ಮಡಿಕೇರಿ: ಶುರುವಾಗಿದ್ದು 1916ರಲ್ಲಿ. ಮಾನ್ಯತೆ ಸಿಕ್ಕಿದ್ದು 1927ರಲ್ಲಿ. ಶತಮಾನೋತ್ಸವ ಆಚರಣೆಗೆ ಅವಕಾಶ ಒದಗಿ ಬಂದಿದ್ದು, 108 ವರ್ಷಗಳ ಬಳಿಕ. 2025ರ ಫೆ. 2ರಂದು ಶತಮಾನೋತ್ಸವ ಆಚರಣೆಗೆ ದಿನಾಂಕ ನಿಗದಿಯಾಗಿದೆ. ಇದು ಕೊಡಗು ಜಿಲ್ಲೆಯ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾದ ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವೃತ್ತಾಂತ.
ಸ್ವಾತಂತ್ರ್ಯಪೂರ್ವದಲ್ಲೇ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡ ಈ ಶಾಲೆ, ಅಂದು ದಕ್ಷಿಣ ಕೊಡಗಿನ ಕೆಲವೇ ಕೆಲವು ಶಾಲೆಗಳ ಪೈಕಿ ಒಂದಾಗಿತ್ತು. ಬೆರಳೆಣಿಕೆಯಷ್ಟು ಮಾತ್ರವೇ ಇದ್ದ ಶಾಲೆಗಳಲ್ಲಿ ಈ ಶಾಲೆ ಆ ಭಾಗದ ಸಾವಿರಾರು ಮಂದಿಗೆ ಶಿಕ್ಷಣ ನೀಡಿದೆ. ಅವರು ಉನ್ನತ ಹುದ್ದೆಗಳಿಗೆ ಏರಲು ಏಣಿಯಾಗಿದೆ. ಇಂತಹ ಶಾಲೆ ಕಾಲಾನುಕಾಲಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ಸದ್ಯ, ಇಂಗ್ಲಿಷ್ ಮಾಧ್ಯಮದ ಹೊಡೆತ, ಖಾಸಗಿ ಶಾಲೆಗಳ ಭರಾಟೆಯಲ್ಲಿ ಈ ಶಾಲೆ ಅಸ್ತಿತ್ವ ಉಳಿಸಿಕೊಂಡಿದ್ದು, ವಾಣಿಜ್ಯ ಪಟ್ಟಣದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂಬ ಕೀರ್ತಿ ಪಡೆದಿದೆ.
ಈಗ ಈ ಶಾಲೆಯಲ್ಲಿ 354 ವಿದ್ಯಾರ್ಥಿಗಳಿದ್ದಾರೆ, 14 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್‌ಕೆಜಿ, ಯುಕೆಜಿಯನ್ನೂ ಆರಂಭಿಸಿರುವ ಶಾಲೆಯು ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಿದೆ. 7ನೇ ತರಗತಿಯವರೆಗೂ ಇಲ್ಲಿ ದಾಖಲಾತಿಗೆ ಅವಕಾಶ ಇದೆ.
ಅದಕ್ಕಾಗಿಯೇ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಅನ್ನು ಆರಂಭಿಸಲಾಗಿದೆ. ಪ್ರತಿ ತರಗತಿಗಳಿಗೂ ಗ್ರೀಡ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಕಂಪ್ಯೂಟರ್ ವಿಭಾಗವನ್ನೇ ತೆರೆಯಲಾಗಿದ್ದು, ಇದರಲ್ಲಿ 10 ಕಂಪ್ಯೂಟರ್‌ಗಳಿವೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಈ ಸರ್ಕಾರಿ ಶಾಲೆ ಸೆಡ್ಡು ಹೊಡೆದು ನಿಂತಿದೆ.
ವಿಜ್ಞಾನ ಪ್ರಯೋಗಾಲಯವಿದ್ದು, ಇದರಲ್ಲಿ ಸೂಕ್ಷ್ಮದರ್ಶಕ ಸೇರಿದಂತೆ ಹಲವು ವಿಜ್ಞಾನ ಉಪಕರಣಗಳಿವೆ. ಸುಸಜ್ಜಿತ ಗ್ರಂಥಾಲಯವಿದ್ದು, ಇದರಲ್ಲಿ 4,700 ಪುಸ್ತಕಗಳಿವೆ. ಇದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ.
ಪ್ರತಿ ನಿತ್ಯ ಬೆಳಿಗ್ಗೆಯ ಪ್ರಾರ್ಥನಾ ಸಮಯದಲ್ಲಿ ಒಂದೊಂದು ಪುಸ್ತಕವನ್ನು ಪರಿಚಯ ಮಾಡಿಸಲಾಗುತ್ತಿದೆ. ಸಂವಿಧಾನ ಪೀಠಿಕೆಯನ್ನು ವಾಚಿಸಲಾಗುತ್ತದೆ. ಪ್ರಾರ್ಥನಾ ಸಮಯದಲ್ಲೇ ಕಲಿಕೆ ಇಲ್ಲಿ ಆರಂಭವಾಗುತ್ತಿದೆ.
ಇಲ್ಲಿಗೆ ಹೆಚ್ಚು ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಕೂಲಿಗಾಗಿ ವಲಸೆ ಬಂದ ಮಕ್ಕಳೇ ಸೇರ್ಪಡೆಯಾಗುತ್ತಾರೆ. ಅವರಿಗೆ ಅತ್ಯುತ್ತಮವಾದ ಬೇರೆಲ್ಲೂ ಸಿಗದಂತಹ ಉತ್ತಮ ಶಿಕ್ಷಣ ಇಲ್ಲಿ ದೊರಕುತ್ತಿದೆ.
ಈ ಶಾಲೆಗೆ 2016ಕ್ಕೆ ನೂರು ವರ್ಷ ತುಂಬಿದೆ. ಆದರೂ, ಇದುವರೆಗೂ ಶತಮಾನೋತ್ಸವ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನೂರು ವರ್ಷ ಕಳೆದ 8 ವರ್ಷಗಳ ಬಳಿಕ ಶತಮಾನೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ.
ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಎ.ಎಸ್. ಪೊನ್ನಣ್ಣ ಇದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್, ಎಸ್‌ಡಿಎಂಸಿ ಅಧ್ಯಕ್ಷರಾದ ಕೆ.ಆರ್.ಶಾಂತಿ ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಹಾಗೂ ಇತರ ಎಲ್ಲ ಸದಸ್ಯರು, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಪೋಷಕರು, ರಾಜಕೀಯ ಮುಖಂಡರು, ಎಲ್ಲ ಶಿಕ್ಷಕರು ಶತಮಾನೋತ್ಸವ ಆಚರಣೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.