ADVERTISEMENT

ಕೊಡಗು | ಜಿಲ್ಲೆಗೆ ಬಂತು ಮತ್ತೊಂದು ಡಯಾಲಿಸಿಸ್‌ ಘಟಕ

ಕುಶಾಲನಗರ ಭಾಗದ ರೋಗಿಗಳಿಗೆ ಆಗಲಿದೆ ಅನುಕೂಲ, ಮತ್ತಷ್ಟು ರೋಗಿಗಳಿಗೆ ಸೇವೆ ವಿಸ್ತರಣೆ

ಕೆ.ಎಸ್.ಗಿರೀಶ್
Published 20 ಜೂನ್ 2024, 7:52 IST
Last Updated 20 ಜೂನ್ 2024, 7:52 IST
ಪ್ರಜಾವಾಣಿಯ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ ಪ್ರಕಟವಾಗಿದ್ದ ಡಯಾಲಿಸಿಸ್‌ಗಾಗಿ ಬೇರೆಡೆ ಹೋಗುವ ಸ್ಥಿತಿ ಎಂಬ ವಿಶೇಷ ವರದಿ
ಪ್ರಜಾವಾಣಿಯ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ ಪ್ರಕಟವಾಗಿದ್ದ ಡಯಾಲಿಸಿಸ್‌ಗಾಗಿ ಬೇರೆಡೆ ಹೋಗುವ ಸ್ಥಿತಿ ಎಂಬ ವಿಶೇಷ ವರದಿ   

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಆರಂಭವಾಗಲಿದೆ. ಕುಶಾಲನಗರ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಘಟಕವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಜೂನ್ 24ರಂದು ಉದ್ಘಾಟಿಸುವ ಮೂಲಕ ಸೇವೆಗೆ ಚಾಲನೆ ನೀಡಲಿದ್ದಾರೆ. ಇದರಿಂದ ಇನ್ನಷ್ಟು ರೋಗಿಗಳಿಗೆ ಅನುಕೂಲವಾಗಲಿದೆ.

ಇದುವರೆಗೂ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಮಾತ್ರವೇ ಸರ್ಕಾರಿ ಡಯಾಲಿಸಿಸ್ ಘಟಕಗಳು ಇದ್ದವು. ಕುಶಾಲನಗರ ತಾಲ್ಲೂಕಿನಿಂದ ಸುಮಾರು 25 ರೋಗಿಗಳು ಮಡಿಕೇರಿಯಲ್ಲಿ ಹಾಗೂ ಸೋಮವಾರಪೇಟೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಇವರಿಗೆಲ್ಲ ಹೊಸ ಘಟಕದಿಂದ ಡಯಾಲಿಸಿಸ್‌ಗಾಗಿ ಪ್ರತಿ ಬಾರಿಯೂ ಸಂಚಾರ ಮಾಡುವುದು ತಪ್ಪಲಿದೆ.

‘ನೆಫ್ರೋ ಪ್ಲಸ್‌’ ಸಂಸ್ಥೆಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಅದರಡಿ ಈ ಘಟಕ ಕಾರ್ಯನಿರ್ವಹಣೆ ಮಾಡಲಿದೆ. ಒಟ್ಟು 2ರಿಂದ 3 ಯಂತ್ರಗಳನ್ನು ಅಳವಡಿಸುವ ಚಿಂತನೆ ಇದೆ. ಒಂದು ವೇಳೆ 3 ಯಂತ್ರಗಳನ್ನು ಅಳವಡಿಸಿದರೆ ನಿತ್ಯ 9 ಮಂದಿಗೆ ಡಯಾಲಿಸಿಸ್‌ ಮಾಡಬಹುದಾಗಿದೆ.

ADVERTISEMENT

ಸದ್ಯ, ಜಿಲ್ಲೆಯಲ್ಲಿ 15 ಮಂದಿ ಡಯಾಲಿಸಿಸ್‌ ಸೇವೆ ಪಡೆದುಕೊಳ್ಳಲು ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ. ಇವರೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕ ಭರಿಸಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಹೊಸ ಘಟಕ ಆರಂಭವಾಗುವುದರಿಂದ ಇವರಿಗೆಲ್ಲ ಅನುಕೂಲವಾಗಲಿದೆ ಎಂದು ವೈದ್ಯರೊಬ್ಬರು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 13 ಯಂತ್ರಗಳು, ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ತಲಾ 6 ಯಂತ್ರಗಳಿವೆ.

ಎಚ್‌ಐವಿ ಪೀಡಿತರಿಗೂ ಡಯಾಲಿಸಿಸ್‌ ಸೇವೆ ಆರಂಭ

ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಎಚ್‌ಐವಿ ಪೀಡಿತರಿಗೆ ಡಯಾಲಿಸಿಸ್ ಸೇವೆ ಇರಲಿಲ್ಲ. ಈಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಎಚ್‌ಐವಿಪೀಡಿತರು ಮಾತ್ರವಲ್ಲ ಎಚ್‌ಬಿಎಸ್‌ಎಜಿ ಹಾಗೂ ಎಚ್‌ಸಿವಿ ರೋಗಿಗಳಿಗೂ ಡಯಾಲಿಸಿಸ್‌ ಸೇವೆ ನೀಡಲು ನಿರ್ಧರಿಸಲಾಗಿದೆ. ಇವರಿಗೆಂದೇ ಪ್ರತ್ಯೇಕ ಹಾಸಿಗೆ, ಯಂತ್ರಗಳನ್ನು ಮೀಸಲಿಡಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ‘ಹೊಸ ಘಟಕ ಕಾರ್ಯಾರಂಭ ಮಾಡುವುದರಿಂದ ರೋಗಿಗಳಿಗೆ ಅನುಕೂಲವಾಗುವುದು ಮಾತ್ರವಲ್ಲ ಹಾಲಿ ಇರುವ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದರು.

ಹೊಸ ಡಯಾಲಿಸಿಸ್‌ ಘಟಕ ತರುವುದನ್ನು ಆದ್ಯತೆ ವಿಷಯವನ್ನಾಗಿ ಪರಿಗಣಿಸಿದ್ದೆ. ಹೊಸ ಘಟಕದಿಂದ ಕುಶಾಲನಗರದ ಭಾಗದ ರೋಗಿಗಳಿಗೆ ಅನುಕೂಲವಾಗಲಿದೆ.
ಡಾ.ಮಂತರ್‌ಗೌಡ, ಶಾಸಕ
ಕುಶಾಲನಗರದಲ್ಲಿ ಹೊಸ ಡಯಾಲಿಸಿಸ್ ಘಟಕವನ್ನು ಆರೋಗ್ಯ ಸಚಿವರು ಸೋಮವಾರ ಉದ್ಘಾಟಿಸಲಿದ್ದು ಇದರಿಂದ ಇನ್ನಷ್ಟು ಹೆಚ್ಚಿನ ರೋಗಿಗಳಿಗೆ ಸೇವೆ ಕಲ್ಪಿಸಬಹುದಾಗಿದೆ.
– ಡಾ.ಕೆ.ಎಂ.ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ

ವಿಶೇಷ ವರದಿ ಪ್ರಕಟಿಸಿದ್ದ ‘ಪ್ರಜಾವಾಣಿ’

ಕೊಡಗು ಜಿಲ್ಲೆಯಲ್ಲಿ ಡಯಾಲಿಸಿಸ್ ಘಟಕದ ಕೊರತೆ ಕಾಡುತ್ತಿರುವ ಕುರಿತು ಇದರಿಂದ ರೋಗಿಗಳು ಪರದಾಡುತ್ತಿರುವ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ‘ಡಯಾಲಿಸಿಸ್‌ಗೆ ಬೇರೆಡೆ ಹೋಗುವ ಸ್ಥಿತಿ’ ಎಂಬ ಶೀರ್ಷಿಕೆಯಡಿ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ವಿಸ್ತೃತ ವರದಿ ಪ್ರಕಟಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.