ADVERTISEMENT

ಪಾಲಿಶ್ ಮಾಡುತ್ತಲೇ ಚಿನ್ನ ಕಳವು!

ಪೊಲೀಸರ ಕಾರ್ಯಾಚರಣೆ ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 6:02 IST
Last Updated 1 ಮಾರ್ಚ್ 2023, 6:02 IST
   

ಮಡಿಕೇರಿ: ಮನೆ ಮನೆಗೆ ತೆರಳಿ ಚಿನ್ನಾಭರಣಗಳನ್ನು ಪಾಲಿಶ್‌ ಮಾಡುತ್ತಲೇ ಆಸಿಡ್‌ ಮೂಲಕ ಸ್ವಲ್ಪಮಟ್ಟಿನ ಚಿನ್ನವನ್ನು ಕರಗಿಸಿಕೊಂಡು ಗಮನಕ್ಕೆ ಬಾರದ ಹಾಗೆ ಲಪಟಾಯಿಸುತ್ತಿದ್ದ ಚಾಣಾಕ್ಷ ವಂಚಕ ತಂಡವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಕುಮಾರ್ (29), ಪ್ರವೀಣಕುಮಾರ್ (32), ಲಲನ್‌ಕುಮಾರ್ (26) ಬಂಧಿತ ಆರೋಪಿಗಳು.

ಚಿನ್ನಾಭರಣಗಳನ್ನು ಪಾಲಿಶ್ ಮಾಡುತ್ತೇವೆ ಎಂದು ಇವರು ಮನೆ ಮನೆಗೆ ತೆರಳಿ ಆಭರಣಗಳಿಗೆ ಆಸಿಡ್ ಲೇಪಿಸಿ ಸ್ವಲ್ಪ ಸ್ವಲ್ಪ ಚಿನ್ನವನ್ನು ಕದಿಯುತ್ತಿದ್ದರು. ಪಾಲಿಶ್ ನಂತರ ಹೊಳೆಯುವ ಆಭರಣ ನೋಡಿದ ಸಾರ್ವಜನಿಕರಿಗೆ ತೂಕ ಕಡಿಮೆಯಾಗಿರುವುದು ಗಮನಕ್ಕೆ ಬರುತ್ತಲೇ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹೆಬ್ಬಾಲೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಯಿತು. ಇವರಿಂದ 15 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮನೆ ಮನೆಗೆ ಬಂದು ಚಿನ್ನಾಭರಣ ಪಾಲಿಶ್ ಮಾಡುತ್ತೇವೆ ಎನ್ನುವವರನ್ನು ನಂಬದೇ ಚಿನ್ನಾಭರಣದ ಅಧಿಕೃತ ಮಳಿಗೆಗಳಲ್ಲೇ ಈ ಕಾರ್ಯ ನಡೆಸಬೇಕು. ಇಂತಹ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಗಮನ‌ಕ್ಕೆ ತರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕುಶಾಲನಗರ ಸಿಪಿಐ ಬಿ.ಜಿ. ಮಹೇಶ್, ಗ್ರಾಮಾಂತರ ಠಾಣೆಯ ಪಿಎಸ್‌ಐ ದಿನೇಶ್‌ಕುಮಾರ್, ಡಿ.ಎಸ್. ಪುನೀತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.