ADVERTISEMENT

ವಾರ್ಷಿಕೋತ್ಸವದಲ್ಲೊಂದು ಭಾವಯಾನ

ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:05 IST
Last Updated 12 ಜೂನ್ 2024, 6:05 IST
<div class="paragraphs"><p>ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜಿನ ಪ್ರತಿಭೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ ಎಲ್.ಧರ್ಮ ಮಾತನಾಡಿದರು.</p></div>

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜಿನ ಪ್ರತಿಭೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ ಎಲ್.ಧರ್ಮ ಮಾತನಾಡಿದರು.

   

ಮಡಿಕೇರಿ: ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜಿನ ‘ಪ್ರತಿಭೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ’ವು ಅಕ್ಷರಶಃ ನೋಡುಗರನ್ನು ಭಾವಪರವಶಗೊಳಿಸಿತು.

ಒಂದೆಡೆ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಲೇಜಿನ ವಿದ್ಯಾರ್ಥಿಯ ಮರಣಕ್ಕೆ ವಿದ್ಯಾರ್ಥಿಗಳೇ ಸಲ್ಲಿಸಿದ ಸಂಗೀತ ನಮನ ಸೇರಿದಂತೆ ಹಲವು ಸಂದರ್ಭಗಳು ಕಣ್ಣಾಲಿಗಳನ್ನು ತೇವಗೊಳಿಸಿದವು.

ADVERTISEMENT

ಇಂತಹ ಅಪರೂಪದ ಕ್ಷಣಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಭಾವನಾತ್ಮಕ ಮಾತುಗಳು ಮುನ್ನುಡಿ ಬರೆದವು.

ಅವರು ತಮ್ಮ ಭಾಷಣದುದ್ದಕ್ಕೂ ತಾವು ಈ ಕಾಲೇಜಿನಲ್ಲಿ ಓದಿದ, ಕೆಲಸ ಮಾಡಿದ ಕ್ಷಣಗಳನ್ನು ಮೆಲುಕು ಹಾಕುವ ಮೂಲಕ ಗಮನ ಸೆಳೆದರು. ಮಾತ್ರವಲ್ಲ, ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಕಳಚಿಕೊಂಡರೂ ನಾನು ಈ ಕಾಲೇಜಿನೊಂದಿಗೆ ಸಂಬಂಧ ಕಳಚಿಕೊಳ್ಳಲು ಬಯಸುವುದಿಲ್ಲ. ಕೆಲವೇ ವರ್ಷಗಳಲ್ಲಿ ಈ ಕಾಲೇಜು ಕೊಡಗು ವಿಶ್ವವಿದ್ಯಾಲಯದ ಸಂಪೂರ್ಣ ಭಾಗವಾಗಲಿದೆ. ಆಗ ನನಗೆ ಇಲ್ಲಿ ಪಾಠ ಹೇಳಲು ಅವಕಾಶ ಮಾಡಿಕೊಡಬೇಕು’ ಎಂದು ಹೇಳುವ ಮೂಲಕ ಸ್ವತಃ ಭಾವಪರವಶರಾದರು.

‘ಈ ಕಾಲೇಜಿನ, ಈ ಊರಿನ ಋಣವನ್ನು ತೀರಿಸಲು ಆಗುವುದಿಲ್ಲ. ಕೊಡಗು ಹಾಗೂ ಈ ಕಾಲೇಜು ನನಗೆ ಬದುಕನ್ನು ಕೊಟ್ಟಿದೆ’ ಎಂದು ಅವರು ಹೇಳಿದರು.

‘ಈ ಕಾಲೇಜಿನ ಹೆಸರು ಕೇಳುವಾಗಲೇ ನಮಗೊಂದು ಸ್ಪೂರ್ತಿ ಬರುತ್ತದೆ. ಇಂತಹ ಕಾಲೇಜಿನಲ್ಲಿ ಓದಿದ್ದು, ಇಲ್ಲಿ ಕೆಲಸ ಮಾಡಿದ್ದು ನಿಜಕ್ಕೂ ನನಗೆ ಒದಗಿದ ಸೌಭಾಗ್ಯ’ ಎಂದು ಅವರು ನೆನಪಿನ ಸುರುಳಿಗಳನ್ನು ಬಿಚ್ಚಿಟ್ಟರು.

ಇದರ ಜೊತೆಗೆ, ಪ್ರಸ್ತುತ ಯುವಜನರಲ್ಲಿ ಹೆಚ್ಚುತ್ತಿರುವ ಮಾದಕವಸ್ತು ಚಟದ ಕುರಿತೂ ಅವರು ಆತಂಕ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಬೆಳವಣಿಗೆ ಹೊಂದಿರುವ ಪ್ರವಾಸೋದ್ಯಮ ಸಕರಾತ್ಮಕವಾಗಿರಬೇಕೇ ವಿನಹಾ ಅದು ನಕರಾತ್ಮಕವಾಗಿರಬಾರದು ಎಂಬ ಕಿವಿಮಾತುಗಳನ್ನೂ ಹೇಳಿದರು.

ಭಾಷಣ ಕಾರ್ಯಕ್ರಮದ ಯಕ್ಷಲೋಕವನ್ನೇ ವಿದ್ಯಾರ್ಥಿಗಳು ಧರೆಗಿಳಿಸಿದರು. ನೃತ್ಯ, ಸಂಗೀತ, ಹಾಡು, ನಾಟಕ, ಜನಪದ ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಯುವ ಕಲಾವಿದೆ ಲಿಪಿಕಾ ಅವರ ನೃತ್ಯ ಪ್ರದರ್ಶನ ಸೂಜಿಗಲ್ಲಿನಂತೆ ಸೆಳೆಯಿತು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿದ ವಿದ್ಯಾರ್ಥಿ ವೃಂದ ಸಂಭ್ರಮಿಸಿತು. ಸಂಗೀತ ಉಪಕರಣಗಳನ್ನು ವೇದಿಕೆಯ ಮೇಲೇರಿಸಿಕೊಂಡೇ ಹಾಡಿದ್ದು ವಿಶೇಷ ಎನಿಸಿತು.

ಈಚೆಗೆ ಚೇನ್‌ಗೇಟ್‌ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಲೇಜಿನ ವಿದ್ಯಾರ್ಥಿಗೆ ಬ್ರೈಡನ್‌ ಮತ್ತು ತಂಡವು ಸಂಗೀತದ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದು ಪ್ರೇಕ್ಷಕರನ್ನು ಭಾವಪರವಶಗೊಳಿಸಿತು.

ಸುಮಾರು 1,500ಕ್ಕೂ ಅಧಿಕ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಪೋಷಕರು, ಬೋಧಕರು, ಬೋಧಕೇತರರು, ಸಾರ್ವಜನಿಕರು ಸೇರಿದ್ದ ಈ ಬೃಹತ್ ಸಮಾರಂಭದಲ್ಲಿ ಇವರು ಮಾತುಗಳು ಗಮನ ಸೆಳೆದವು.

ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಚಿನ್ನದ ಪದಕವನ್ನು ಎಂ.ಆರ್.ಚಂದನ (2022- 23), ಎಂ.ಎಚ್.ಮೋಹನ್ (2021-20), ಬಿ.ಎ.ಶ್ರುತಿ (2020-21) ಅವರಿಗೆ ಪ್ರದಾನ ಮಾಡಲಾಯಿತು.

ಸಾಹಿತಿ ಭಾರತೀಸುತ ದತ್ತಿ ನಗದು ಪುರಸ್ಕಾರವನ್ನು 2022-23ನೇ ಸಾಲಿಗೆ ಸಿ.ಎಂ.ಸಂಜನಾ (ತೃತೀಯ ಬಿಕಾಂ ಸಿಎ)
ಮೋನಿಶಾ ರೈ (ತೃತೀಯ ಬಿಎಸ್ಸಿ) ಮತ್ತು ಪಿ.ಕೆ.ಕಾವ್ಯ ( ತೃತೀಯ ಬಿ ಎ), 2021-22ನೇ ಸಾಲಿನ ಎಸ್.ಎಂ.ರಚನಾ (ಬಿಎ), ಹಿಬಾತ್ ಉಲ್ ಬಾರಿ ( ಬಿಎಸ್ಸಿ), 2020-21ನೇ ಸಾಲಿನ ಬಿ.ಎಸ್.ಸ್ಪೂರ್ತಿ, ಎಂ.ಬಿ.ಅಪೂರ್ವ ಅವರಿಗೆ ಪ್ರದಾನ ಮಾಡಲಾಯಿತು.

‘ಭೂರಮೆ’ ಎಂಬ ವಾರ್ಷಿಕ ಸಂಚಿಕೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ, ಕುಲಸಚಿವ ಸೀನಪ್ಪ, ಮೈಸೂರಿನ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಬಿ.ರಾಮಚಂದ್ರ, ಚಲನಚಿತ್ರ ನಿರ್ದೇಶಕರಾದ ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ರಾಘವ ಬಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.