ADVERTISEMENT

ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಚಾಲನೆ

ಪ್ರಶಸ್ತಿಗಾಗಿ ಸೆಣಸಲಿವೆ 236 ತಂಡಗಳು ಹಾಗೂ 9 ಮಹಿಳಾ ತಂಡಗಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 17:10 IST
Last Updated 18 ಏಪ್ರಿಲ್ 2024, 17:10 IST
ನಾಪೋಕ್ಲುವಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ ಉದ್ಘಾಟಿಸಿದರು.
ನಾಪೋಕ್ಲುವಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ ಉದ್ಘಾಟಿಸಿದರು.   

ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಗುರುವಾರ ವರ್ಣರಂಜಿತ ಚಾಲನೆ ದೊರೆಯಿತು. ಒಟ್ಟು 236 ತಂಡಗಳು ಹಾಗೂ 9 ಮಹಿಳಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ, ‘ಕೊಡಗು ಜಿಲ್ಲೆಯಲ್ಲಿ ಕೊಡವ ಹಾಕಿ ಉತ್ಸವದಂತೆ ಹಗ್ಗಜಗ್ಗಾಟ ಕ್ರೀಡೆಯೂ ಪ್ರಸಿದ್ದಿ ಹೊಂದಬೇಕು’ ಎಂದು ಹೇಳಿದರು.

ಮೊಟ್ಟ ಮೊದಲ ಬಾರಿಗೆ ಪೊನ್ನೋಲತಂಡ ಕುಟುಂಬಸ್ಥರು ಕೊಡವ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಆರಂಭಿಸಿದ್ದರು. ನಂತರದ ದಿನಗಳಲ್ಲಿ ಇದು ‘ಹಾಕಿ ನಮ್ಮೆ’ಯಂತೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಈ ಬಾರಿ 9 ಮಹಿಳಾ ತಂಡಗಳು ಕೂಡ ಪಾಲ್ಗೊಂಡಿರುವುದು ವಿಶೇಷ ಎಂದರು.

ADVERTISEMENT

ಕೊಡವ ಜನಾಂಗದಲ್ಲಿ ಹಬ್ಬದ ರೂಪದಲ್ಲಿ ಕ್ರೀಡೆಯನ್ನು ಆಚರಿಸಲಾಗುತ್ತಿದೆ. ಮುಂದಿನ ವರ್ಷ 5 ತಂಡಗಳು ಸ್ಪರ್ಧೆ ಆಯೋಜಿಸಲು ಮುಂದೆ ಬಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಕೊಡಗು ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, ‘ಕ್ರೀಡೆಯಿಂದ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮೂಡಲು ಸಹಕಾರಿ. ಆರೋಗ್ಯ ಹಾಗೂ ಶಿಸ್ತಿಗೆ ಕ್ರೀಡೆ ಪೂರಕವಾಗಿದೆ’ ಎಂದು ತಿಳಿಸಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ‘ಕಕ್ಕಬ್ಬೆಯಲ್ಲಿ ಮೊದಲ ಬಾರಿಗೆ ಆರಂಭವಾದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯು ಕೊಡವ ಕುಟುಂಬಗಳ ನಡುವಿನ ಪರಸ್ಪರ ಸ್ನೇಹ, ಸಾಮರಸ್ಯಕ್ಕೆ ನಾಂದಿಯಾಗಲಿದೆ’ ಎಂದರು.

ಮಡಿಕೇರಿ ಕೊಡವ ಸಮಾಜ ಮತ್ತು ನಾಪೋಕ್ಲು ಕೊಡವ ಸಮಾಜ ಮಹಿಳಾ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ನಾಪೋಕ್ಲು ತಂಡ ಗೆಲುವು ಸಾಧಿಸಿತು. ನಾಪೋಕ್ಲು ಮತ್ತು ಅಮ್ಮತಿ ಕೊಡವ ಸಮಾಜದ ಪುರುಷರ ಪಂದ್ಯದಲ್ಲಿ ನಾಪೋಕ್ಲು ತಂಡ ಗೆಲುವು ಸಾಧಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಕುಟುಂಬದ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಬಿ.ಗಣೇಶ್ ಗಣಪತಿ ವಹಿಸಿದ್ದರು.

ಇದಕ್ಕೂ ಮುನ್ನ ನಾಪೋಕ್ಲು ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ ಪಟ್ಟಣದಿಂದ ಆಟದ ಮೈದಾನದವರೆಗೆ ಅಬಾಲವೃದ್ಧರಾದಿಯಾಗಿ ಕೊಡವ ಸಾಂಪ್ರದಾಯಿಕ ದಿರಿಸಿನಲ್ಲಿ ದುಡಿಕೊಟ್ ಪಾಟ್‌ನೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಮೈದಾನದಲ್ಲಿ ಕ್ರೀಡಾ ಧ್ವಜಾರೋಹಣವನ್ನು ಅತಿಥಿಗಳು ನೆರವೇರಿಸಿದರು. ವೇದಿಕೆಯ ಉದ್ಘಾಟನೆಯನ್ನು ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ ನೆರವೇರಿಸಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಮೇದುರ ವಿಶಾಲ ಕುಶಾಲಪ್ಪ ಬೊಟ್ಟೋಳಂಡ ಕಪ್ ಟ್ರೋಫಿಯನ್ನು ಅನಾವರಣಗೊಳಿಸಿದರು.

ಪೇರೂರು ಗ್ರಾಮದ ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ, ಕಾಫಿ ಬೆಳೆಗಾರ ಬೊಟ್ಟೋಳಂಡ ವಾಸು ಮುತ್ತಪ್ಪ, ಹಿರಿಯರಾದ ಬಿ.ಡಿ.ಬಿದ್ದಯ್ಯ, ಕ್ರೀಡಾಕೂಟದ ನಿರ್ದೇಶಕ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಪೊನ್ನೋಲತಂಡ ಕುಟುಂಬದ ಅಧ್ಯಕ್ಷ ಪೊನ್ನೋಲತಂಡ ಬಿದ್ದಯ್ಯ, ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಮೇದುರ ವಿಶಾಲ ಕುಶಾಲಪ್ಪ, ಬೊಟ್ಟೋಳಂಡ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ನಾಪೋಕ್ಲುವಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಅಂಗವಾಗಿ ಗುರುವಾರ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಂಗವಾಗಿ ನಾಪೋಕ್ಲುವಿನಲ್ಲಿ ಗುರುವಾರ ಆಕರ್ಷಕ ಮೆರವಣಿಗೆ ನಡೆಯಿತು.
ಬೊಟ್ಟೋಳಂಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿ ಆಯೋಜಿಸಿರುವ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಬೊಳಕಾಟ್ ಪ್ರದರ್ಶನ ಗಮನ ಸೆಳೆಯಿತು.
ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿದ್ದ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ಪಂದ್ಯದ ಒಂದು ನೋಟ.

Highlights - ಏಪ್ರಿಲ್ 18 ರಿಂದ 21ರವರೆಗೆ ನಡೆಯಲಿದೆ ಹಗ್ಗಜಗ್ಗಾಟ ಮಹಿಳಾ ಮತ್ತು ಪುರುಷ ತಂಡಗಳು ಭಾಗಿ 2022ರಲ್ಲಿ ಕಕ್ಕಬೆಯಲ್ಲಿ ಪೊನ್ನೋಲತಂಡ ಕುಟುಂಬಸ್ಥರಿಂದ ಮೊದಲ ಬಾರಿಗೆ ಆಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.