ADVERTISEMENT

₹ 7.38 ಲಕ್ಷ ವಿದ್ಯುತ್ ಬಿಲ್ ಬಾಕಿ:ಗ್ರಾಮಪಂಚಾಯಿತಿಗೆ ವಿದ್ಯುತ್ ಸರಬರಾಜು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 14:35 IST
Last Updated 10 ಜೂನ್ 2024, 14:35 IST
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯತಿ ಕಚೇರಿ.
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯತಿ ಕಚೇರಿ.   

ಕುಶಾಲನಗರ: ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತಿ ಸೆಸ್ಕ್‌‌‌ಗೆ ವಿದ್ಯುತ್ ಬಳಕೆ ಶುಲ್ಕ₹ 7,38,427 ಬಾಕಿ ಪಾವತಿಸದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

 ಇದರಿಂದಾಗಿ ಪಂಚಾಯತಿ ಕೆಲಸ ಸೇರಿ ಸಾರ್ವಜನಿಕರಿಗೂ ತೊಂದರೆ ಉಂಟಾಗಿದೆ. ನೀರು ಸರಬರಾಜು ಮೊತ್ತ  ₹5,62,852 ಹಾಗೂ ಬೀದಿ ದೀಪದ ಮೊತ್ತ ₹1,75,575 ಸೇರಿ ಒಟ್ಟು ₹7,38,427 ಹಣವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಪಾವತಿಸಬೇಕಾಗಿತ್ತು.

ಈ ಕುರಿತು ಏ.30ರ ಒಳಗೆ ನಿಗಮಕ್ಕೆ ಹಣ ಪಾವತಿಸುವಂತೆ ಪಂಚಾಯತಿಗೆ ನೋಟಿಸ್ ನೀಡಲಾಗಿತ್ತು. ಹಣ ಪಾವತಿಸದೆ ಇರುವುದು ವಿದ್ಯುತ್ ಸರಬರಾಜು ಸಂಹಿತೆ 4, 8, ಕಾಯಿದೆ 2003ರ ಪರಿಚ್ಛೇದ 56(1) ಉಲ್ಲಂಘನೆಯಾಗಿದೆ. ಆದ್ದರಿಂದ ಮೇ23 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಹಣ ಪಾವತಿಸಬೇಕು ಎಂದು ಎರಡನೇ ನೋಟಿಸ್‌‌‌ನಲ್ಲಿ ಕೋರಲಾಗಿತ್ತು.

ADVERTISEMENT

ಆದರೂ, ಹಣ ಪಾವತಿಸಲು ಪಂಚಾಯತಿ ವಿಫಲವಾದ ಹಿನ್ನೆಲೆಯಲ್ಲಿ ಸೆಸ್ಕ್ ವಿದ್ಯುತ್ ಸರಬರಾಜು  ಸ್ಥಗಿತಗೊಳಿಸಲಾಗಿದೆ. ಇದರಿಂದ ಪಂಚಾಯತಿ ಕಾರ್ಯ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಜೊತೆಗೆ ಕುಡಿಯುವ ನೀರು ಸರಬರಾಜು ಹಾಗೂ ಬೀದಿ ದೀಪ ನಿರ್ವಹಣೆಗೂ ಸಮಸ್ಯೆ ಉಂಟಾಗಿದೆ. ಇದರಿಂದ ಸಾರ್ವಜನಿಕರಿಗೂ ತುಂಬ ತೊಂದರೆ ಉಂಟಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾಕುಮಾರಿ ಮಾತನಾಡಿ, ‘ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಸೆಸ್ಕ್ ಹಣ ಪಾವತಿಸಲು ಸಾಧ್ಯವಾಗಿಲ್ಲ. ಜೊತೆಗೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೂ ಅನಾನುಕೂಲ ಉಂಟಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ವಿದ್ಯುತ್ ಸರಬರಾಜು ಸ್ಥಗಿತದಿಂದ ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.