ADVERTISEMENT

ಕೊಡಗು ಜಿಲ್ಲೆಗೆ ಬಂದ ಕನ್ನಡದ ರಥಕ್ಕೆ ಸಂಭ್ರಮದ ಸ್ವಾಗತ

ಕೊಡಗು ಜಿಲ್ಲೆಗೆ ಬಂದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 2:37 IST
Last Updated 11 ನವೆಂಬರ್ 2024, 2:37 IST
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲೆಂದು ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥವು ಭಾನುವಾರ ಮಡಿಕೇರಿಯನ್ನು ಪ್ರವೇಶಿಸಿತು
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲೆಂದು ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥವು ಭಾನುವಾರ ಮಡಿಕೇರಿಯನ್ನು ಪ್ರವೇಶಿಸಿತು   

ಮಡಿಕೇರಿ: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲೆಂದು ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಭಾನುವಾರ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆ, ಕನ್ನಡದ ಮನಸ್ಸುಗಳು ಸಂಭ್ರಮದಿಂದ ಸ್ವಾಗತಿಸಿದವು.

ಗಡಿಭಾಗವಾದ ಸಂಪಾಜೆ ಗ್ರಾಮ ಪಂಚಾಯಿತಿಯಲ್ಲೇ ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಸ್ವಾಗತ ಕೋರಿದರು. ನಂತರ, ಮದೆನಾಡು, ಮಡಿಕೇರಿ, ಮೇಕೇರಿ, ಹಾಕತ್ತೂರು, ಮೂರ್ನಾಡು, ಕಾಕೊಟುಪರಂಬು, ಕದನೂರು, ವಿರಾಜಪೇಟೆಗಳಲ್ಲೂ ಜನರು ಸ್ವಾಗತ ಕೋರಿದರು.

ಮಡಿಕೇರಿ ನಗರದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರೇ ಜನರಲ್ ತಿಮ್ಮಯ್ಯ ವೃತ್ತಕ್ಕೆ ಬಂದು ರಥದಲ್ಲಿರುವ ಭುವನೇಶ್ವರಿ ತಾಯಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಭಾಷಾಭಿಮಾನ ಮೆರೆದರು. ಜೊತೆಗೆ, ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು.

ADVERTISEMENT

ಹಾಸನ ಜಿಲ್ಲೆಯ ಕಲಾತಂಡಗಳು ಕಹಳೆ ನಾದವನ್ನು ಮೊಳಗಿಸುವ ಮೂಲಕ ಹಾಗೂ ಚೆಟ್ಟಿಮೇಳ ವಾದ್ಯ ನುಡಿಸುವ ಮೂಲಕ ಕಲಾತ್ಮಕ ರಂಗನ್ನು ತುಂಬಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಪೂರ್ಣಕುಂಭ ಸ್ವಾಗತ ಕೋರಿದರು.

ಬಿರು ಬಿಸಿಲಿನ ಮಧ್ಯೆ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದವರೆಗೆ ಜಿಲ್ಲಾಧಿಕಾರಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಮಕ್ಕಳು, ಮಹಿಳೆಯರು ಹೆಜ್ಜೆ ಹಾಕಿದರು.

ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ‘ಅವ್ವ ಕಣೊ ಕನ್ನಡ, ನಮ್ಮ ಜೀವ ಕಣೊ ಕನ್ನಡ...’ ಹಾಡಿಗೆ ಹೆಜ್ಜೆ ಹಾಕಿದರು. ಮಾನವ ಗೋಪುರ ನಿರ್ಮಿಸಿ, ಕನ್ನಡದ ಬಾವುಟಗಳನ್ನು ಹಾರಿಸಿದ ಮಕ್ಕಳು, ಕನ್ನಡದ ಹಾಡಿಗೆ ಕುಣಿದು ಕುಪ್ಪಳಿಸಿದರು. ಬಿಸಿಲಿನ ನಡುವೆ ಬಸವಳಿಯದೇ ಕುಣಿದ ವಿದ್ಯಾರ್ಥಿಗಳ ಪ್ರತಿಭೆ ಕಂಡು ಸೇರಿದ್ದ ಸಾರ್ವಜನಿಕರು ಕರತಾಡನ ಮೊಳಗಿಸಿದರು.

ಇದಾದ ನಂತರ ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳು ಹೊಯ್ಸಳ ವಂಶ ಹುಟ್ಟಿದ ಕಥೆಯನ್ನು ನೃತ್ಯದ ಮೂಲಕ ಪ್ರದರ್ಶಿಸಿ ಜನಮನಗೆದ್ದರು. ಹುಲಿ ಮತ್ತು ಸಳನ ಕಾದಾಟ, ಜಯ ಪಡೆದ ಸಳನ ರಾಜ್ಯಭಾರದ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುವಲ್ಲಿ ವಿದ್ಯಾರ್ಥಿಗಳು ಸಫಲರಾದರು.

ಇದಕ್ಕೂ ಮುನ್ನ ಲಹರಿ ಶಿಕ್ಷಕಿಯರ ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು.

ವಿವಿಧ ಗ್ರಾಮಗಳಲ್ಲಿ ಆಯಾಯಾ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ರಥಕ್ಕೆ ಸ್ವಾಗತ ಕೋರಿದರೆ, ಮಡಿಕೇರಿಯಲ್ಲಿ ಮಾತ್ರ ನಗರಸಭೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಲಿಲ್ಲ. ಬೆರಳೆಣಿಕೆಯಷ್ಟು ಸದಸ್ಯರಷ್ಟೇ ಕನ್ನಡರಥದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾದರು. ನಗರಸಭೆ ವತಿಯಿಂದಲೂ ಕನ್ನಡಪರವಾದ ಬಾವುಟಗಳನ್ನಾಗಲಿ, ಬ್ಯಾನರ್‌ನ್ನಾಗಲಿ, ಕನಿಷ್ಠ ಪಕ್ಷ ಬಣ್ಣದ ಕಾಗದಗಳನ್ನಾಗಲಿ ಕಟ್ಟಿರಲಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹ್ಮದ್, ರೇವತಿ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮಾಜಿ ಅಧ್ಯಕ್ಷ ಅಂಬೇಕಲ್ ನವೀನ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಮ್ಯಾಥ್ಯೂ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ತಹಶೀಲ್ದಾರ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪೌರಾಯುಕ್ತ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಪಿ.ಪಿ.ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ವಾರ್ತಾಧಿಕಾರಿ ಚಿನ್ನಸ್ವಾಮಿ, ಮುಖಂಡರಾದ ಬಿ.ಆರ್.ಜೋಯಪ್ಪ, ಎಚ್.ಎಸ್.ಪ್ರೇಮ್ ಕುಮಾರ್, ಸಿದ್ದರಾಜು ಬೆಳ್ಳಯ್ಯ, ಪ್ರಕಾಶ್ ಆಚಾರ್ಯ, ಮಣಜೂರು ಮಂಜುನಾಥ್, ಸೀತಾಲಕ್ಷ್ಮಿ, ಸವಿತಾ ಕೀರ್ತನ್, ಮೋಹನ್ ಕುಮಾರ್, ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಭಾಗವಹಿಸಿದ್ದರು.

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲೆಂದು ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಮಡಿಕೇರಿಯಲ್ಲಿ ಭಾನುವಾರ ಸಂಚರಿಸಿತು
ಮಡಿಕೇರಿಗೆ ಬಂದ ಕನ್ನಡ ಜ್ಯೋತಿ ಹೊತ್ತ ರಥಕ್ಕೆ ವಿದ್ಯಾರ್ಥಿ ವೃಂದ ಬೃಹತ್ ಕನ್ನಡದ ಧ್ವಜ ಹಿಡಿದು ಸ್ವಾಗತ ಕೋರಿತು

ಗಾಲಿ ಕುರ್ಚಿಯಲ್ಲೇ ಕನ್ನಡ ರಥ ಸ್ವಾಗತಿಸಿದ ಕೇಶವ ಕಾಮತ್

ತಮ್ಮ ಅನಾರೋಗ್ಯದ ಮಧ್ಯೆ ಗಾಲಿ ಕುರ್ಚಿಯಲ್ಲೇ ಕುಳಿತು ಕನ್ನಡದ ರಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್  ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸಂಪಾಜೆ ಮದೆನಾಡು ಮಡಿಕೇರಿ ಹೀಗೆ ಕನ್ನಡ ರಥ ಪ್ರವೇಶಿಸಿದ ಪ್ರಮುಖ ಸ್ಥಳಗಳಲ್ಲಿ ಅವರು ಗಾಲಿ ಕುರ್ಚಿಯೆಲ್ಲೇ ಸ್ವಾಗತಿಸಿದರು. ಸೇರಿದ್ದ ಗಣ್ಯರನ್ನು ಖುದ್ದು ಸ್ವಾಗತಿಸಿದರು.

ರಥದಲ್ಲಿ ಏನಿತ್ತು?

ಕನ್ನಡ ಜ್ಯೋತಿ ಹೊತ್ತ ರಥದ ಮುಂಭಾಗದಲ್ಲಿ ಭುವನೇಶ್ವರಿ ಹಾಗೂ ಕಾವೇರಿ ಮಾತೆ ಪ್ರತಿಮೆಗಳಿದ್ದು ಗಮನ ಸೆಳೆಯಿತು. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗಳೂ ಇದ್ದವು. ಕೃಷ್ಣರಾಜ ಸಾಗರ ಅಣೆಕಟ್ಟೆಯ ಮಾದರಿಯಲ್ಲಿ ಕನ್ನಡದ ಪ್ರಖ್ಯಾತ ಸಾಹಿತಿಗಳ ಭಾವಚಿತ್ರಗಳಿದ್ದವು. ರಥದ ಹಿಂಭಾಗದಲ್ಲಿ ಎತ್ತುಗಳ ಜೊತೆ ರೈತ ಉಳುಮೆ ಮಾಡುವ ದೃಶ್ಯ ಮನಮೋಹಕವಾಗಿತ್ತು. ಜೊತೆಗೆ ಕರ್ನಾಟಕ ರಾಜ್ಯದ ಲಾಂಛನ ಮಧ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಲೋಗೋಗಳೂ ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.