ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೇಸಿಗೆಯ ಉಷ್ಣಾಂಶದಂತೆಯೇ ಚುನಾವಣೆ ಕಾವು ಏರಿಕೆ ಆಗುತ್ತಿದೆ. ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಗೊಂದಲ ಮುಂದುವರಿದಿದೆ. ಉಳಿದಂತೆ ಬಹುತೇಕ ಪಕ್ಷಗಳು, ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಬಿ– ಫಾರಂ ಸಹ ವಿತರಣೆ ಮಾಡಿವೆ. ಚುನಾವಣೆಗೆ ಅಭ್ಯರ್ಥಿಗಳು ತಯಾರಿ ಸಹ ನಡೆಸುತ್ತಿದ್ದಾರೆ.
ಮಡಿಕೇರಿ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ಗೆ ಬಿಜೆಪಿ ಟಿಕೆಟ್ ನೀಡಿದ್ದು, ಸಂತೆಯ ದಿನವಾದ ಶುಕ್ರವಾರ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಚೌಡೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಳ್ಳಲಿದ್ದು, ಮಹದೇವಪೇಟೆ, ಚೌಕಿ, ಖಾಸಗಿ ಬಸ್ ನಿಲ್ದಾಣ, ಕಾವೇರಿ ಕಲಾ ಕ್ಷೇತ್ರದ ಮೂಲಕ ಮೆರವಣಿಗೆಯು ಜಿಲ್ಲಾಡಳಿತ ಭವನ ತಲುಪಲಿದೆ.
ನಾಲ್ಕು ಬಾರಿ ಶಾಸಕರಾಗಿರುವ ಅಪ್ಪಚ್ಚು ರಂಜನ್ ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಆರಂಭದಲ್ಲಿದ್ದ ಬಂಡಾಯವು ಬಿಜೆಪಿ ಟಿಕೆಟ್ ಘೋಷಣೆಯ ಬಳಿಕ ಕಾಣಿಸುತ್ತಿಲ್ಲ. ಇದು ಅಪ್ಪಚ್ಚು ಹಾದಿ ಸುಗಮಗೊಳಿಸಿದೆ ಎನ್ನಲಾಗಿದೆ. ಶುಕ್ರವಾರವೇ ಹಲವು ಮಂದಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ನಾಪಂಡ ಮುತ್ತಪ್ಪ ಸಹ ಶುಕ್ರವಾರವೇ ನಾಮಪತ್ರ ಸಲ್ಲಿಸುತ್ತೇನೆಂದು ಹೇಳಿಕೊಂಡಿದ್ದರು. ಆದರೆ, ಅರುಣ್ ಮಾಚಯ್ಯ ಅವರೊಂದಿಗೆ ಬೆಂಗಳೂರಿಗೆ ತೆರಳಿದ್ದ ನಾಪಂಡ ಅವರನ್ನು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಮನವೊಲಿಸಿದ್ದಾರೆ ಎನ್ನಲಾಗಿದೆ. ಒಂದುವೇಳೆ ಮಾತುಕತೆ ಫಲಪ್ರದವಾಗಿದ್ದರೆ ಬಂಡಾಯದ ಬಾವುಟ ಹಾರಿಸಿದ್ದ ನಾಪಂಡ, ಕಣದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.
ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಅವರು ಇದೇ 23ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ. ಬಿ– ಫಾರಂ ಪಡೆದುಕೊಂಡ ಬಳಿಕ ಮಾಚಯ್ಯ ವಿರಾಜಪೇಟೆಯಲ್ಲಿ ಬೆಂಬಲಿಗರ ಸಭೆ ನಡೆಸಿ, ಪ್ರಚಾರದ ತಯಾರಿ ನಡೆಸಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೊಂದಲ ಮುಂದುವರಿದಿದ್ದು, ಯಾರಿಗೆ ಬಿ –ಫಾರಂ ಎಂಬುದು ಇನ್ನೂ ಖಾತರಿ ಆಗಿಲ್ಲ. ವಕೀಲ ಎಚ್.ಎಸ್. ಚಂದ್ರಮೌಳಿ ಅವರಿಂದ ಸ್ಪಷ್ಟನೆ ಪಡೆದುಕೊಂಡು ಅವರಿಗೇ ಟಿಕೆಟ್ ನೀಡುವ ಸಾಧ್ಯತೆಯಿದೆ. ವರಿಷ್ಠರು ಚಂದ್ರಮೌಳಿಗೆ ಮತ್ತೆ ಮಣೆ ಹಾಕಿದರೆ ನಿವೃತ್ತ ಕೆಎಎಸ್ ಅಧಿಕಾರಿ ಮಲ್ಲಿಕಾರ್ಜುನಯ್ಯಗೆ ನಿರಾಸೆಯಾಗಲಿದೆ.
ಜೆಡಿಎಸ್‌ನ ರಣೋತ್ಸಾಹ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಮೈಕೊಡವಿ ಮೇಲೆದಿದ್ದೆ. ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು, ಎರಡು ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಚಾರದ ಮೂಲಕ ಸ್ಫೂರ್ತಿ ತುಂಬಿ ಹೋಗಿದ್ದಾರೆ.
23ಕ್ಕೆ ನಾಮಪತ್ರ: ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಬಿ.ಎ. ಜೀವಿಜಯ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
‘ನಾಮಪತ್ರ ಸಲ್ಲಿಸುವ ವೇಳೆ ನನ್ನ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯೂ ಸರಳವಾಗಿ ಇರಲಿದೆ. ವಿರಾಜಪೇಟೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಉತ್ತಮ ವಾತಾವರಣವಿದೆ’ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.