ADVERTISEMENT

2019- ವಾರ್ಷಿಕ ಹಿನ್ನೋಟ: ಕೊಡಗು ಜಿಲ್ಲೆ ಘಟನಾವಳಿಗಳು

2019: ಕೊಡಗು ಜಿಲ್ಲೆಗೆ ಸಿಹಿಗಿಂತ ಕಹಿ ಪಾಲೇ ಹೆಚ್ಚು, ಹಲವು ವಿಚಾರದಲ್ಲಿ ಗಮನ ಸೆಳೆದಿದ್ದ ‘ಕಾಫಿ ನಾಡು’

ಆದಿತ್ಯ ಕೆ.ಎ
Published 30 ಡಿಸೆಂಬರ್ 2019, 14:16 IST
Last Updated 30 ಡಿಸೆಂಬರ್ 2019, 14:16 IST
ಕೊಡಗು ಉತ್ಸವ...
ಕೊಡಗು ಉತ್ಸವ...   

ಮಡಿಕೇರಿ: ಕೊಡಗು ಜಿಲ್ಲೆಗೆ 2018ರಂತೆಯೇ 2019 ಸಹ ನೋವಾಗಿ ಕಾಡಿತು. ಕಾಫಿ ಕಣಿವೆಯ ಜನರಿಗೆ ಸಿಹಿಗಿಂತ ಕಹಿಯ ಪಾಲೇ ಮೇಲಾಯಿತು. ‘ಬರ ಪರಿಸ್ಥಿತಿ’ ಬಂತು ಎನ್ನುವಷ್ಟರಲ್ಲಿ ‘ಧೋ...’ ಎಂದು ಸುರಿದ ಮಳೆ ಪ್ರವಾಹ ಸೃಷ್ಟಿಸಿತ್ತು. ಸಾವು– ನೋವಿಗೂ ಕಾರಣವಾಯಿತು.

ಹಲವರು ಆಶ್ರಯ ಕಳೆದುಕೊಂಡು ಪರಿಹಾರ ಕೇಂದ್ರ ಸೇರುವ ಪರಿಸ್ಥಿತಿ ಬಂದಿತ್ತು. ಕಾವೇರಿ ಮುನಿದಿದ್ದಳು. ಹಿರಿಯ ರಾಜಕಾರಣಿ, ವಾಗ್ಮಿ ಎ.ಕೆ.ಸುಬ್ಬಯ್ಯ ಅವರನ್ನು ಜಿಲ್ಲೆ ಕಳೆದುಕೊಂಡಿತು. ಜಿಲ್ಲಾ ಉಸ್ತುವಾರಿ ಸಚಿವರು ಬದಲಾದರು. 2018ರ ನೆರೆ ಸಂತ್ರಸ್ತರಿಗೆ ಇನ್ನೂ ಪೂರ್ಣವಾಗಿ ಮನೆ ಸಿಕ್ಕಿಲ್ಲ. ಹೋರಾಟ, ಬೆಳೆ ನಷ್ಟ, ವಿವಾದ, ಆನೆ–ಮಾನವ ಸಂಘರ್ಷ, ನಿರಂತರ ಹುಲಿ ದಾಳಿಗೆ ಜಿಲ್ಲೆಗೆ ಸಾಕ್ಷಿಯಾಯಿತು. ಕೆಲವು ಘಟನೆಯಲ್ಲಿ ರಾಜ್ಯ ಹಾಗೂ ರಾಷ್ಟ್ರದ ಗಮನವನ್ನೂ ಜಿಲ್ಲೆ ಸೆಳೆಯಿತು. ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್‌ ಅವರಿಗೆ ಆ ಭಾಗ್ಯ ಸಿಗಲಿಲ್ಲ.

ಜನವರಿ: ರಾಷ್ಟ್ರದಲ್ಲಿ ‘ಕಿಡಿ’ ಹೊತ್ತಿಸಿದ್ದ ಹೇಳಿಕೆ
11ರಂದು ‘ಕೊಡಗು ಪ್ರವಾಸಿ ಉತ್ಸವ’ಕ್ಕೆ ಚಾಲನೆ ಸಿಕ್ಕಿತ್ತು. ಪ್ರವಾಸಿಗರನ್ನು ಸೆಳೆಯಲು ಉತ್ಸವ ಯಶಸ್ವಿಯಾಗಿತ್ತು. ಇದೇ ತಿಂಗಳು ತೆಲಂಗಾಣದಿಂದ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ಗಣಿ ಉದ್ಯಮಿಯೊಬ್ಬರ ಪುತ್ರ ನಾಪತ್ತೆಯಾಗಿದ್ದು ಅವರ ಪೋಷಕರಿಗೂ ಆತಂಕ ತಂದೊಡ್ಡಿತ್ತು.
27ರಂದು ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಚೌಡಿಯಮ್ಮ–ಗುಳಿಗಪ್ಪ ದೇಗುಲದ ಲೋಕಾರ್ಪಣೆಗೆ ಆಗಮಿಸಿದ್ದ ಅಂದಿನ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮುಸ್ಲಿಂ ಸಮುದಾಯದ ಕುರಿತು ನೀಡಿದ್ದ ಹೇಳಿಕೆ ರಾಷ್ಟ್ರದಲ್ಲಿ ವಿವಾದ ಸೃಷ್ಟಿಸಿತ್ತು.

ADVERTISEMENT

29ರಂದು ಮಡಿಕೇರಿ ಅರಮನೆ ದಿಢೀರ್‌ ಕುಸಿದಿತ್ತು. ಯಾರಿಗೂ ಅಪಾಯ ಆಗಿರಲಿಲ್ಲ.
30ರಂದು ಅಂದಿನ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಾಸ್‌ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಸಂತ್ರಸ್ತರ ಪುನರ್ವಸತಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿತ್ತು. ‘ಮೈತ್ರಿ’ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಂದೇ ಕೊಡಗು ಜಿಲ್ಲೆ ನೂತನ ಜಿಲ್ಲಾಧಿಕಾರಿ ಆಗಿ ಅನೀಸ್ ಕಣ್ಮಣಿ ಜಾಯ್‌ ನೇಮಕಗೊಂಡಿದ್ದರು.

ಫೆಬ್ರುವರಿ: ಹೊಸ ತಾಲ್ಲೂಕು ‘ಉದಯ
3ರಂದು ಕೊಡಗು ಜಿಲ್ಲೆಯ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಯಶಸ್ವಿಯಾಗಿ ನಡೆಯಿತು. 11ರಂದು ಬಜೆಟ್‌ನಲ್ಲಿ ಕಾವೇರಿ ಹಾಗೂ ಪೊನ್ನಂಪೇಟೆ ತಾಲ್ಲೂಕು ಘೋಷಣೆಯಾಗದ ಕಾರಣಕ್ಕೆ, ಕುಶಾಲನಗರದಲ್ಲಿ ಬಂದ್ ನಡೆದಿತ್ತು. 14ರಂದು ಕೆ.ಕೆ.ಮಂಜುನಾಥ್‌ ಕುಮಾರ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡರು. ಕೊಡಗಿನಲ್ಲಿ ಆಕ್ರೋಶ ಹೆಚ್ಚಾದಂತೆ 26ರಂದು ಕಾವೇರಿ ಹಾಗೂ ಪೊನ್ನಂಪೇಟೆ ತಾಲ್ಲೂಕು ಕೇಂದ್ರವಾಗಿ ‘ಮೈತ್ರಿ’ ಸರ್ಕಾರ ಘೋಷಣೆ ಮಾಡಿದ್ದು ವಿಶೇಷ.

ಮಾರ್ಚ್‌: ಕುಶಾಲನಗರದಲ್ಲಿ ಸ್ಫೋಟಕ ವಶ
9ರಂದು ಕುಶಾಲನಗರದಲ್ಲಿ ಯುವ ಸಾಹಿತ್ಯ ಸಮ್ಮೇಳನ ನಡೆಯಿತು. 26ರಂದು ಕುಶಾಲನಗರ ಸಮೀಪದ ಕೂಡು ಮಂಗಳೂರಿನಲ್ಲಿ ಅಪಾಯಕಾರಿ ಸ್ಫೋಟಕ ವಶಕ್ಕೆ ಪಡೆದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಮೇ: ದಕ್ಷಿಣ ಕೊಡಗಿನಲ್ಲಿ ಕಂಪಿಸಿದ್ದ ಭೂಮಿ
ಲೋಕಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರತಾಪ ಸಿಂಹ ಅವರು ಮೈಸೂರು – ಕೊಡಗು ಕ್ಷೇತ್ರದ ಸಂಸದರಾಗಿ ಮೇ 23ರಂದು ಆಯ್ಕೆಯಾದರು. ಮೇ 24ರಂದು ಕೊಡಗು ಜಿಲ್ಲೆ ದಕ್ಷಿಣ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಈ ಭಾಗದ ಜನರು ಭಯಗೊಂಡಿದ್ದರು.

ಜೂನ್‌: ಮರಗಳ ಹನನ ಪ್ರಕರಣ ಬೆಳಕಿಗೆ
ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 808 ಮರಗಳನ್ನು ಹನನಕ್ಕೆ ಅರಣ್ಯ ಇಲಾಖೆಯೇ ಅನುಮತಿ ನೀಡಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣ ಬೆಳಕಿಗೆ ಬಂದ ಮೇಲೆ ಡಿಸಿಎಫ್‌ ಮಂಜುನಾಥ್‌ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿತ್ತು.
8 ಹಾಗೂ 9ರಂದು ಗೋಣಿಕೊಪ್ಪಲಿನಲ್ಲಿ ಬೊಳ್ಳಿನಮ್ಮೆ ಸಂಭ್ರಮ ಮನೆ ಮಾಡಿತ್ತು. 18ರಂದು ರೋಟರಿಯಿಂದ 25 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರ ಮಾಡಿದ್ದು ವಿಶೇಷ. ಜೂನ್‌ 14ರಂದು ಗೋಣಿಕೊಪ್ಪಲು ಸಮೀಪದ ಬಾಳೆಲೆಯಲ್ಲಿ ಗುಂಡು ಹಾರಿಸಿ ಶಿಕ್ಷಕಿಯ ಹತ್ಯೆ ಮಾಡಿ ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿದ್ದ.

26ರಂದು ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದಲ್ಲಿ ವಿದ್ಯಾರ್ಥಿ ಮೇಲೆ ಕಾಡಾನೆ ಮೇಲೆ ದಾಳಿ ನಡೆಸಿತ್ತು. ಜೂನ್‌ ಅಂತ್ಯವಾದರೂ ಮುಂಗಾರು ಅಬ್ಬರಿಸಿದೇ ಆತಂಕ ಸೃಷ್ಟಿಸಿತ್ತು. ಆದರೆ, ಆಗಸ್ಟ್‌ನಲ್ಲಿ ಪ್ರವಾಹ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ.

ಜುಲೈ: ‘ರೆಡ್‌ ಅಲರ್ಟ್‌’ – ಮಳೆ
ಜುಲೈ 19ರಂದು ಮಳೆಗಾಲದ ಮೊದಲ ‘ರೆಡ್‌ ಅಲರ್ಟ್‌’ ಘೋಷಣೆ ಮಾಡಲಾಗಿತ್ತು. ಇದರಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದರು. ಜುಲೈ 22ರಂದು ಭಾಗಮಂಡಲದ ಸ್ನಾನಘಟ್ಟವು ಮೊದಲ ಬಾರಿಗೆ ಭರ್ತಿಯಾಗಿತ್ತು.

ಆಗಸ್ಟ್‌: ಭೂಕುಸಿತ, ಪ್ರವಾಹ
ಆಗಸ್ಟ್‌ ಮೊದಲ ವಾರ ಸುರಿದ ಭಾರೀ ಮಳೆಯಿಂದ ಕಾವೇರಿ ನದಿಯ ಉಕ್ಕಿ ಹರಿದು ಪ್ರವಾಹ ಸ್ಥಿತಿ ಉಂಟಾಗಿತ್ತು. ತೋರ ಹಾಗೂ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತ ಸಂಭವಿಸಿತ್ತು. ಆಗಸ್ಟ್‌ 9ರಂದು ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ಒಂದೇ ದಿನ 7 ಮಂದಿ ಮೃತಪಟ್ಟಿದ್ದರು. ಆಗಸ್ಟ್‌ 25ರಂದು ಶೋಷಿತರ ಧ್ವನಿಯಾಗಿದ್ದ ಎ.ಕೆ.ಸುಬ್ಬಯ್ಯ ಅವರು ನಿಧನರಾದರು. ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಅವರನ್ನು ಜಿಲ್ಲೆ ಕಳೆದುಕೊಂಡು ಬಡವಾಯಿತು.

ಸೆಪ್ಟೆಂಬರ್‌: ನಾಲ್ವರು ಜಲಸಮಾಧಿ
ವಿರಾಜಪೇಟೆ ತಾಲ್ಲೂಕಿನ ತೋರಾದಲ್ಲಿ ಭೂಕುಸಿತದಿಂದ ಮಣ್ಣಿನಲ್ಲಿ ಸಿಲುಕಿದ್ದ ಮೃತದೇಹಕ್ಕೆ ನಡೆಯುತ್ತಿದ್ದ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಪಿಯು ಓದುತ್ತಿದ್ದ ಮಗಳನ್ನು ನೋಡಲು ಸುಂಟಿಕೊಪ್ಪದ ಕುಟುಂಬವೊಂದು ಸೆ.2ರಂದು ಮೂಡುಬಿದರೆಗೆ ತೆರಳುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಮಡ್ಯಂಗಲ ಎಂಬಲ್ಲಿ ಹೊಂಡಕ್ಕೆ ಕಾರು ಬಿದ್ದು ಕೊಡಗಿನ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿದ್ದರು.

4ರಂದು ರಾತ್ರಿ ಧಾರಾಕಾರ ಮಳೆ ಸುರಿದ ಭಾಗಮಂಡಲ ಜಲಾವೃತಗೊಂಡಿತ್ತು. ಮತ್ತೆ ಪ್ರವಾಹ ಭೀತಿ ಎದುರಾಗಿತ್ತು. 9ರಂದು ಬೆಟ್ಟಗಳ ಅಸ್ಥಿರದಿಂದ ಭೂಕುಸಿತ ಸಂಭವಿಸಿದೆ ಎಂದು ಭೂವಿಜ್ಞಾನಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು.

23ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ವಿ.ಸೋಮಣ್ಣ ಅವರು ಮೊದಲ ಬಾರಿಗೆ ಮಡಿಕೇರಿಗೆ ಭೇಟಿ ನೀಡಿದ ಅಧಿಕಾರಿಗಳ ಸಭೆ ನಡೆಸಿದರು.

26ರಂದು ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ಅರೋಗ್ಯಾಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಪ್ರಾಕೃತಿಕ ವಿಕೋಪದಿಂದ 2018ರಲ್ಲಿ ಕಳೆಗುಂದಿದ್ದ ಮಡಿಕೇರಿ ದಸರಾವು 2019ರಲ್ಲಿ ವೈಭವ ಪಡೆದುಕೊಂಡಿತ್ತು. 29ರಂದು ದಸರಾಕ್ಕೆ ಸಂಭ್ರಮದ ಚಾಲನೆ ಸಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.