ADVERTISEMENT

ವಿರಾಜಪೇಟೆ: ಕೊನೆಯ ಬೇಡು ಹಬ್ಬಕ್ಕೆ ಸಂಭ್ರಮದ ವಿದಾಯ

ಗಮನಸೆಳೆದ ವಿದೇಶಿ ಮಹಿಳೆಯ ವೇಷ, ಬಂಡುವೇಷ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 16:26 IST
Last Updated 2 ಜೂನ್ 2024, 16:26 IST
 ಹಬ್ಬದ ಸಂದರ್ಭ ಗ್ರಾಮಸ್ಥರು ವಿವಿಧ ವೇಷಧರಿಸಿ ಸಂಭ್ರಮಿಸಿದರು
 ಹಬ್ಬದ ಸಂದರ್ಭ ಗ್ರಾಮಸ್ಥರು ವಿವಿಧ ವೇಷಧರಿಸಿ ಸಂಭ್ರಮಿಸಿದರು   

ವಿರಾಜಪೇಟೆ: ಜಿಲ್ಲೆಯ ಬೇಡುಹಬ್ಬಗಳ ಪೈಕಿ ಕೊನೆಯ ಹಬ್ಬವಾಗಿರುವ ಬೇರಳಿನಾಡಿನ ಪಾರಣ ಬೇಡು ಹಬ್ಬಕ್ಕೆ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಶನಿವಾರ ವಿದಾಯ ಹೇಳಲಾಯಿತು.

ಶುಕ್ರವಾರ ವಿವಿಧ ದೇವಾಲಯಗಳಲ್ಲಿ ವೇಷಧರಿಸಿದ ಗ್ರಾಮಸ್ಥರು ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆಯವರೆಗೆ ಗ್ರಾಮದ ಮನೆಮನೆಗೆ ಭೇಟಿ ನೀಡಿ, ರಂಜಿಸಿ ಹರಕೆಯ ಕಾಣಿಕೆ ಪಡೆದುಕೊಂಡರು. ಶನಿವಾರ ಬೇರಳಿನಾಡಿನ ವಿವಿಧ ದೇವಾಲಯಗಳಲ್ಲಿ ರಚಿಸಲಾಗಿದ್ದ 3 ಕುದುರೆ ಹಾಗೂ 2 ಆನೆಯ ಪ್ರತಿರೂಪಗಳು ವಿವಿಧ ಕುಟುಂಬಗಳ ಐನ್ಮನೆಯಲ್ಲಿ ಶೃಂಗಾರಗೊಂಡು ಪಾರಣಮಾನಿಯ ಕಡೆ ಹೊರಟಿತು. ಈ ಕುದುರೆ ಹಾಗೂ ಆನೆಯ ಪ್ರತಿರೂಪದೊಂದಿಗೆ ಗ್ರಾಮದ ವೇಷಧಾರಿಗಳು ಸೇರಿಕೊಂಡು ಕಂಡಂಗಾಲದ ಪಾರಣಮಾನಿಯನ್ನು ಮುಸ್ಸಂಜೆಯ ಹೊತ್ತು ಸೇರಿಕೊಂಡರು. ದೈವದ ದರ್ಶನ ಪಡೆದ ಬಳಿಕ ಕುದುರೆ ಹಾಗೂ ಆನೆಯ ಪ್ರತಿರೂಪದೊಂದಿಗೆ ವೇಷಧಾರಿಗಳು ಹಾಗೂ ಗ್ರಾಮಸ್ಥರು ಪಾರಣ ಮಾನಿಯಲ್ಲಿ ಪ್ರದಕ್ಷಿಣಿಗೆ ಬಂದರು.

ವಿಶೇಷವೆಂದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಾರಣಮಾನಿ ತುಂಬೆಲ್ಲ ನೀರು ತುಂಬಿಕೊಂಡಿತ್ತು. ಶನಿವಾರ ಸಂಜೆಯ ಹೊತ್ತಿಗೆ ಪಾರಣಮಾನಿ ಸೇರಿದ ವೇಷಧಾರಿಗಳು ಸೇರಿದಂತೆ ಗ್ರಾಮಸ್ಥರು ಕೆಸರಿನಲ್ಲಿ ಮಿಂದೆದ್ದರು.

ADVERTISEMENT

ಪಾರಣ ಹಬ್ಬದ ವಿಶೇಷತೆಯೆಂದರೆ ಜಿಲ್ಲೆಯಲ್ಲಿ ನಡೆಯುವ ಇತರ ಬೇಡುಹಬ್ಬಗಳಂತೆ ಇಲ್ಲಿ ಬಿದಿರಿನ ಕುದುರೆ ಹಾಗೂ ಆನೆಯನ್ನು ಉತ್ಸವದ ನಂತರ ಹಿಂದಕ್ಕೆ ತರುವುದಿಲ್ಲ. ಬದಲಾಗಿ ನಾಡಿನ 5 ನಿಗದಿತ ಸ್ಥಳಗಳಿಂದ ಶೃಂಗಾರಗೊಂಡು ಪಾರಣ ಮಾನಿಗೆ ತೆರಳಿದ ಕುದುರೆ ಹಾಗೂ ಆನೆಯ ಪ್ರತಿರೂಪುಗಳನ್ನು ಉತ್ಸವದ ಕೊನೆಯಲ್ಲಿ ಕಡಿದು ದೇವರಿಗೆ ಆಹುತಿ ನೀಡಲಾಯಿತು.

ಈ ಬಾರಿಯ ಹಬ್ಬದಲ್ಲಿ ವಿದೇಶಿ ಮಹಿಳೆಯ ವೇಷ, ವಡ್ಡರ ವೇಷ ಹಾಗೂ ಬಂಡುವೇಷ ವಿಶೇಷವಾಗಿ ಗಮನಸೆಳೆಯಿತು. ಪರವೂರುಗಳಲ್ಲಿ ನೆಲೆಸಿರುವ ನಾಡಿನ ಜನರು ಹಬ್ಬಕ್ಕಾಗಿ ಕೆಲವು ದಿನಗಳ ಹಿಂದೆಯೇ ಗ್ರಾಮಕ್ಕೆ ಆಗಮಿಸಿ ಉತ್ಸವದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡರು. ಮೇ. 26ರಂದು ಪಾರಣ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು.

ಕುದುರೆ ಹಾಗೂ ಆನೆಯ ಪ್ರತಿರೂಪನ್ನು ಹೊರುವ ವ್ಯಕ್ತಿಗಳು ಹಬ್ಬದ ದಿನ ಸಂಪೂರ್ಣ ಸಸ್ಯಹಾರಿಗಳಾಗಿರುತ್ತಾರೆ. ಕಾವೇರಿ ಸಂಕ್ರಮಣದ ಮಾರನೆಯ ದಿನ ಕುಂದತ ಬೊಟ್ಟ್ ದೇವಾಲಯದಲ್ಲಿ ಬೇಡು ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಈ ಮೂಲಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುವ ಬೇಡು ಹಬ್ಬಗಳು ಅಂದಿನ ಬಳಿಕ ಆರಂಭಗೊಳ್ಳುತ್ತದೆ. ಜೂ. 1ರಂದು ಪಾರಣಮಾನಿಯಲ್ಲಿ ನಡೆಯುವ ಹಬ್ಬದ ಮೂಲಕ ಜಿಲ್ಲೆಯಲ್ಲಿ ಬೇಡುಹಬ್ಬಗಳಿಗೆ ವಿದಾಯ ಹೇಳಲಾಗುತ್ತದೆ.

ವಿರಾಜಪೇಟೆ ಸಮೀಪದ ಬೇರಳಿನಾಡಿನ ಪಾರಣಮಾನಿ ಬೇಡುಹಬ್ಬಕ್ಕೆ ಶನಿವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ತೆರೆ ಎಳೆಯಲಾಯಿತು
ವಿರಾಜಪೇಟೆ ಸಮೀಪದ ಬೇರಳಿನಾಡಿನ ಪಾರಣಮಾನಿ ಬೇಡುಹಬ್ಬಕ್ಕೆ ಶನಿವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ತೆರೆ ಎಳೆಯಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.