ADVERTISEMENT

ಶನಿವಾರಸಂತೆ: ಮರ ತೆರವಿಗೆ 17 ಪರಿಸರವಾದಿಗಳಿಂದ ಆಕ್ಷೇಪ

ರಾಜ್ಯದ ವಿವಿಧ ಭಾಗಗಳಿಂದ ಬಂದ ಪತ್ರಗಳು, ಮತ್ತೊಮ್ಮೆ ಸಮೀಕ್ಷೆ ನಡೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 6:14 IST
Last Updated 13 ಮಾರ್ಚ್ 2024, 6:14 IST
<div class="paragraphs"><p>ಶನಿವಾರಸಂತೆಯ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಮಂಗಳವಾರ&nbsp;ಸಮಾಲೋಚನಾ ಸಭೆ ನಡೆಯಿತು</p></div>

ಶನಿವಾರಸಂತೆಯ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಯಿತು

   

ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿಯಿಂದ ಯಸಳೂರು ಮಾರ್ಗವಾಗಿ ಕೊಡ್ಲಿಪೇಟೆ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ 206 ಮರಗಳನ್ನು ಕಡಿಯಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಪರಿಸರವಾದಿಗಳಿಂದ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ. ಒಟ್ಟು 17 ಮಂದಿ ಈ ಕುರಿತು ತಮ್ಮ ಆಕ್ಷೇಪಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ.

ಇಲ್ಲಿನ ವಲಯ ಅರಣ್ಯ ಅಧಿಕಾರಿ ಕಚೇರಿಯಲ್ಲಿ ಕೊಡಗು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದವು.

ADVERTISEMENT

ರಾಜ್ಯ ವಿವಿಧ ಭಾಗಗಳಿಂದ 17 ಮಂದಿ ಪರಿಸರವಾದಿ ಮತ್ತು ಸಂಸ್ಥೆಗಳು ಇ–ಮೇಲ್ ಹಾಗೂ ಪತ್ರ ಮುಖೇನ ಮೂಲಕ ಎತ್ತಿರುವ ಆಕ್ಷೇಪಗಳನ್ನು ಡಿಸಿಎಫ್ ಭಾಸ್ಕರ್ ಸಭೆಯ ಗಮನಕ್ಕೆ ತಂದರು.

‘ಮರಗಳ ತೆರವಿನಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಕುರಿತ ಮೌಲ್ಯಮಾಪನ ವರದಿ ಸಿದ್ಧವಾಗಿದೆಯೇ ಎಂಬುದು ಆಕ್ಷೇಪಗಳಲ್ಲಿ ಪ್ರಮುಖವಾಗಿತ್ತು. ಈ ಕುರಿತು ಡಿಸಿಎಫ್ ಭಾಸ್ಕರ್ ಅವರು ಕೂಡಲೇ ಈ ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ’ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

‘ಮರ ತೆರವಿಗೆ ಸಂಬಂಧಿಸಿದಂತೆ ಒಂದು ಮರಕ್ಕೆ 10 ಮರ ನೆಡುವುದಕ್ಕೆ ಜಾಗ ಗುರುತಿಸಲಾಗಿದೆಯೇ, ಮರ ಸ್ಥಳಾಂತರ ಕುರಿತು ಚಿಂತನೆ ಇದೆಯೇ, ಮರಗಳ ಸಂಖ್ಯೆಯನ್ನು ಮಾತ್ರ ನೀಡಲಾಗಿದೆಯೇ ಹೊರತು ಮರಗಳ ಅಳತೆ ಮತ್ತು ಎತ್ತರವನ್ನು ಏಕೆ ನಮೂದಿಸಿಲ್ಲ, ಎಂಬಿತ್ಯಾದಿ ಆಕ್ಷೇಪಗಳು ಅರ್ಜಿಯಲ್ಲಿವೆ’ ಎಂದು ಭಾಸ್ಕರ್ ಸಭೆಯ ಗಮನಕ್ಕೆ ತಂದರು.

ನಂತರ, ಸುದೀರ್ಘವಾದ ಚರ್ಚೆಗಳು ನಡೆದು ಅಂತಿಮವಾಗಿ ಆಕ್ಷೇಪಗಳಿಗೆ ಪೂರಕವಾದ ಮಾಹಿತಿಗಳನ್ನು ನೀಡುವಂತೆ ಭಾಸ್ಕರ್ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಮೊದಲಿಗೆ 300 ಮರಗಳನ್ನು ತೆರವು ಮಾಡಬೇಕು ಎಂಬ ‌ಪ್ರಸ್ತಾವವಿತ್ತು. ಅರಣ್ಯ ಇಲಾಖೆಯ ಸಮೀಕ್ಷೆಯಲ್ಲಿ 206 ಮರಗಳನ್ನು ಗುರುತಿಸಲಾಯಿತು. ಈಗ ಮತ್ತೊಮ್ಮೆ ಸಮೀಕ್ಷೆ ನಡೆಸಿ, ತೆರವು ಮಾಡಬೇಕಿರುವ ಮರಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ನಿವಾಸಿ ಕೆ.ಕೆ.ನಾಗೇಶ್ ಮಾತನಾಡಿ, ‘ರಸ್ತೆ ತುಂಬಾ ಕಿರಿದಾಗಿದ್ದು, ರಸ್ತೆ ಅಭಿವೃದ್ಧಿ ಅವಶ್ಯಕತೆ ಇದೆ. ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚುತ್ತಿದೆ. ಸಕಲೇಶಪುರಕ್ಕೆ ತೆರಳಲು ಇದು ಸಮೀಪದ ರಸ್ತೆ. ಹಾಗಾಗಿ, ತಕ್ಷಣವೇ ಅರಣ್ಯ ಇಲಾಖೆ ಮರ ಕಡಿಯಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಸ್ಥಳೀಯ ರೈತರಾದ ಬಿ.ಎ.ಆನಂದ ಮಾತನಾಡಿ, ‘ರಸ್ತೆ ಕಾಮಗಾರಿ ಆರಂಭವಾಗಿದ್ದು, ತೋಟಗಳ ಬೇಲಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ದನ–ಕರುಗಳು ತೋಟಕ್ಕೆ ಲಗ್ಗೆ ಇಡುತ್ತಿವೆ. ರಸ್ತೆ ಕಾಮಗಾರಿ ಬೇಗ ಮುಗಿದರೆ ಬೇಲಿ ಹಾಕಲು ಸಹಾಯಕವಾಗುತ್ತದೆ. ಹಾಗಾಗಿ, ಬೇಗನೆ ಕಾಮಗಾರಿ ಮುಗಿಸಬೇಕು’ ಎಂದು ಕೋರಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯಾಧಿಕಾರಿ ಗಾನಶ್ರೀ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಸಹಾಯಕ ಎಂಜಿನಿಯರ್ ವಿಜಯ್ ಕುಮಾರ್, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪುರುಷೋತ್ತಮ್, ರೈತ ಮುಖಂಡರಾದ ಎಸ್.ಕೆ.ಧರ್ಮಪ್ಪ, ಸುಬ್ರಮಣಿ ಶಂಭುಲಿಂಗಪ್ಪ, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಂತರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.