ADVERTISEMENT

ಹಾರಂಗಿಯಿಂದ 400 ಕ್ಯುಸೆಕ್‌ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 16:21 IST
Last Updated 24 ಮಾರ್ಚ್ 2024, 16:21 IST
ಹಾರಂಗಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವ ದೃಶ್ಯ ಈಚೆಗೆ ಕಂಡು ಬಂತು
ಹಾರಂಗಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವ ದೃಶ್ಯ ಈಚೆಗೆ ಕಂಡು ಬಂತು   

ಮಡಿಕೇರಿ: ಕಾವೇರಿ ಮತ್ತು ಹಾರಂಗಿ ನದಿಯಲ್ಲಿ ಹರಿವು ಕಡಿಮೆಯಾಗಿ ನದಿ ತೀರದ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಸೃಷ್ಟಿಯಾಗಿರುವುದರಿಂದ ಇಲ್ಲಿನ ಕುಶಾಲನಗರದ ಹಾರಂಗಿ ಜಲಾಶಯದಿಂದ 400 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ನದಿಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತು ಹೋಗಿ ಜನಜಾನುವಾರುಗಳಿಗೆ ಸಮಸ್ಯೆಯಾಗಿತ್ತು. ಸದ್ಯ, ಬಿಟ್ಟಿರುವ ನೀರಿನಿಂದ ಕುಶಾಲನಗರದ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹಾಸನ ಜಿಲ್ಲೆಯ ಕೊಣನೂರು, ರಾಮನಾಥ‍ಪುರ, ಕೆ.ಆರ್.ನಗರ ತಾಲ್ಲೂಕು, ಚುಂಚನಕಟ್ಟೆ ಭಾಗಗಳ ನದಿ ತೀರದ ಜನರಿಗೆ ಅನುಕೂಲವಾಗಲಿದೆ.

ಈ ಕುರಿತು ‘ಪ್ರಜಾವಾಣಿ’ ಹಾರಂಗಿ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರು, ‘ನದಿ ತೀರದ ಪ್ರದೇಶಗಳ ಜನರ ಅನುಕೂಲಕ್ಕೆ 400 ಕ್ಯುಸೆಕ್ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗುತ್ತಿದೆ. ಇನ್ನು 4 ದಿನಗಳು ಮಾತ್ರ ನೀರು ಹರಿಸಿ ನಂತರ ಬಂದ್ ಮಾಡಲಾಗುವುದು. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಮಳೆಯು ಕಾಣದಾಗಿದೆ. ಇದರಿಂದ ಆತಂಕವೂ ಎದುರಾಗಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಸದ್ಯ, 2,859 ಗರಿಷ್ಠ ಅಡಿಯ ಈ ಜಲಾಶಯದಲ್ಲಿ 2,828.37 ಅಡಿಗಳಷ್ಟು ನೀರಿದೆ. ಕಳೆದ ವರ್ಷ 2824.60 ಅಡಿಗಳಷ್ಟು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ತುಸು ಹೆಚ್ಚೇ ನೀರು ಈ ಬಾರಿ ಸಂಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.