ADVERTISEMENT

ವಿರಾಜಪೇಟೆ ಪುರಸಭೆ: ₹ 50 ಲಕ್ಷ ಉಳಿತಾಯ ಬಜೆಟ್

ವಿರಾಜಪೇಟೆ ಪುರಸಭೆಯ 2024–25ನೇ ಸಾಲಿನ ಆಯವ್ಯಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 2:37 IST
Last Updated 12 ಮಾರ್ಚ್ 2024, 2:37 IST
ವಿರಾಜಪೇಟೆ ಪುರಸಭೆಯಲ್ಲಿ ಬಜೆಟ್ ಕುರಿತು ಸದಸ್ಯರು ಚರ್ಚಿಸಿದರು
ವಿರಾಜಪೇಟೆ ಪುರಸಭೆಯಲ್ಲಿ ಬಜೆಟ್ ಕುರಿತು ಸದಸ್ಯರು ಚರ್ಚಿಸಿದರು   

ವಿರಾಜಪೇಟೆ: ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರು 2024–25ನೇ ಸಾಲಿಗೆ ₹ 50 ಲಕ್ಷ ಉಳಿತಾಯ ಬಜೆಟ್ ಅನ್ನು ಸೋಮವಾರ ಮಂಡಿಸಿದರು.

ಪುರಸಭೆಯ ಸಭಾಂಗಣದಲ್ಲಿ ಪುರಸಭೆಯ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಒಟ್ಟು ₹ 13.52 ಕೋಟಿ ಪುರಸಭೆಯ ನಿರೀಕ್ಷಿತ ಆದಾಯವಾಗಿದ್ದು, ನಿರೀಕ್ಷಿತ ವೆಚ್ಚ ₹ 13.02 ಕೋಟಿ ಎಂದು ಬಜೆಟ್ ಮಂಡಿಸಿದರು.

ಸದಸ್ಯ ಪೃಥ್ವಿನಾಥ್ ಮಾತನಾಡಿ, ‘ಕೊಡಗಿನಲ್ಲೂ ಈ ಬಾರಿ ಬರದ ಪರಿಸ್ಥಿತಿಯಿದೆ. ಪಟ್ಟಣದ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರಕೆಯಾಗುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಕಾವೇರಿ ನೀರನ್ನು ಮಾರಾಟ ಮಾಡುವ ಅಗತ್ಯವಿಲ್ಲ. ಅಲ್ಲದೆ ಶಾಸಕರು ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಆದ್ದರಿಂದ ಪುರಸಭೆ ನೀರಿನ ಕರವನ್ನು ತಗ್ಗಿಸಬೇಕು. ಈ ಬಾರಿ ನೀರಿನ ಕರದ ಮೊತ್ತವಾಗಿರುವ ₹ 130ರಲ್ಲಿ ಕನಿಷ್ಠ ₹ 10 ಕಡಿತಗೊಳಿಸಿ, ₹ 120ಕ್ಕೆ ನಿಗದಿಪಡಿಸಬೇಕು. ಇದನ್ನು ತಕ್ಷಣ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಧ್ವನಿಗೂಡಿಸಿದ ನೆಹರು ನಗರದ ಸದಸ್ಯ ಅಗಸ್ಟಿನ್ ಬೆನ್ನಿ, ‘ನೆಹರು ನಗರ ವ್ಯಾಪ್ತಿಯಲ್ಲಿ ಇಂದಿಗೂ ಐದು ದಿನಕ್ಕೊಮ್ಮೆ ಮಾತ್ರ ಕುಡಿಯುವ ನೀರು ನೀಡಲಾಗುತ್ತಿದೆ. ಆದ್ದರಿಂದ ಜನರಿಂದ ನೀರಿನ ಕರವಾಗಿ ₹ 100 ಮಾತ್ರ ವಸೂಲು ಮಾಡಬೇಕು. ಜೊತೆಗೆ ನಿವಾಸಿಗಳಿಗೆ ಕುಡಿಯುವ ನೀರನ್ನು ವಿತರಿಸಲು ಪರ್ಯಾಯ ವ್ಯವಸ್ಥೆಯನ್ನು ತಕ್ಷಣ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಪಿ.ರಂಜಿ ಪೂಣಚ್ಚ ಮಾತನಾಡಿ, ‘ಪಟ್ಟಣಕ್ಕೆ ಸಮಗ್ರ ನೀರು ಪೂರೈಕೆಗೆ ಈಗಾಗಲೇ ಅನುದಾನ ಹಂಚಿಕೆಯಾಗಿರುವ ₹ 58 ಕೋಟಿ ವೆಚ್ಚದ ಭೇತ್ರಿಯ ನೂತನ ಯೋಜನೆಯ ಕಾಮಗಾರಿ ಮುಗಿಯಲು ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ನೀರಿನ ಕರ ತಗ್ಗಿಸಬೇಕು’ ಎಂದರು.

ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್ ಇದಕ್ಕೆ ಪ್ರತಿಕ್ರಿಯಿಸಿ, ‘ಕುಡಿಯುವ ನೀರು ಪೂರೈಕೆಯ ನಿರ್ವಹಣಾ ಅಧಿಕವಾಗಿದೆ. ವಿದ್ಯುತ್ ಶುಲ್ಕವೊಂದೇ ₹ 15 ಲಕ್ಷಗಳಾಗುತ್ತದೆ. ಆದ್ದರಿಂದ ಕುಡಿಯುವ ನೀನರಿ ಕರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದರು.

ಸದಸ್ಯರು ನೀರಿನ ಕರವನ್ನು ಕನಿಷ್ಠ ₹ 10 ಕಡಿತಗೊಳಿಸುವಂತೆ ಬಿಗಿಪಟ್ಟು ಹಿಡಿದ ಕಾರಣ ಆಡಳಿತಾಧಿಕಾರಿ ಅವರು ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದರು.

ಸದಸ್ಯರಾದ ಡಿ.ಪಿ.ರಾಜೇಶ್, ಮೊಹಮದ್ ರಾಫಿ ಹಾಗೂ ಎಸ್.ಎಚ್. ಮತೀನ್ ಹಾಗೂ ಹಲವು ಸದಸ್ಯರು ಸಭೆಯಲ್ಲಿ ಮಾತನಾಡಿದರು.

ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚಿನ ಅನುದಾನ ತಂದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಅಭಿನಂದಿಸಿ, ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವಸಂತದೇವಿ ನೇಮಿರಾಜ್ ಅವರ ನಿಧನಕ್ಕೆ ಸಭೆ ಆರಂಭದಲ್ಲಿ ಸಂತಾಪ ಸೂಚಿಸಲಾಯಿತು.

ವಿರಾಜಪೇಟೆ ಪುರಸಭೆಯಲ್ಲಿ ಬಜೆಟ್ ಕುರಿತು ಸದಸ್ಯರು ಚರ್ಚಿಸಿದರು
ವಿರಾಜಪೇಟೆ ಪುರಸಭೆಯ 2024–25ನೇ ಸಾಲಿನ ಬಜೆಟ್ ಅನ್ನು ಮುಖ್ಯಾಧಿಕಾರಿ ಚಂದ್ರ ಕುಮಾರ್ ಅವರು ಸೋಮವಾರ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.