ADVERTISEMENT

ಗೋಣಿಕೊಪ್ಪಲು: ಮೈದಾನದಲ್ಲಿ ಗೋಲುಗಳ ಸುರಿಮಳೆ

ಪ್ರಾಥಮಿಕ , ಪ್ರೌಢಶಾಲಾ ಹಂತದ ರಾಜ್ಯಮಟ್ಟದ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:01 IST
Last Updated 28 ಅಕ್ಟೋಬರ್ 2024, 4:01 IST
ಟೂರ್ನಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.
ಟೂರ್ನಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.   

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಭಾನುವಾರ ಮಳೆ ಸುರಿಯಲಿಲ್ಲ. ಆದರೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕಿಯರ ಹಾಕಿ ಆಟದಲ್ಲಿ ಗೋಲುಗಳ ಸುರಿಮಳೆಯಾಯಿತು.

14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ವಿಭಾಗ ತಂಡವು ಕಲಬುರಗಿ ವಿಭಾಗ ತಂಡದ ವಿರುದ್ಧ 17–0 ಗೋಲಿನಿಂದ ಹಾಗೂ 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ತಂಡವು ಬೆಂಗಳೂರು ವಿಭಾಗ ತಂಡದ ಎದುರು 13–0ಯಿಂದ ಭಾರಿ ಗೆಲುವು ಪಡೆದವು. ಅಕ್ಷರಶಃ ಬೆಳಗಾವಿ ಹಾಗೂ ಮೈಸೂರು ವಿಭಾಗದ ಎರಡೂ ತಂಡಗಳೂ ಗೋಲುಗಳ ಸುರಿಮಳೆಗರೆದವು.

ದಿನದ ಆರನೇ ಪಂದ್ಯದಲ್ಲಿ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಬೆಳಗಾವಿ ವಿಭಾಗದ ಬಾಲಕಿಯರು ಒಂದಾದ ಮೇಲೆ ಒಂದರಂತೆ ಕಲಬುರಗಿ ತಂಡದ ಎದುರು ಗೋಲು ಹೊಡೆಯುತ್ತಲೇ ಸಾಗಿದರು. ಪಂದ್ಯದ ಉದ್ದಕ್ಕೂ ಉತ್ತಮ ಆಟವಾಡಿದ ಬೆಳಗಾವಿ ತಂಡದ ಶಿಲ್ಪ ತೀವ್ರ ದಾಳಿ ನಡೆಸಿ 9 ಗೋಲು ಗಳಿಸುವ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದರು. ಮತ್ತೊಬ್ಬ ಆಟಗಾರ್ತಿ ಪ್ರೀತಿ 5 ಗೋಲುಗಳಿಸಿ ಕಲಬುರಗಿ ತಂಡವನ್ನು ಚೇತರಿಸಿಕೊಳ್ಳದಂತೆ ಕಾಡಿದರು. ಮತ್ತಿಬ್ಬರು ಆಟಗಾರ್ತಿಯರಾದ ಸೌಜನ್ಯ ಮತ್ತು ಸೌಮ್ಯ ತಲಾ ಒಂದು ಗೋಲು ದಾಖಲಿಸಿದರು.

ADVERTISEMENT

17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ತಂಡವು ಬೆಂಗಳೂರು ವಿಭಾಗ ತಂಡದ ಎದುರು ಇದೇ ರೀತಿಯ ದಾಳಿ ನಡೆಸಿತು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಮೈಸೂರು ತಂಡದ ಶಾಲಿನಿ ಮತ್ತು ಅಕ್ಷನಾ ತಲಾ 3 ಗೋಲು ಗಳಿಸಿದರೆ, ಲಕ್ಷ್ಮಿ ಹಾಗೂ ಯಶ್ವಿ ತಲಾ 2 ಗೋಲು ಹೊಡೆದರು. ಶೈಲಾ, ಜೀವಿತಾ, ಪೂರ್ವಿ ತಲಾ ಒಂದು ಗೋಲು ಪಡೆದು ಗೋಲುಗಳ ಅಂತರ ಹೆಚ್ಚಿಸಿದರು.

ಇದಕ್ಕೂ ಮೊದಲು ನಡೆದ 17ರ ವಯೋಮಿತಿಯ ಬಾಲಕರ ಪಂದ್ಯದಲ್ಲಿ ಕಲಬುರಗಿ ತಂಡ ಬೆಂಗಳೂರು ತಂಡದ ಎದುರು 5-4 ಗೋಲುಗಳಿಂದ ಜಯಗಳಿಸಿತು. ಮತ್ತೊಂದು ಪಂದ್ಯದಲ್ಲಿ ಕೂಡಿಗೆ ಕ್ರೀಡಾಶಾಲೆಯ ಬಾಲಕಿಯರು ಕಲಬುರಗಿ ತಂಡದ ವಿರುದ್ಧ 6-1 ಗೋಲುಗಳಿಂದ ಸುಲಭ ಜಯಗಳಿಸಿದರು.

17ರ ವಯೋಮಿತಿಯ ವಿಭಾಗದಲ್ಲಿ ಮೈಸೂರು ವಿಭಾಗದ ಬಾಲಕರು ಬೆಳಗಾವಿ ತಂಡದ ವಿರುದ್ಧ 9-0 ಗೋಲುಗಳಿಂದ ಜಯಗಳಿಸಿದರೆ, ಪ್ರಾಥಮಿಕ ಶಾಲಾ ಹಂತದ ಮೈಸೂರು ವಿಭಾಗದ (ಕೊಡಗು ತಂಡ)ಬಾಲಕರು ಬೆಂಗಳೂರು ತಂಡದ ಮೇಲೆ 11-0 ಗೋಲುಗಳ ಭಾರಿ ಅಂತರದಿಂದ ಜಯಸಾಧಿಸಿದರು.

ಉಳಿದ ಪಂದ್ಯಗಳಲ್ಲಿ ಪ್ರಾಥಮಿಕ ಶಾಲಾ ಹಂತದ ಮೈಸೂರು ವಿಭಾಗದ ಬಾಲಕಿಯರು ಬೆಂಗಳೂರು ತಂಡದ ವಿರುದ್ಧ 8-0 ಗೋಲುಗಳಿಂದ, ಕಲಬುರಗಿ ವಿಭಾಗದ ಬಾಲಕರ ತಂಡ ಬೆಳಗಾವಿ ವಿಭಾಗದ ವಿರುದ್ಧ 6-1 ಗೋಲುಗಳಿಂದ ಜಯಗಳಿಸಿದವು.

ಟೂರ್ನಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಶಾಸಕ ಎನ್.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಿದ್ದರು. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಕರ್ನಾಟಕ ಪಬ್ಲಿಕ್ ಶಾಲೆ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಎಸ್.ಕುಶಾಲಪ್ಪ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ರಂಗಧಾಮಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ವಿರಾಜಪೇಟೆ ಪ್ರಗತಿ ಶಾಲೆ ವ್ಯವಸ್ಥಾಪಕ ನಿರ್ದೇಶಕ ಮಾದಂಡ ತಿಮ್ಮಯ್ಯ, ಟೂರ್ನಿ ಸಂಚಾಲಕ ಡ್ಯಾನಿ ಈರಪ್ಪ, ಶಿಕ್ಷಕರಾದ ಟಿ.ಎಸ್.ಮಹೇಶ್, ತಿರುನೆಲ್ಲಿಮಾಡ ಜೀವನ್ ಭಾಗವಹಿಸಿದ್ದರು.

ಉದ್ಘಾಟನೆ ಸಂದರ್ಭದಲ್ಲಿ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾರ್ಥಿಗಳಿಂದ ನಡೆದ ಕೊಡವ ನೃತ್ಯ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.