ADVERTISEMENT

ನ.6ರಂದು ತಾಲ್ಲೂಕು ಕಸಾಪ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 5:45 IST
Last Updated 11 ಅಕ್ಟೋಬರ್ 2011, 5:45 IST

ಮಡಿಕೇರಿ: ಮಡಿಕೇರಿ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ನವೆಂಬರ್ 6 ರಂದು ನಡೆಸಲು ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಡಿಕೇರಿ ಕಸಾಪ ಘಟಕದ ಅಧ್ಯಕ್ಷರಾದ ಕೆ.ಟಿ. ಬೇಬಿಮ್ಯಾಥ್ಯು ಈ ವಿಷಯ ತಿಳಿಸಿದರು.

ಸಾಹಿತ್ಯ ಸಮ್ಮೇಳನವನ್ನು ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಡೆಸಲಾಗುವುದು. ಸಮ್ಮೇಳನದ ಅಧ್ಯಕ್ಷರನ್ನಾಗಿ ಕವಿ ಕಾಲೂರು ನಾಗೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ವಿಕೇಂದ್ರೀಕರಣ ಮಾಡಲು ಸಾಹಿತ್ಯ ಪರಿಷತ್ತು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಪೇಟೆ-ಪಟ್ಟಣವಲ್ಲದ ಗ್ರಾಮವಾದ ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಜನರ ಸಹಕಾರದೊಂದಿಗೆ ನಡೆಸಲು ಸಮಿತಿ ತೀರ್ಮಾನಿಸಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ 2 ಸಾವಿರ ಸಾಹಿತ್ಯ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಹಾಗೂ ಸಾಹಿತ್ಯ ಸಮ್ಮೇಳನದ ಹಣಕಾಸು ಸಮಿತಿಯು ಈ ಸಮ್ಮೇಳನಕ್ಕೆ 4ಲಕ್ಷ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿದೆ ಎಂದರು.

ಸಮ್ಮೇಳನಕ್ಕೆ ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರದ ಅನುದಾನದಿಂದ 50 ಸಾವಿರ ರೂಪಾಯಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬಿಡುಗಡೆ ಮಾಡಲಿದೆ. ಇದಲ್ಲದೇ, ಸ್ಥಳೀಯ ಗ್ರಾಮಸ್ಥರಿಂದ, ಸಂಘ ಸಂಸ್ಥೆಗಳಿಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಆರ್ಥಿಕ ಸಹಕಾರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.

ನವೆಂಬರ್ 6 ರಂದು ಬೆಳಿಗ್ಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಗಾಳಿಬೀಡು ಜಿ.ಪಿ.ಎಂ. ಶಾಲೆಯಿಂದ ನವೋದಯ ವಿದ್ಯಾಲಯದವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯ ನಂತರ ಸಾಹಿತ್ಯ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ ಕವಿಗೋಷ್ಠಿ ಹಾಗೂ ಪರಿಷತ್ತಿನ ಬಹಿರಂಗ ಅಧಿವೇಶನ ನಡೆಸಲಾಗುವುದು. ಸಂಜೆ ಗಣ್ಯರಿಗೆ ಸನ್ಮಾನ ಸಮಾರಂಭ, ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಮಿತಿಗಳ ರಚನೆ
ಸಮ್ಮೇಳನದ ಯಶಸ್ವಿಗಾಗಿ ಕಾರ್ಯನಿರ್ವಹಿಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಕೆ. ಅಯ್ಯಪ್ಪ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸಂಚಾಲಕರಾಗಿ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾರಿಜ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಕೆ.ಆರ್. ಅನಂತಕುಮಾರ್, ಸಂಚಾಲಕರಾಗಿ ಬಿ.ಸಿ.ಹರೀಶ್ ರೈ , ಕೆ.ಎಂ. ಮೋಹನ್, ಡಿ.ಡಿ. ನವೀನ್, ಗಣೇಶ್ ಹೆಗಡೆ, ಕೆ.ಬಿ. ಮನುಕುಮಾರ್ ಆಯ್ಕೆಯಾಗಿದ್ದಾರೆ.

ಆಹಾರ ಸಮಿತಿ ಅಧ್ಯಕ್ಷರಾಗಿ ಯು.ಎಸ್. ಗಿರೀಶ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ರಾಣಿ ಮುತ್ತಣ್ಣ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಶೈಲಾ, ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಎ.ಎಸ್. ಸುಬ್ರಮಣಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ್ ಹೂವಲ್ಲಿ, ಶ್ವೇತಾ ರವೀಂದ್ರ, ಕೆ.ಕೆ. ಅಯ್ಯಪ್ಪ, ಡೀನ್ ಬೋಪಣ್ಣ, ವಾರಿಜ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.