ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಅಳಿಯುತ್ತಿರುವ ಏಲಕ್ಕಿ ಬೆಳೆಯನ್ನು ತೆಗೆದು ಹಾಕದೇ ಉಳಿಸಿಕೊಂಡು ಬರುತ್ತಿರುವ ಅಪರೂಪದ ಬೆಳೆಗಾರ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದ ಎನ್.ಟಿ.ಸುಬ್ಬಯ್ಯ.
ಅವರು ಕಳೆದ 19 ವರ್ಷಗಳಿಂದ ಎಷ್ಟೇ ನಷ್ಟವಾದರೂ ಏಲಕ್ಕಿಯನ್ನು ಜತನದಿಂದ ಕಾಯ್ದುಕೊಂಡು ಬರುವ ಮೂಲಕ ಏಲಕ್ಕಿ ಪ್ರೇಮವನ್ನು ಮೆರೆದಿದ್ದಾರೆ.
ಏಲಕ್ಕಿ ಜೊತೆಗೆ ಇವರು ಅರೇಬಿಕಾ ಕಾಫಿ, ರೊಬೊಸ್ಟಾ ಕಾಫಿ, ಶುಂಠಿ ಹಾಗೂ ಕಾಳುಮೆಣಸನ್ನೂ ಬೆಳೆಯುವ ಮೂಲಕ ಸಮಗ್ರ ತೋಟಗಾರಿಕಾ ಬೆಳೆಗಾರರು ಎಂಬ ಹೆಸರು ಪಡೆದಿದ್ದಾರೆ. ಇದರಿಂದಾಗಿ ಏಲಕ್ಕಿ ಧಾರಣೆ ಕುಸಿದರೂ ಇವರು ಗಟ್ಟಿಯಾಗಿ ನಿಂತರು. ಇಂದು ಜಿಲ್ಲೆಯ ಪ್ರಮುಖ ಏಲಕ್ಕಿ ಬೆಳೆಗಾರರು ಎಂಬ ಹೆಸರನ್ನು ಪಡೆದಿದ್ದಾರೆ.
ಈ ಕುರಿತು ‘ಪ‍್ರಜಾವಾಣಿ’ ಎನ್.ಟಿ.ಸುಬ್ಬಯ್ಯ ಅವರನ್ನು ಸಂಪರ್ಕಿಸಿದಾಗ ಅವರು, ‘ಸುಮಾರು 19 ವರ್ಷಗಳ ಹಿಂದೆ 25 ಏಲಕ್ಕಿ ಗಿಡಗಳನ್ನು ತಂದು ನೆಟ್ಟೆ. ನಂತರ, ಅದು 4 ಸಾವಿರದವರೆಗೂ ಆಯಿತು. ಈಗ 2–3 ಸಾವಿರ ಗಿಡಗಳಿವೆ’ ಎಂದು ಹೇಳಿದರು.
‘ಏಲಕ್ಕಿ ಕೃಷಿಯಲ್ಲಿ ಕಾರ್ಮಿಕರ ಕೂಲಿ ಹಿಂದೆ ₹ 250 ಇತ್ತು, ಈಗ ₹ 600ಕ್ಕೆ ಏರಿಕೆ ಕಂಡಿದೆ. ರಸಗೊಬ್ಬರಗಳ ಬೆಲೆಗಳು ಹಲವು ಪಟ್ಟು ಹೆಚ್ಚಾಗಿವೆ. ಆದರೆ, ಏಲಕ್ಕಿ ಧಾರಣೆ ಮಾತ್ರ ಹಿಂದೆ ಇದ್ದಂತೆ ಕೆ.ಜಿಗೆ ₹ 1,200ರಿಂದ 1,300 ಇದೆ. ಇದರಿಂದ ದೊರೆಯುವ ಲಾಭದ ಪ್ರಮಾಣ ಇಳಿಕೆಯಾಗುತ್ತಿರುವುದಂತೂ ನಿಜ’ ಎಂದರು.
‘ಈಗ ನುರಿತ ಕಾರ್ಮಿಕ ಕೊರತೆ ಎದುರಾಗಿದೆ. ಹಿರಿಯ ಕಾರ್ಮಿಕರಷ್ಟೇ ಏಲಕ್ಕಿ ಕೊಯ್ಯುತ್ತಿದ್ದಾರೆ. ಹೊಸ ತಲೆಮಾರು ಏಲಕ್ಕಿ ಕೊಯ್ಯುವುದರಲ್ಲಿ ಆಸಕ್ತಿ ತೋರಿಲ್ಲ. ಇದರಿಂದಲೂ ಏಲಕ್ಕಿ ಕೃಷಿ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ’ ಎಂದು ಹೇಳಿದರು.
‘ಸಾಮಾನ್ಯವಾಗಿ ಏಲಕ್ಕಿ ಕೊಯ್ಯುವಾಗ ಎದುರಾಗುವ ಪ್ರಮುಖ ಸವಾಲುಗಳಲ್ಲಿ ಗೊಣ್ಣೆಹುಳ, ಅಡಕೆ ಹುಳ, ಜಿಗಣೆ, ಕಪ್ಪೆ ಹಾಗೂ ಹಾವು. ಇವುಗಳಲ್ಲಿ ಗಿಡದ ಹಾಗೆ ಕಾಣುವ ಹಾವುಗಳು ಕಚ್ಚುವುದು ಸಾಮಾನ್ಯ ಎನಿಸಿದೆ’ ಎಂದರು.
ಇವರ ಬಳಿ ಏಲಕ್ಕಿ ಒಣಗಿಸುವ ಯಂತ್ರವೂ ಇದೆ. ಮುಂಚೆ ಇವರು 7ರಿಂದ 8 ಸಾವಿರ ಕೆ.ಜಿ ಏಲಕ್ಕಿಯನ್ನು ಒಣಗಿಸಿಕೊಡುತ್ತಿದ್ದರು. ಈಗ 100 ಕೆ.ಜಿಯಷ್ಟೂ ಒಣಗಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಏಲಕ್ಕಿ ಕೃಷಿ ಜಿಲ್ಲೆಯಲ್ಲಿ ತೆರೆಮರೆಗೆ ಸರಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಟುಂಬದ ಸರ್ವ ಸದಸ್ಯರೂ ತೊಡಗಿಸಿಕೊಂಡರೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಏಲಕ್ಕಿ ಬೆಳೆಯಲ್ಲಿ ಯಶಸ್ಸು ಕಾಣಬಹುದುಎನ್.ಟಿ.ಸುಬ್ಬಯ್ಯ ಏಲಕ್ಕಿ ಬೆಳೆಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.