ADVERTISEMENT

ವನ್ಯಜೀವಿಯೊಂದಿಗೆ ಸಹಬಾಳ್ವೆ ನಡೆಸಲು ಕರೆ: ಮಡಿಕೇರಿಯಲ್ಲಿ 70ನೇ ವನ್ಯಜೀವಿ ಸಪ್ತಾಹ

, 4.5 ಕಿ.ಮೀ ಕಾಲ್ನಡಿಗೆ ಜಾಥಾದಲ್ಲಿ ಮಕ್ಕಳು ಭಾಗಿ!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 7:51 IST
Last Updated 4 ಅಕ್ಟೋಬರ್ 2024, 7:51 IST
ಮಡಿಕೇರಿಯಲ್ಲಿ ಗುರುವಾರ ನಡೆದ ಕಾಲ್ನಡಿಗೆ ಜಾಥಾದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಡಿಕೇರಿಯಲ್ಲಿ ಗುರುವಾರ ನಡೆದ ಕಾಲ್ನಡಿಗೆ ಜಾಥಾದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ಮಡಿಕೇರಿ: ‘ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ, ಪರಿಸರ ಉಳಿಯಲು ಸಾಧ್ಯ. ಇದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹೊಸಮನಿ ಪುಂಡಲೀಕ ತಿಳಿಸಿದರು.

ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಸಂಸ್ಥೆ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಹಾಗೂ ವಿವಿಧ ಶಾಲಾ-ಕಾಲೇಜು ಸಹಯೋಗದೊಂದಿಗೆ ಗುರುವಾರ ನಗರದಲ್ಲಿ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ನಡೆದ ಕಾಲ್ನಡಿಗೆ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ನಿಸರ್ಗದ ನಿಯಮಗಳನ್ನು ಪರಿಪಾಲಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಪರಿಸರ, ಪ್ರಕೃತಿ, ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.

‘ಅರಣ್ಯಕ್ಕೆ ನಾವು ಯಾವುದೇ ಹಾನಿ ಉಂಟು ಮಾಡದೇ ಸಸ್ಯ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದ ಅವರು, ಪ್ರತಿಯೊಂದು ಪ್ರಾಣಿ-ಪಕ್ಷಿಗಳು ಪರೋಕ್ಷವಾಗಿ ಮಾನವನಿಗೆ ಉಪಕಾರವನ್ನೇ ಮಾಡುತ್ತಾ ಬಂದಿವೆ. ಯಾವುದೇ ಪ್ರಾಣಿ-ಪಕ್ಷಿಗಳು ನಶಿಸದಂತೆ ಸಂರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ವೆಂಕಟರಾಜ್ ಮಾತನಾಡಿ, ‘ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿರುವ ವನ್ಯಜೀವಿ ಸಪ್ತಾಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ’ ಎಂದರು.

ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಮಾತನಾಡಿ, ಪ್ರತಿಯೊಬ್ಬರೂ ಅರಣ್ಯ ಇಲಾಖೆಯ ಇಂತಹ ಜನ ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ‘ಇಂದು ನಾವು ಅರಣ್ಯ ಮತ್ತು ವನ್ಯಜೀವಿಗಳ ಜೊತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಮತ್ತು ಪರಿಸರ ಸಮತೋಲನದಿಂದ ಇರಲು ಸಾಧ್ಯ. ಉತ್ತಮ ಭವಿಷ್ಯಕ್ಕಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ನಾವು ಪಣತೊಡಬೇಕು’ ಎಂದರು.

ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಕೆ.ಎ.ನೆಹರು ವನ್ಯಜೀವಿ ಸಪ್ತಾಹ ಆಚರಣೆಯ ಉದ್ದೇಶ ತಿಳಿಸಿದರು.

ಡಿಡಿಪಿಐ ಸಿ.ರಂಗಧಾಮಪ್ಪ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನಾರ್ವಡೆ, ಡಿಸಿಎಫ್‌ಗಳಾದ ಎನ್.ಎಚ್.ಜಗನ್ನಾಥ್, ಸಂದೀಪ್ ಪಿ.ಅಭಯಂಕರ್, ಸೈಯದ್ ಅಹಮದ್ ಶಾ ಹುಸೇನ್, ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಭಾಗವಹಿಸಿದ್ದರು.

ಜಾಥಾವು ಮಡಿಕೇರಿ ನಗರದ ಅರಣ್ಯ ಭವನದಿಂದ ಆರಂಭಗೊಂಡು ಮಡಿಕೇರಿ ನಗರದ ಮುಖ್ಯ ರಸ್ತೆಯ ಮೂಲಕ ಟೌನ್‍ಹಾಲ್, ಚೌಕಿ ಮತ್ತು ಮಹದೇವಪೇಟೆ ಮಾರ್ಗವಾಗಿ 4.5 ಕಿ.ಮೀ.ನಷ್ಟು ದೂರ ಕ್ರಮಿಸಿ ಸ್ವಾಗತಬೆಟ್ಟದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‍ನಲ್ಲಿ ಸಮಾಪನಗೊಂಡಿತು. ಈ ವೇಳೆ ಎತ್ತರ, ತಗ್ಗಿನ ರಸ್ತೆಯಲ್ಲಿ ಹಲವು ವಿದ್ಯಾರ್ಥಿಗಳು ಕ್ರಮಿಸಲಾಗದೇ ಬಸವಳಿದರು. ಮಕ್ಕಳನ್ನು ಇಷ್ಟು ದೂರದ ಕಾಲ್ನಡಿಗೆ ಜಾಥಾಕ್ಕೆ ಕರೆದುಕೊಂಡು ಬರಬಾರದಿತ್ತು ಎಂದು ಹಲವು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ,(ಎನ್‌ಎಸ್ಎಸ್) ಘಟಕದ ವಿದ್ಯಾರ್ಥಿಗಳು, ನಗರದ ಸಂತ ಜೋಸೆಫರ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು, ಎಎಲ್‌ಜಿ ಕ್ರೆಸೆಂಟ್ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.