ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಅರಿವು ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಈಚೆಗೆ ನಡೆಯಿತು.
ದಿನದ ಮಹತ್ವ ಕುರಿತು ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಯೂ ಗ್ರಂಥಾಲಯಗಳನ್ನು ಸ್ಥಾಪಿಸಿರುವ ಜೊತೆಯಲ್ಲಿ ಈಗ ವಿದ್ಯಾರ್ಥಿಗಳಿಗೆ ಪೂರಕವಾಗುವ ಮತ್ತು ಯುವಕ, ಯುವತಿಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡಿಜಿಟಲ್ ಮಾಹಿತಿ ಕೇಂದ್ರವನ್ನು ಸ್ಥಾಪಿಸಿದೆ ಎಂದರು.
ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರತಿವರ್ಷ ನ.14 ರಿಂದ 20ರವರೆಗೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಗ್ರಂಥಾಲಯ ಸಪ್ತಾಹವನ್ನು ಆಚರಿಸುತ್ತಿದ್ದು, ಈ ಮೂಲಕ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಡಿ.ಬಿ.ಬೋಜಪ್ಪ ಮಾತನಾಡಿ, ‘ಪುಸ್ತಕಗಳನ್ನು ಓದುವುದದರಿಂದ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಈ ದಿಸೆಯಲ್ಲಿ ದುಂಡಳ್ಳಿ ಡಿಜಿಟಲ್ ಗ್ರಂಥಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರ ಪ್ರಗತಿಗೆ ಶ್ರಮಿಸುತ್ತಿರುವ ಗ್ರಂಥಾಲಯದ ಮೇಲ್ವಿಚಾರಕಿಯವರ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಡಿಒ ಆಯಿಷಾ ಬಾನು, ತ್ಯಾಗರಾಜ ಕಾಲೊನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಮತ್ತು ದಾನಿ ಕೆ.ಟಿ.ಹರೀಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.