಿದ್ದಾನೆ’ ಎಂದು ಮೊನಿಷ್‌ಗೌಡ ಅವರ ತಂದೆ ದೇವರಾಜ್ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.