ಕುಶಾಲನಗರ: ಕಾಫಿ ನಾಡು ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ 4 ಸಾವಿರ ಎಕರೆಗೂ ಹೆಚ್ಚಿನ ಕಾಫಿ ತೋಟ ಸರ್ವನಾಶವಾಗಿದ್ದು, ಜಿಲ್ಲೆಯ ಕಾಫಿ ಅವಲಂಬಿತ ಉದ್ಯಮಕ್ಕೂ ಬರೆ ಬಿದ್ದಿದೆ.
ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಬಳಿಯ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಕಾಫಿ ಕ್ಯೂರಿಂಗ್‌ಗಳಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸಿಗೆ ಪೂರಕವಾದ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿದ್ದು ಜಿಲ್ಲೆಯ ಉತ್ಪನ್ನವನ್ನೇ ನಂಬಿಕೊಂಡಿವೆ.
ಜಿಲ್ಲೆಯಲ್ಲಿ ವಾರ್ಷಿಕ ರೋಬಸ್ಟ್ ಮತ್ತು ಅರೇಬಿಕಾ ಕಾಫಿ ಉತ್ಪಾದನೆ 3.5 ಲಕ್ಷ ಟನ್. ಆದರೆ, ಮಹಾಮಳೆಯಿಂದ ಅಂದಾಜು 1 ಲಕ್ಷ ಟನ್‌ನಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಅವಲಂಬಿತ ಕೈಗಾರಿಕೆಗಳಿಗೂ ನಷ್ಟದ ಆತಂಕ ಎದುರಾಗಿದೆ.
ತೋಟನಾಶ ಹಾಗೂ ಇಳುವರಿ ಕುಸಿತದಿಂದ ಜಿಲ್ಲೆಯ ತೋಟಗಳಿಂದ ಕಾಫಿ ವರ್ಕ್ಸ್‌ಗಳಿಗೆ ಬರುತ್ತಿದ್ದ ಉತ್ಪನ್ನ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಇದರಿಂದ ಕ್ಯೂರಿಂಗ್‌ಗಳ ನಿರ್ವಹಣೆ ಕಷ್ಟಕರವಾಗಲಿದ್ದು, ಕೈಗಾರಿಕೆಗಳನ್ನು ಮುಚ್ಚುವ ಭೀತಿಯಿದೆ. ಕ್ಯೂರಿಂಗ್ ಕೆಲಸವನ್ನೇ ನಂಬಿಕೊಂಡಿರುವ ಕಾರ್ಮಿಕರೂ ಬೀದಿಗೆ ಬರುವ ಸ್ಥಿತಿಯಿದೆ.
ಜಿಲ್ಲೆಯ ಬೆಳೆಗಾರರಿಂದ ಖರೀದಿಸಿದ ಕಾಫಿಯನ್ನು ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿತ್ತು. ಇಲ್ಲಿನ ಇನ್‌ಸ್ಟಂಟ್ ಕಾಫಿಗೆ ದೇಶ, ವಿದೇಶಗಳಲ್ಲೂ ಬೇಡಿಕೆಯಿತ್ತು. ಮಹಾಮಳೆಯ ಅನಾಹುತವು ಕೈಗಾರಿಕೋದ್ಯಮಿಗಳಿಗೂ ತಟ್ಟಿದೆ.
‘ಭೂಕುಸಿತದಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸಂಚಾರ ವ್ಯವಸ್ಥೆ ಸುಧಾರಣೆಗೂ ಹಲವು ದಿನಗಳೇ ಬೇಕು.ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಜಿಲ್ಲೆಯ ಸರಕುಗಳನ್ನು ಮಂಗಳೂರಿನ ಬಂದರಿಗೆ ಸಾಗಣೆ ಮಾಡಲು ಅತ್ಯಂತ ಸುಲಭವಾಗಿತ್ತು. ಭೂಕುಸಿತದಿಂದ ಸಂಚಾರ ಬಂದ್ ಆಗಿದ್ದು, ಕಾಫಿ ಉತ್ಪನ್ನಗಳ ರಫ್ತು ಚಟುವಟಿಕೆ ಸ್ಥಗಿತಗೊಂಡಿದೆ. ಸಂಸ್ಕರಿಸಿದ ಕಾಫಿಯು ಗೋದಾಮಿನಲ್ಲೇ ಬಿದ್ದಿದೆ’ ಎಂದು ಕೂಡ್ಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎನ್.ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕಾವೇರಿ ನದಿ ದಂಡೆ ಮೇಲಿರುವ ಕೈಗಾರಿಕಾ ಪ್ರದೇಶದಲ್ಲಿ ನೆರೆ ಪ್ರವಾಹಕ್ಕೆ ಸಿಲುಕಿದ ಅಮೃತ ಕಾಫಿ ಕ್ಯೂರಿಂಗ್ ವರ್ಕ್ಸ್‌ಗೂ ಅಪಾರ ಪ್ರಮಾಣದ ಹಾನಿಯಾಗಿತ್ತು. ಪ್ರವಾಹದ ನೀರು ನುಗ್ಗಿದ ಪರಿಣಾಮ ಕಾಫಿ ಬೀಜ, ಮಿಷನರಿ ಹಾಗೂ ರಫ್ತು ಮಾಡಲು ಸಂಗ್ರಹಿಟ್ಟಿದ್ದ ಕಾಫಿ ಕೂಡ ಹಾನಿಯಾಗಿತ್ತು. ₹ 6 ಕೋಟಿಗೆ ಹೆಚ್ಚು ನಷ್ಟ ಉಂಟಾಗಿದೆ ಎಂದು ವ್ಯವಸ್ಥಾಪಕ ಕಣ್ಣನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.