ADVERTISEMENT

ಸಾಹಿತ್ಯ ರಂಗದಲ್ಲಿ ಶತಕ ದಾಟಿದ ಕೊಡವ ಮಕ್ಕಡ ಕೂಟ

ಸಂಘಟನೆಯ 100ನೇ ಪುಸ್ತಕ ಮಡಿಕೇರಿಯಲ್ಲಿ ಬಿಡುಗಡೆ, ಹಿರಿಯ ಸಾಹಿತಿಗಳಿಂದ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:11 IST
Last Updated 24 ನವೆಂಬರ್ 2024, 16:11 IST
ಕೊಡವ ಮಕ್ಕಡ ಕೂಟದ 100ನೇ ಪುಸ್ತಕ ‘೧೦೦ನೇ ಮೊಟ್ಟ್’  ಅನ್ನು ಸಮಾಜ ಸೇವಕಿ ಕುಪ್ಪಂಡ ಛಾಯಾ ನಂಜಪ್ಪ ಭಾನುವಾರ ಮಡಿಕೇರಿಯಲ್ಲಿ ಬಿಡುಗಡೆ ಮಾಡಿದರು. ಲೇಖಕರಾದ ರಶ್ಮಿ ಮೇದಪ್ಪ, ಪುತ್ತರೀರ ಕರುಣ್ ಕಾಳಯ್ಯ, ಬಾಚರಣಿಯಂಡ ಅಪ್ಪಣ್ಣ, ಬೊಳ್ಳಜಿರ ಬಿ.ಅಯ್ಯಪ್ಪ, ತೆನ್ನೀರ ಟೀನಾ ಚಂಗಪ್ಪ, ಪೇರಿಯಂಡ ಯಶೋಧ, ಕರವಂಡ ಸೀಮಾ ಗಣಪತಿ ಭಾಗವಹಿಸಿದ್ದರು
ಕೊಡವ ಮಕ್ಕಡ ಕೂಟದ 100ನೇ ಪುಸ್ತಕ ‘೧೦೦ನೇ ಮೊಟ್ಟ್’  ಅನ್ನು ಸಮಾಜ ಸೇವಕಿ ಕುಪ್ಪಂಡ ಛಾಯಾ ನಂಜಪ್ಪ ಭಾನುವಾರ ಮಡಿಕೇರಿಯಲ್ಲಿ ಬಿಡುಗಡೆ ಮಾಡಿದರು. ಲೇಖಕರಾದ ರಶ್ಮಿ ಮೇದಪ್ಪ, ಪುತ್ತರೀರ ಕರುಣ್ ಕಾಳಯ್ಯ, ಬಾಚರಣಿಯಂಡ ಅಪ್ಪಣ್ಣ, ಬೊಳ್ಳಜಿರ ಬಿ.ಅಯ್ಯಪ್ಪ, ತೆನ್ನೀರ ಟೀನಾ ಚಂಗಪ್ಪ, ಪೇರಿಯಂಡ ಯಶೋಧ, ಕರವಂಡ ಸೀಮಾ ಗಣಪತಿ ಭಾಗವಹಿಸಿದ್ದರು   

ಮಡಿಕೇರಿ: ಇಲ್ಲಿನ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟವು ತನ್ನ 100ನೇ ಪುಸ್ತಕ ಸೇರಿದಂತೆ ಒಟ್ಟು 4 ಪುಸ್ತಕಗಳನ್ನು ಭಾನುವಾರ ಹೊರತಂದಿತು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪುತ್ತರೀರ ಕರುಣ್ ಕಾಳಯ್ಯ ಅವರ ಸಂಪಾದನೆಯ ‘೧೦೦ನೇ ಮೊಟ್ಟ್’ ಪುಸ್ತಕ, ತೆನ್ನೀರ ಟೀನಾ ಚಂಗಪ್ಪ ಅವರ ‘ಮನಸ್‌ರ ಮರೆಲ್’, ಪೇರಿಯಂಡ ಯಶೋಧಾ ಅವರ ‘ಮನಸ್‌ರ ಜರಿ’, ಕರವಂಡ ಸೀಮಾ ಗಣಪತಿ ಅವರ ‘ಮನಸ್‌ರ ತಕ್ಕ್’ ಹಾಗೂ ಐಚಂಡ ರಶ್ಮಿ ಮೇದಪ್ಪ ಅವರ ‘ಕೊಡವಡ ನಮ್ಮೆನಾಳ್’ (ನಾಟಕ ರೂಪತ್‌ಲ್) ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ‘ಸಾಹಿತ್ಯ ಕ್ಷೇತ್ರ ಇಂದು ಭಾಷೆ ಮತ್ತು ಜಾತಿಯನ್ನು ಮೀರಿ ಬೆಳೆದಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಹೀಗಿದ್ದರೂ, ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು, ಬರಹಗಾರರಿಗೆ ಪ್ರೋತ್ಸಾಹದ ಕೊರತೆ ಎದುರಾಗಿದೆ ಎಂದು ಹೇಳಿದರು.

ಸಮಾಜ ಸೇವಕಿ ಕುಪ್ಪಂಡ ಛಾಯಾ ನಂಜಪ್ಪ ಮಾತನಾಡಿ, ‘ಕೊಡಗಿನ ಶ್ರೇಷ್ಠ ವ್ಯಕ್ತಿಗಳು, ಪರಂಪರೆ, ಸಂಸ್ಕೃತಿ, ಆಚಾರ, ವಿಚಾರ ಇಡೀ ಪ್ರಪಂಚಕ್ಕೆ ಪರಿಚಯವಾಗಬೇಕಾದರೆ ಕನ್ನಡ, ಕೊಡವ ಭಾಷೆಯೊಂದಿಗೆ ಇಂಗ್ಲೀಷ್ ಭಾಷೆಯಲ್ಲೂ ಪುಸ್ತಕಗಳು ರಚನೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘100ನೇ ಮೊಟ್ಟ್’ ಕೊಡವ ಮಕ್ಕಡ ಕೂಟದ ಮಹತ್ವಾಕಾಂಕ್ಷೆಯ ಪುಸ್ತಕವಾಗಿದ್ದು, ಕೊಡವ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ 45ಕ್ಕೂ ಹೆಚ್ಚು ಲೇಖನಗಳಿವೆ. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ದೇವನೆಲೆ, ಐನ್‌ಮನೆ, ಮಂದ್, ಪ್ರಕೃತಿ, ಕೊಡವ ಪದ್ಧತಿ ಸೇರಿದಂತೆ ಅನೇಕ ವಿಚಾರಗಳನ್ನು ಪುಸ್ತಕ ಒಳಗೊಂಡಿವೆ ಎಂದು ಪುಸ್ತಕದ ಸಂಪಾದಕ ಪುತ್ತರೀರ ಕರುಣ್ ಕಾಳಯ್ಯ ತಿಳಿಸಿದರು.‌‌

ತೆನ್ನೀರ ಟೀನಾ ಚಂಗಪ್ಪ ಮಾತನಾಡಿ ‘ನನ್ನ ‘ಮನಸ್‌ರ ಮರೆಲ್’ ಪುಸ್ತಕದಲ್ಲಿ ನೈಜ ಘಟನೆಗಳಿಗೆ ಕಥೆಯ ರೂಪ ನೀಡಲಾಗಿದೆ’ ಎಂದರು.‌

‘ಕೊಡವಡ ನಮ್ಮೆನಾಳ್’ ಪುಸ್ತಕದ ಬರಹಗಾರ್ತಿ ರಶ್ಮಿ ಮೇದಪ್ಪ ಮಾತನಾಡಿ ‘ಹಬ್ಬ, ಸಂಪ್ರದಾಯಗಳು ಎನ್ನುವುದು ಒಂದು ಜನಾಂಗದ ಪ್ರತೀಕವಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದು ಗಾಡಿಯ ಎರಡು ಚಕ್ರವಿದ್ದಂತೆ, ಒಂದಕ್ಕೆ ಹಾನಿಯಾದರೂ ಜನಾಂಗದ ಅಳಿವು ಖಚಿತ. ವಿಶ್ವ ಸಂಸ್ಥೆಯ ವರದಿಯಂತೆ ಅಳಿವಿನಂಚಿನಲ್ಲಿರುವ 197 ಭಾಷೆಗಳಲ್ಲಿ ಕೊಡವ ಭಾಷೆ ಕೂಡ ಇದೆ ಎನ್ನುವುದು ಆತಂಕಕಾರಿಯಾಗಿದೆ’ ಎಂದು ಹೇಳಿದರು.

‘ಮನಸ್‌ರ ಜರಿ’ಯ ಬರಹಗಾರ್ತಿ ಪೇರಿಯಂಡ ಯಶೋಧ ಹಾಗೂ ‘ಮನಸ್‌ರ ತಕ್ಕ್’ ಪುಸ್ತಕದ ಬರಹಗಾರ್ತಿ ಕರವಂಡ ಸೀಮಾ ಗಣಪತಿ ಅವರು ಕೊಡವ ಮಕ್ಕಡ ಕೂಟದ ಸಾಧನೆ ಮತ್ತು ಬರಹಗಾರರಿಗೆ ನೀಡುತ್ತಿರುವ ಸಹಕಾರ ಶ್ಲಾಘಿಸಿದರು.

ಬೊಪ್ಪಂಡ ಸರಳ ಕರುಂಬಯ್ಯ, ಉಡುವೇರ ರೇಖಾ ರಘು, ಚೋಕಿರ ಅನಿತಾ, ಬೊಟ್ಟೋಳಂಡ ನಿವ್ಯ ದೇವಯ್ಯ, ಚೀಯಕ್ ಪೂವಂಡ ಶ್ವೇತನ್ ಚಂಗಪ್ಪ, ಕುಳುವಂಡ ಶೃತಿ ಪೂಣಚ್ಚ, ಪಚ್ಚಾರಂಡ ನಿಶಾ ಸುಬ್ರಮಣಿ, ಬೊಪ್ಪಂಡ ಶ್ಯಾಮ್ ಪೂಣಚ್ಚ ಹಾಗೂ ಅಜ್ಜಮಕ್ಕಡ ವಿನು ಕುಶಾಲಪ್ಪ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹೃದಯರು

‘ಕೊಡವ ಮಕ್ಕಡ ಕೂಟದಿಂದ ಸಾಹಿತ್ಯ ಯಜ್ಞ’

ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ ‘ಕೊಡವ ಮಕ್ಕಡ ಕೂಟ ಸಂಘಟನೆ ಯಾವುದೇ ಲಾಭಾಂಶವನ್ನು ನಿರೀಕ್ಷೆ ಮಾಡದೆ ಜಿಲ್ಲೆಯಲ್ಲಿ ಸಾಹಿತ್ಯ ಯಜ್ಞವನ್ನೇ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಕೊಡಗಿನ ಹಿರಿಯ ಸಾಹಿತಿಗಳು ತಮ್ಮ ಪರಿಶ್ರಮದ ಮೂಲಕ ಶ್ರೇಷ್ಠ ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಇವುಗಳು ಇಂದು ಮರೆಯಾಗಿದ್ದು ಮತ್ತೆ ಓದುಗರಿಗೆ ಸಿಗುವಂತ್ತಾಗಬೇಕು ಎಂದರು.

‘ಶತಕ ದಾಟಿದರೂ ಮುಂದುವರಿಯಲಿದೆ ಸಾಹಿತ್ಯ ಕಾರ್ಯ’

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಯಾವುದೇ ಒಳ್ಳೆಯ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ಪ್ರೋತ್ಸಾಹ ನೀಡುವವರಿಗಿಂತ ಕಾಲು ಎಳೆಯುವವರ ಸಂಖ್ಯೆಯೇ ಹೆಚ್ಚು’ ಎಂದು ಬೇಸರ ವ್ಯಕ್ತಪಡಿಸಿದರು.

ಇದೆಲ್ಲವನ್ನೂ ಮೀರಿ ಕೊಡವ ಮಕ್ಕಡ ಕೂಟವು ಇಂದು 100ನೇ ಪುಸ್ತಕವನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆಯೂ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.